ಬರ್ಲಿನ್: ಜರ್ಮನಿಯ ಡಸ್ಸೆಲ್ ಡೋರ್ಫ್ ನಲ್ಲಿ ಎರಡನೇ ಜಾಗತಿಕ ಯುದ್ಧದ ಕಾಲದ ಬೃಹತ್ ಗಾತ್ರದ ಬಾಂಬ್ ಪತ್ತೆಯಾದ ಹಿನ್ನೆಲೆಯಲ್ಲಿ ಸುತ್ತಮುತ್ತ ಪ್ರದೇಶದಲ್ಲಿನ 13 ಸಾವಿರ ನಿವಾಸಿಗಳು ಸ್ಥಳಾಂತರಗೊಳ್ಳುವಂತೆ ಅಧಿಕಾರಿಗಳು ಸೂಚನೆ ನೀಡಿರುವ ಘಟನೆ ವರದಿಯಾಗಿದೆ.
ಇದನ್ನೂ ಓದಿ:N. Chaluvaraya Swamy ವಿರುದ್ಧ ಲಂಚದ ಪತ್ರ ಪ್ರಕರಣ: ಸಿಐಡಿ ತನಿಖೆಗೆ ಒಪ್ಪಿಸಿದ ಸರ್ಕಾರ
ಜರ್ಮನ್ ಸುದ್ದಿವಾಹಿನಿ ಡ್ಯೂಷ್ ವೆಲ್ಲೆ (ಡಿಬ್ಲ್ಯು) ವರದಿ ಪ್ರಕಾರ, ಪತ್ತೆಯಾದ ಎರಡನೇ ವಿಶ್ವಯುದ್ಧ ಕಾಲದ ಬಾಂಬ್ ನಿಷ್ಕ್ರಿಯಗೊಳಿಸಲು ಪೊಲೀಸರು ಮತ್ತು ಬಾಂಬ್ ನಿಷ್ಕ್ರಿಯ ದಳ ಸ್ಥಳಕ್ಕೆ ಆಗಮಿಸಿರುವುದಾಗಿ ವಿವರಿಸಿದೆ.
ಆಗಸ್ಟ್ 7ರಂದು ಝೂ ಸಿಟಿ ಸಮೀಪ ಕಾರ್ಯನಿರ್ವಹಿಸುತ್ತಿದ್ದ ವೇಳೆ ಒಂದು ಟನ್ ತೂಕದ ಬಾಂಬ್ ಪತ್ತೆಯಾಗಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಎರಡು ಜಾಗತಿಕ ಯುದ್ಧದ ಸಂದರ್ಭಗಳಲ್ಲಿ ಜರ್ಮನಿಯಲ್ಲಿ ಹೂಳಲಾದ ಸಾವಿರಾರು ಬಾಂಬ್ ಗಳು ಕಾಲ, ಕಾಲಕ್ಕೆ ಪತ್ತೆಯಾಗುವುದು ಮುಂದುವರಿಯುತ್ತಲೇ ಇದೆ ಎಂದು ವರದಿ ಹೇಳಿದೆ.
ಬಾಂಬ್ ಪತ್ತೆಯಾದ 500 ಮೀಟರ್ ಸುತ್ತಮುತ್ತಲಿನ ನಿವಾಸಿಗಳು ಕೂಡಲೇ ಪ್ರದೇಶವನ್ನು ತೊರೆಯಬೇಕೆಂದು ಅಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಅಲ್ಲದೇ ಜನರು ಸ್ಥಳಾಂತರಗೊಳ್ಳಲಿರುವ ಪ್ರದೇಶದ ರಸ್ತೆ ಸಂಪರ್ಕವನ್ನು ಕೂಡಾ ಬಂದ್ ಮಾಡಿರುವುದಾಗಿ ವರದಿ ವಿವರಿಸಿದೆ.
ಭೀತಿಗೊಳಗಾಗಿರುವ ನಿವಾಸಿಗಳು ತಮ್ಮ ಕುಟುಂಬ ಸದಸ್ಯರೊಂದಿಗೆ ಮನೆಗಳನ್ನು ತೊರೆದು ಸ್ಥಳಾಂತರಗೊಳ್ಳುತ್ತಿದ್ದಾರೆಂದು ವರದಿ ತಿಳಿಸಿದೆ. ಮತ್ತೊಂದೆಡೆ ಬಾಂಬ್ ನಿಷ್ಕ್ರಿಯಗೊಳಿಸುವ ಕಾರ್ಯಾಚರಣೆ ಪೂರ್ಣಗೊಂಡಿದೆಯೇ ಅಥವಾ ಇಲ್ಲವೇ ಎಂಬುದು ಖಚಿತವಾಗಿಲ್ಲ.
2017ರಲ್ಲಿಯೂ ಫ್ರಾಂಕ್ ಫರ್ಟ್ ನಲ್ಲಿ 1.4 ಟನ್ ಗಳಷ್ಟು ತೂಕದ ಬಾಂಬ್ ಪತ್ತೆಯಾಗಿದ್ದು, ಈ ಸಂದರ್ಭದಲ್ಲಿ 65,000 ಜನರನ್ನು ಸ್ಥಳಾಂತರಿಸಲಾಗಿತ್ತು. 2021ರ ಡಿಸೆಂಬರ್ ನಲ್ಲಿ ಮ್ಯೂನಿಚ್ ಸ್ಟೇಷನ್ ಸಮೀಪ ಹಳೆಯ ಬಾಂಬ್ ಸ್ಫೋಟಗೊಂಡು ಹಲವಾರು ಮಂದಿ ಗಾಯಗೊಂಡಿದ್ದು, ರೈಲ್ವೆ ಹಳಿ ಛಿದ್ರವಾಗಿ ಹೋಗಿರುವ ಘಟನೆ ನಡೆದಿತ್ತು.