Advertisement

ರಾಜ್ಯದಲ್ಲಿ 1,302 ಮೆ.ವ್ಯಾ. ಸೋಲಾರ್‌ ಘಟಕ

11:33 PM Feb 16, 2023 | Team Udayavani |

ಉಡುಪಿ: ಕೇಂದ್ರ ಸರಕಾರದ ಪ್ರಧಾನ ಮಂತ್ರಿ-ಕಿಸಾನ್‌ ಉರ್ಜಾ ಸುರಕ್ಷ ಉತ್ಥಾನ ಮಹಾಭಿಯಾನ  (ಪಿಎಂ-ಕುಸುಮ್‌) ಯೋಜನೆಯಡಿ ರಾಜ್ಯದಲ್ಲಿ 1,302 ಮೆಗಾ ವ್ಯಾಟ್‌ ಸಾಮರ್ಥ್ಯದ ಸೋಲಾರ್‌ ಘಟಕಗಳು ತಲೆಎತ್ತಲಿವೆ.

Advertisement

ಬೆಂಗಳೂರು ವಿದ್ಯುತ್‌ ಸರಬರಾಜು ಕಂಪೆನಿ (ಬೆಸ್ಕಾಂ), ಹುಬ್ಬಳ್ಳಿ ವಿದ್ಯುತ್‌ ಸರಬರಾಜು ಕಂಪೆನಿ (ಹೆಸ್ಕಾಂ), ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ನಿಗಮ (ಸೆಸ್ಕ್) ವ್ಯಾಪ್ತಿಯಲ್ಲಿ ನಿರ್ದಿಷ್ಟ ಪ್ರಮಾಣದಲ್ಲಿ ಸೋಲಾರ್‌ ಘಟಕ ಅನುಷ್ಠಾನಕ್ಕೆ ಕೇಂದ್ರ ಸರಕಾರದಿಂದ ಈಗಾಗಲೇ ಅನುಮೋದನೆಯೂ ಸಿಕ್ಕಿದೆ. ಮಂಗಳೂರು ವಿದ್ಯುತ್‌ ಸರಬರಾಜು ಕಂಪೆನಿ (ಮೆಸ್ಕಾಂ), ಗುಲ್ಬರ್ಗಾ ವಿದ್ಯುತ್‌ ಸರಬರಾಜು ಕಂಪೆನಿ (ಜೆಸ್ಕಾಂ)ಗೆ ಯಾವುದೇ ಹಂಚಿಕೆಯಾಗಿಲ್ಲ.

ನವೀಕರಿಸಬಹುದಾದ ಇಂಧನ ಸೇವಾ ಸಂಸ್ಥೆ (ಆರ್‌ಇಎಸ್‌ಇಒ) ಮಾದರಿಯಲ್ಲಿ ಹೆಸ್ಕಾಂ ಮತ್ತು ಸೆಸ್ಕ್ ವ್ಯಾಪ್ತಿಯಲ್ಲಿ ಯೋಜನೆ ಅನುಷ್ಠಾನಕ್ಕೆ ಕ್ರೆಡಲ್‌ ಹಾಗೂ ಬೆಸ್ಕಾಂ ವ್ಯಾಪ್ತಿಯಲ್ಲಿ ಬೆಸ್ಕಾಂ ನೋಡಲ್‌ ಸಂಸ್ಥೆಯಾಗಿ ನೇಮಿಸಲಾಗಿದೆ.

ಪ್ರತ್ಯೇಕ ಫೀಡರ್‌
ಕೃಷಿ ಪಂಪ್‌ಸೆಟ್‌ಗಳಿಗೆ ವಿದ್ಯುತ್‌ ಪೂರೈಕೆಗೆ ಪ್ರತ್ಯೇಕ ಫೀಡರ್‌ ಸ್ಥಾಪನೆ ಮಾಡಲಾಗುತ್ತಿದೆ. ಇದಕ್ಕಾಗಿ ಕೋಟ್ಯಂತರ ರೂ.ಗಳನ್ನು ಕೇಂದ್ರ ಹಾಗೂ ರಾಜ್ಯ ಸರಕಾರ ವ್ಯಯಿಸಲಿವೆ. ಬೆಸ್ಕಾಂ ವ್ಯಾಪ್ತಿಯಲ್ಲಿ 695, ಸೆಸ್ಕ್ ವ್ಯಾಪ್ತಿಯಲ್ಲಿ 41 ಹಾಗೂ ಹೆಸ್ಕಾಂ ವ್ಯಾಪ್ತಿಯಲ್ಲಿ 180 ಫೀಡರ್‌ಗಳನ್ನು ನಿರ್ಮಿಸಲಾಗುತ್ತದೆ. ಸುಮಾರು 4,557 ಕೋ.ರೂ. ವೆಚ್ಚದಲ್ಲಿ ಈ ಯೋಜನೆಯನ್ನು ಅನುಷ್ಠಾನ ಮಾಡಲಾಗುತ್ತಿದೆ. ಕೇಂದ್ರ ಸರಕಾರದಿಂದ ಶೇ. 30ರಷ್ಟು ಅಂದರೆ ಸುಮಾರು 1361 ಕೋ.ರೂ.ಗಳಷ್ಟು ಬರಲಿದೆ. ಉಳಿದ ಹಣವನ್ನು ರಾಜ್ಯ ಸರಕಾರವೇ ಭರಿಸಲಿದೆ.

ಪಂಪ್‌ಸೆಟ್‌ಗೆ ಸೌರಶಕ್ತಿ
ಪಿಎಂ ಕುಸುಮ್‌ ಯೋಜನೆಯಡಿ ಕೇಂದ್ರ ಸರಕಾರದಿಂದ 7.5 ಎಚ್‌.ಪಿ. ಸಾಮಥ್ಯದ ಸೌರ ಪಂಪ್‌ಸೆಟ್‌ಗೆ ಶೇ. 30ರಷ್ಟು ಸಹಾಯಧನ ನೀಡಲಾಗುತ್ತದೆ. ಹಾಗೆಯೇ ರಾಜ್ಯ ಸರಕಾರದಿಂದ ಸಾಮಾನ್ಯ ವರ್ಗದ ಫ‌ಲಾನುಭವಿಗಳಿಗೆ ಶೇ. 30, ಎಸ್ಸಿ, ಎಸ್ಟಿ ಫ‌ಲಾನುಭವಿಗಳಿಗೆ ಶೇ. 50ರಷ್ಟು ಸಹಾಯಧನ ನೀಡಲಿದೆ. ಈಗಾಗಲೇ 1,532 ಅರ್ಜಿಗಳು ಆನ್‌ಲೈನ್‌ ಮೂಲಕ ನೋಂದಣಿಯಾಗಿವೆ. ಆದರೆ ಸರಕಾರದಿಂದ ಇನ್ನೂ ಕಾರ್ಯಾದೇಶ ನೀಡಿಲ್ಲ.

Advertisement

ಈಗಾಗಲೇ ಗ್ರೀಡ್‌ ವ್ಯವಸ್ಥೆಯಿಂದ ವಿದ್ಯುತ್‌ ಸರಬರಾಜು ಹೊಂದಿದ ಕೃಷಿ ಪಂಪ್‌ಸೆಟ್‌ಗಳಿಗೆ ಸೌರ ಪಂಪ್‌ಸೆಟ್‌ ಅಳವಡಿಸಲು ಯೋಜನೆಯಲ್ಲಿ ಅವಕಾಶವಿಲ್ಲ. ಇದು ಕೇವಲ ಜಾಲಮುಕ್ತ (ಗ್ರೀಡ್‌ ಮುಕ್ತ) ಪಂಪ್‌ಸೆಟ್‌ಗಳಿಗೆ ಮಾತ್ರ ಸೀಮಿತವಾಗಿದೆ.

ಕೃಷಿ ಪಂಪ್‌ಸೆಟ್‌ ಮಾಹಿತಿ
ಬೆಸ್ಕಾಂಗೆ 2,62,331, ಹೆಸ್ಕಾಂಗೆ 65,000 ಹಾಗೂ ಸೆಸ್ಕ್ಗೆ 10,000 ಸೇರಿದಂತೆ ಒಟ್ಟು 3,37,331 ಕೃಷಿ ಪಂಪ್‌ಸೆಟ್‌ ಹಂಚಿಕೆ ಮಾಡಲಾಗಿದೆ. ರಾಜ್ಯದಲ್ಲಿ 33,11,346 ಕೃಷಿ ಪಂಪ್‌ಸೆಟ್‌ಗಳಿವೆ. ಅದರಲ್ಲಿ ಮಂಗಳೂರು ವಿದ್ಯುತ್‌ ಸರಬರಾಜು ಕಂಪೆನಿ (ಮೆಸ್ಕಾಂ) ವ್ಯಾಪ್ತಿಯ ದ.ಕ.ದಲ್ಲಿ 1,27,829, ಉಡುಪಿಯಲ್ಲಿ 81,520, ಶಿವಮೊಗ್ಗದಲ್ಲಿ 1,05,750 ಹಾಗೂ ಚಿಕ್ಕಮಗಳೂರಿನಲ್ಲಿ 78,993 ಪಂಪ್‌ಸೆಟ್‌ಗಳಿಗೆ ಸೌರಪಂಪ್‌ಸೆಟ್‌ನಲ್ಲಿ ಮೆಸ್ಕಾಂಗೆ ಸದ್ಯ ಹಂಚಿಕೆಯಾಗಿಲ್ಲ. ಮುಂದಿನ ಹಂತದಲ್ಲಿ ಹಂಚಿಕೆಯಾಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next