ಬೆಂಗಳೂರು: ರಾಜ್ಯದ ಸರ್ಕಾರಿ ಪದವಿಪೂರ್ವ ಕಾಲೇಜುಗಳಲ್ಲಿ ಕಲಾ ಮತ್ತು ವಿಜ್ಞಾನ ವಿಭಾಗದ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿರುವುದರಿಂದ ಆ ವಿಷಯಗಳ ಬೋಧನೆ ಮಾಡುವ ಉಪನ್ಯಾಸಕರು ಇಲಾಖೆಗೆ “ಹೊರೆಯಾದಂತಾಗಿದೆ. ರಾಜ್ಯದ 150ಕ್ಕೂ ಅಧಿಕ ಪದವಿ ಪೂರ್ವ ಕಾಲೇಜುಗಳಲ್ಲಿ 1,357 ಉಪನ್ಯಾಸಕರಿಗೆ ಕೆಲಸ ಇಲ್ಲದಂತಾಗಿದ್ದು, ಅವರನ್ನು ಎಲ್ಲಿ ನಿಯೋಜಿಸಬೇಕು ಎಂಬುದು ಇಲಾಖೆಗೆ ತಲೆ ಬಿಸಿಯಾಗಿದೆ.
ಶೂನ್ಯ ದಾಖಲಾತಿ ಅಥವಾ 10ಕ್ಕಿಂತ ಕಡಿಮೆ ಮಕ್ಕಳು ದಾಖಲಾಗಿರುವ ಸರ್ಕಾರಿ ಪಿಯು ಕಾಲೇಜುಗಳನ್ನು ಸ್ಥಳಾಂತರಿಸುವ ಕಾರ್ಯ ನಡೆಯುತ್ತಿದೆ. ಅದೇ ರೀತಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇದ್ದು, ಕಾರ್ಯಭಾರ ಇಲ್ಲದೇ ಇರುವ ಉಪನ್ಯಾಸಕರನ್ನು ಪತ್ತೆ ಹಚ್ಚಿ, ಜಿಲ್ಲೆಯ ಒಳಗೆ ಅಗತ್ಯವಿರುವ ಶಾಲೆಗೆ ನಿಯೋಜಿಸುವ ಕೆಲಸ ಪಿಯು ಇಲಾಖೆಯ ಜಿಲ್ಲಾ ಉಪನಿರ್ದೇಶಕರ ಹಂತದಲ್ಲಿ ನಡೆಯುತ್ತಿದೆ. ಆದರೆ, ಹೆಚ್ಚುವರಿ ಉಪನ್ಯಾಸಕರ ಸಂಖ್ಯೆ
ಹೆಚ್ಚಾಗಿರುವುದರಿಂದ ಆಯಾ ವಿಷಯವಾರು ಉಪನ್ಯಾಸಕರನ್ನು ಅದೇ ಜಿಲ್ಲೆಯೊಳಗೆ ನಿಯೋಜನೆ ಮಾಡುವುದು ಇಲಾಖೆಗೆ ಸವಾಲಾಗಿದೆ.
ರಾಜ್ಯದ ವಿವಿಧ ಶೈಕ್ಷಣಿಕ ಜಿಲ್ಲೆಯ ಸರ್ಕಾರಿ ಪಿಯು ಕಾಲೇಜಿನ ಹೆಚ್ಚುವರಿ ಉಪನ್ಯಾಸಕರ ಪಟ್ಟಿ ಸಿದ್ಧವಾಗಿದೆ. ಹಾಸನದಲ್ಲಿ 145, ದಕ್ಷಿಣ ಕನ್ನಡದಲ್ಲಿ 112, ತುಮಕೂರಿನಲ್ಲಿ 98, ಬಳ್ಳಾರಿಯಲ್ಲಿ 95, ಮೈಸೂರಿನಲ್ಲಿ 88, ಉಡುಪಿಯಲ್ಲಿ 82, ಮಂಡ್ಯದಲ್ಲಿ 73, ಶಿವಮೊಗ್ಗದಲ್ಲಿ 64, ಚಿಕ್ಕಮಗಳೂರಿನಲ್ಲಿ 54, ರಾಯಚೂರಿನಲ್ಲಿ 51, ಚಿಕ್ಕಬಳ್ಳಾಪುರದಲ್ಲಿ 44, ಬಾಗಲಕೋಟೆಯಲ್ಲಿ 42, ಕಲಬುರಗಿಯಲ್ಲಿ 41, ಕೊಪ್ಪಳದಲ್ಲಿ 34, ಹಾವೇರಿಯಲ್ಲಿ 33, ಉತ್ತರ ಕನ್ನಡದಲ್ಲಿ 30 ಹೀಗೆ ವಿವಿಧ ಜಿಲ್ಲೆಯಲ್ಲಿ ಒಟ್ಟು 1357 ಹೆಚ್ಚುವರಿ ಉಪನ್ಯಾಸಕರ ಹುದ್ದೆ ಇದೆ.
ಜಿಲ್ಲಾವಾರು ಪಿಯು ಇಲಾಖೆ ಉಪ ನಿರ್ದೇಶಕರು ಕ್ರೋಡೀಕರಿಸಿರುವ ಮಾಹಿತಿ ಪ್ರಕಾರ, ಕಲಾ ಮತ್ತು ವಿಜ್ಞಾನ ವಿಭಾಗದ ಹೆಚ್ಚುವರಿ ಉಪನ್ಯಾಸಕರ ಸಂಖ್ಯೆ ಹೆಚ್ಚಿದೆ. ವಾಣಿಜ್ಯ ವಿಭಾಗಕ್ಕೆ ವಿದ್ಯಾರ್ಥಿಗಳ ಕೊರತೆಯಿಲ್ಲ. ಹೀಗಾಗಿ, ಹೆಚ್ಚುವರಿ ಶಿಕ್ಷಕರ ಸಂಖ್ಯೆಯೂ ಅಷ್ಟೇನೂ ಇಲ್ಲ.
ವಿದ್ಯಾರ್ಥಿಗಳ ಸಂಖ್ಯೆ ಕುಸಿತ: ಸರ್ಕಾರಿ ಪಿಯು ಕಾಲೇಜಿನ ವಿಜ್ಞಾನ ಮತ್ತು ಕಲಾ ವಿಭಾಗದಲ್ಲಿ ವಿದ್ಯಾರ್ಥಿಗಳ ಪ್ರವೇಶ ಕಡಿಮೆಯಾಗಿದೆ. ಕಳೆದ ನಾಲ್ಕೈದು ವರ್ಷದಿಂದ ಈ ಎರಡೂ ವಿಭಾಗದಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕ್ಷೀಣಿಸುತ್ತಲೇ ಇದೆ. ಕೆಲವೊಂದು ಕಾಲೇಜಿನಲ್ಲಿ ವಿಜ್ಞಾನ ಮತ್ತು ವಾಣಿಜ್ಯ ವಿಭಾಗವನ್ನು ಉಳಿಸಿಕೊಂಡು ಕಲಾ ವಿಭಾಗ ಮುಚ್ಚಿದ್ದಾರೆ. ಕಲಾ ವಿಭಾಗಕ್ಕೆ ಸೇರಿದ ವಿದ್ಯಾರ್ಥಿಗಳನ್ನು ಸಮೀಪದ ಶಾಲೆಗೆ ವರ್ಗಾಯಿಸಿದ್ದಾರೆ. ವಿದ್ಯಾರ್ಥಿಗಳೇ ಇಲ್ಲದ 17 ಕಾಲೇಜುಗಳನ್ನು ಸ್ಥಳಾಂತರಿಸಲಾಗಿದೆ.
ವಾಣಿಜ್ಯಕ್ಕೆ ಬೇಡಿಕೆ: ರಾಜ್ಯಾದ್ಯಂತ ವಾಣಿಜ್ಯ ವಿಭಾಗಕ್ಕೆ ಬೇಡಿಕೆ ಹೆಚ್ಚಾಗಿದ್ದು, ಬಹುತೇಕ ವಿದ್ಯಾರ್ಥಿಗಳು ವಾಣಿಜ್ಯ ವಿಭಾಗವನ್ನೇ ಸೇರಿಕೊಳ್ಳುತ್ತಿದ್ದಾರೆ. ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಧಾರವಾಡ, ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಸೇರಿ ಬಹುತೇಕ ಎಲ್ಲಾ ಜಿಲ್ಲೆಗಳ ಸರ್ಕಾರಿ ಪಿಯು ಕಾಲೇಜಿನಲ್ಲಿ ಈ ವರ್ಷದಿಂದ ವಾಣಿಜ್ಯ ವಿಭಾಗ ತೆರೆಯಲಾಗಿದೆ. ವಾಣಿಜ್ಯ ವಿಭಾಗ ಇಲ್ಲದ ಗ್ರಾಮೀಣ ಪ್ರದೇಶದ ಸರ್ಕಾರಿ ಪಿಯು ಕಾಲೇಜಿನಲ್ಲೂ ವಾಣಿಜ್ಯ ವಿಭಾಗಕ್ಕೆ ಸರ್ಕಾರ ಅನುಮೋದನೆ ನೀಡಿದೆ.
ವಿದ್ಯಾರ್ಥಿಗಳ ಪ್ರವೇಶದ ಆಧಾರದಲ್ಲಿ ಹೆಚ್ಚುವರಿ ಉಪನ್ಯಾಸಕರ ಪಟ್ಟಿ ತಯಾರಿಸಲು ಜಿಲ್ಲಾ ಉಪ ನಿರ್ದೇಶಕರಿಗೆ ಸೂಚಿಸಿದ್ದು, ಹೆಚ್ಚುವರಿ ಉಪನ್ಯಾಸಕರನ್ನು ಜಿಲ್ಲೆಯ ಒಳಗೆ ನಿಯೋಜಿಸಲಾಗುತ್ತದೆ. ಉಪನ್ಯಾಸಕರ ವರ್ಗಾವಣೆ ಸಂಬಂಧ ಸರ್ಕಾರದಿಂದ ಯಾವುದೇ ಸೂಚನೆ
ಬಂದಿಲ್ಲ.
ಸಿ.ಶಿಖಾ, ನಿರ್ದೇಶಕಿ, ಪಿಯು ಇಲಾಖೆ
ರಾಜು ಖಾರ್ವಿ ಕೊಡೇರಿ