Advertisement
ಮುಂದಿನ ಐದು ವರ್ಷಗಳ ಯೋಜನೆ ಯಂತೆ 2021-22ನೇ ಸಾಲಿನಲ್ಲಿ ಪಶ್ಚಿಮಾ ಭಿಮುಖವಾಗಿ ಹರಿಯುವ ನದಿಗೆ 1,348 ಕಿಂಡಿ ಅಣೆಕಟ್ಟುಗಳನ್ನು ನಿರ್ಮಿಸುವ ಬಗ್ಗೆ ಅಂದಿನ ರಾಜ್ಯ ಸರಕಾರ ಘೋಷಿಸಿತ್ತು. ಅದರಂತೆ ಮೊದಲ ಹಂತದ ಕಾಮಗಾರಿ ನಡೆದಿದ್ದರೂ ಎರಡನೇ ಹಂತದ ನಿರ್ಮಾಣ ಕಾಮಗಾರಿಗೆ ಅನುಮೋದನೆಯೇ ಸಿಕ್ಕಿಲ್ಲ.
ಮೊದಲ ಹಂತದ ಕಾಮಗಾರಿಯನ್ನು ಪೂರ್ಣಗೊಳಿಸಿದ ಬಳಿಕವೇ ಎರಡನೇ ಹಂತದ ಅನುದಾನ ಕೋರಿ ಪ್ರಸ್ತಾವನೆ ಸಲ್ಲಿಸುವಂತೆ ಆರ್ಥಿಕ ಇಲಾಖೆಯಿಂದ ಜಿಲ್ಲೆಗಳಿಗೆ ನಿರ್ದೇಶನ ಹೋಗಿದೆ. ಮೊದಲ ಹಂತ ಮುಗಿಯದೆ ಇರುವುದರಿಂದ ಎರಡನೇ ಹಂತದ ಕಾಮಗಾರಿಗೆ ಪ್ರಸ್ತಾವನೆ ಸಲ್ಲಿಸಲು ಸಾಧ್ಯವಾಗುತ್ತಿಲ್ಲ ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು. 322 ಕಿಂಡಿ ಅಣೆಕಟ್ಟು ಪೂರ್ಣ
2021-22ನೇ ಸಾಲಿನಲ್ಲಿ ನಾಲ್ಕು ಜಿಲ್ಲೆಗಳಲ್ಲಿ ಸುಮಾರು 339 ಕಿಂಡಿ ಅಣೆಕಟ್ಟು ನಿರ್ಮಾಣಕ್ಕೆ ಕಾಮಗಾರಿ ಆರಂಭಿಸಲಾಗಿತ್ತು. ಇದರಲ್ಲಿ ಉಡುಪಿ ಮತ್ತು ದ.ಕ. ಜಿಲ್ಲೆಯ 246 ಕಿಂಡಿ ಅಣೆಕಟ್ಟುಗಳು ಒಳಗೊಂಡಿದ್ದವು. ಅವುಗಳಲ್ಲಿ 235 ಕಿಂಡಿ ಅಣೆಕಟ್ಟುಗಳ ಕಾಮಗಾರಿ ಪೂರ್ಣಗೊಂಡಿದೆ. ನಾಲ್ಕು ಜಿಲ್ಲೆಗಳಲ್ಲಿ ಒಟ್ಟು 322 ಕಾಮಗಾರಿ ಅಂತಿಮಗೊಂಡಿದೆ. ಇದಕ್ಕಾಗಿ 513 ಕೋ.ರೂ. ಖರ್ಚು ಮಾಡಲಾಗಿದೆ. ಇನ್ನೂ 10 ಕಾಮಗಾರಿ ಪೂರ್ಣಗೊಳ್ಳಬೇಕಿದೆ. 2022-23ನೇ ಸಾಲಿನಲ್ಲಿ ಉಡುಪಿ ಜಿಲ್ಲೆಗೆ 4 ಹಾಗೂ ದ.ಕ. ಜಿಲ್ಲೆಗೆ 2 ಕಿಂಡಿ ಅಣೆಕಟ್ಟು ಮಂಜೂರಾಗಿತ್ತು. 67 ಕೋ.ರೂ. ವೆಚ್ಚದಲ್ಲಿ ನಿರ್ಮಾಣಕ್ಕೆ ಯೋಜನೆ ರೂಪಿಸಿದ್ದು, ಇದರಲ್ಲಿ 4 ಪೂರ್ಣಗೊಂಡಿವೆ ಹಾಗೂ 2 ಕಾಮಗಾರಿ ಹಂತದಲ್ಲಿವೆ. 2023-24 ಹಾಗೂ 2024-25ನೇ ಸಾಲಿನಲ್ಲಿ ಯಾವುದೇ ಕಿಂಡಿ ಅಣೆಕಟ್ಟು ನಿರ್ಮಾಣ ಆಗಿಲ್ಲ.
Related Articles
ಅಂತರ್ಜಲ ವೃದ್ಧಿಯ ಜತೆಗೆ ಕೃಷಿ ಭೂಮಿಗೆ ನೀರುಣಿಸಲು ಪೂರಕವಾಗುವಂತೆ ಈ ಯೋಜನೆ ಸಿದ್ಧಪಡಿಸಲಾಗಿತ್ತು. ಅದರಂತೆ 339 ಕಿಂಡಿ ಅಣೆಕಟ್ಟುಗಳಿಂದ 14,939 ಹೆಕ್ಟೇರ್ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಸಿಗಬಹುದು ಎಂದು ಯೋಜಿ ಸಲಾಗಿದ್ದು, 14,408 ಹೆಕ್ಟೇರ್ ಪ್ರದೇಶಕ್ಕೆ ನೀರು ಪೂರೈಸಲು ಈ ಅಣೆಕಟ್ಟುಗಳು ಶಕ್ತವಾಗಿದೆ. 839.71 ಎಂಸಿಎಫ್ಟಿ ನೀರು ಸಂಗ್ರಹ ಸಾಮರ್ಥ್ಯವನ್ನು ಈ ಅಣೆಕಟ್ಟುಗಳಿಂದ ಅಂದಾಜಿಸಲಾಗಿತ್ತು. ಅಂತಿಮವಾಗಿ 826.20 ಎಂಸಿಎಫ್ಟಿ ನೀರು ಸಂಗ್ರಹ ಸಾಧ್ಯವಾಗಿದೆ. ಮಳೆಗಾಲ ಕಳೆದು ಅಣೆಕಟ್ಟು ಗಳಿಗೆ ಹಲಗೆ ಹಾಕಿದ ಮೇಲಿನ ಅಂದಾಜು ಲೆಕ್ಕಾಚಾರ .
Advertisement
ಪ್ರಸ್ತುತ ವರ್ಷದಲ್ಲಿ ಲಭ್ಯವಾಗುವ ಅನುದಾನ ಆಧಾರಿಸಿ ಎರಡನೇ ಹಂತದ ಕಾಮಗಾರಿಗಳನ್ನು ಕೈಗೆತ್ತಿ ಕೊಳ್ಳುವ ಸಂಬಂಧ ಪರಿಶೀಲನೆ ನಡೆಸಲಾಗುವುದು.-ಎನ್.ಎಸ್.ಬೋಸರಾಜು,
ರಾಜ್ಯ ಸಣ್ಣ ನೀರಾವರಿ ಸಚಿವರು.