ಅಜೆಕಾರು: ಮರ್ಣೆ ಗ್ರಾ.ಪಂ. ವ್ಯಾಪ್ತಿಯ ಎಣ್ಣೆ ಹೊಳೆಯಲ್ಲಿ 2 ದಿನ ನಡೆದ ಆಧಾರ್ ತಿದ್ದುಪಡಿ ಅಭಿಯಾನ ದಲ್ಲಿ ಬೃಹತ್ ಪ್ರಮಾಣದಲ್ಲಿ ತಿದ್ದುಪಡಿ ನಡೆದಿದೆ. ಅಂಚೆ ಇಲಾಖೆ, ಮರ್ಣೆ ಗ್ರಾ.ಪಂ., ಗಣೇಶೋತ್ಸವ ಸಮಿತಿ ಇದರ ಆಶ್ರಯದಲ್ಲಿ ನಡೆದ ತಿದ್ದುಪಡಿ ಕಾರ್ಯಕ್ರಮದಲ್ಲಿ ಪ್ರಥಮ ದಿನ 785 ತಿದ್ದುಪಡಿ ನಡೆದರೆ 2ನೇ ದಿನ 529 ಆಧಾರ್ ತಿದ್ದುಪಡಿ ನಡೆದಿದ್ದು, ಒಟ್ಟು ಎರಡು ದಿನಗಳಲ್ಲಿ ಸುಮಾರು 1,314 ತಿದ್ದುಪಡಿಗಳು ನಡೆದಿವೆ.
ಬ್ಯಾಂಕ್, ಅಂಚೆ ಕಚೇರಿ, ಇತರ ಕೇಂದ್ರಗಳಲ್ಲಿ ಗರಿಷ್ಠ ಎಂದರೆ 50 ತಿದ್ದುಪಡಿ ನಡೆಯುತ್ತಿದ್ದು, ಪ್ರತಿದಿನ ಸಾವಿರಾರು ಮಂದಿ ಆಧಾರ್ ತಿದ್ದುಪಡಿಗಾಗಿ ಕಾಯಬೇಕಿತ್ತು. ಆದರೆ ಎಣ್ಣೆಹೊಳೆಯಲ್ಲಿ ಬೃಹತ್ ಅಭಿಯಾನ ನಡೆಯುವ ಮೂಲಕ ತಿದ್ದುಪಡಿಗೆ ಅವಕಾಶ ಕಲ್ಪಿಸಲಾಗಿತ್ತು. ಸ್ಥಳೀಯರಿಂದ ಉತ್ತಮ ಸ್ಪಂದನೆ ದೊರೆತಿದೆ.
ರಾತ್ರಿ 11ರ ವರೆಗೂ ತಿದ್ದುಪಡಿಯಲ್ಲಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಭಾಗವಹಿಸಿದ್ದಾರೆ. ಈ ಸಂದರ್ಭ 100ಕ್ಕೂ ಅಧಿಕ ಅಂಚೆ ಖಾತೆಗಳನ್ನು ತೆರೆಯಲಾಗಿದ್ದು, ಕೇಂದ್ರ ಸರಕಾರ ಅಂಚೆ ಇಲಾಖೆ ಮೂಲಕ ವಿತರಿಸುವ ಗಂಗಾ ಜಲವನ್ನು ಸುಮಾರು 50 ಜನಕ್ಕೆ ವಿತರಿಸಲಾಗಿದೆ. ಅಲ್ಲದೇ ಸುಕನ್ಯಾ ಸಮೃದ್ಧಿ ವಿಮಾ ಯೋಜನೆಗಳು ದಾಖಲೆ ಪ್ರಮಾಣದಲ್ಲಿ ನಡೆದಿವೆ. ಈ ಹಿಂದೆ ದಿನವೊಂದರಲ್ಲಿ ಕುಂದಾಪುರದ ವಂಡ್ಸೆ ಗ್ರಾ.ಪಂ. ವ್ಯಾಪ್ತಿಯಲ್ಲಿ 577 ತಿದ್ದುಪಡಿ ನಡೆದಿತ್ತು.