ಬೆಂಗಳೂರು: ರಾಜ್ಯಸರ್ಕಾರ ಸುಮಾರು 1300 ಎಕರೆ ಜಮೀನು ಡಿನೋಟಿಫಿಕೇಶನ್ ಮಾಡಿದೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಪರ ವಕೀಲರು ಹೈಕೋರ್ಟ್‌ಗೆ ತಿಳಿಸಿದ್ದಾರೆ.
ಡಾ.ಶಿವರಾಮ ಕಾರಂತ ಬಡಾವಣೆ ಅಕ್ರಮ ಡಿನೋಟಿಫಿಕೇಶನ್ ಸಂಬಂಧ ಎಸಿಬಿ ದಾಖಲಿಸಿರುವ ಎಫ್ಐಆರ್ ರದ್ದುಕೋರಿ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಸಲ್ಲಿಸಿರುವ ಅರ್ಜಿಯ ಮಂಗಳವಾರದ ವಿಚಾರಣೆ ವೇಳೆ ಹಿರಿಯ ವಕೀಲ ಸಿ.ವಿ ನಾಗೇಶ್, ನ್ಯಾಯಪೀಠಕ್ಕೆ ಈ ಹೇಳಿಕೆ ನೀಡಿದರು.
ಯಡಿಯೂರಪ್ಪ ಪರ ವಾದಮಂಡಿಸಿದ ಹಿರಿಯ ವಕೀಲ ಸಿ.ವಿ ನಾಗೇಶ್, ಅರ್ಜಿದಾರರ ವಿರುದ್ಧ 250 ಎಕರೆ ಡಿನೋಟಿಫಿಕೇಶನ್ ಮಾಡಿದೆ ಎಂಬ ಆರೋಪವಿದೆ. ಆದರೆ , ಪ್ರಸ್ತುತ ರಾಜ್ಯಸರ್ಕಾರದ ಅವಧಿಯಲ್ಲಿಯೇ ಸುಮಾರು 1300 ಎಕರೆ ಡಿನೋಟಿಫಿಕೇಶನ್ ಮಾಡಲಾಗಿದೆ. ಈ ಕುರಿತ ದಾಖಲೆಗಳನ್ನು ಸಲ್ಲಿಸಲಾಗುವುದು ಎಂದು ನ್ಯಾಯಮೂರ್ತಿ ಅರವಿಂದಕುಮಾರ್ ಅವರಿದ್ದ ಏಕಸದಸ್ಯ ಪೀಠಕ್ಕೆ ತಿಳಿಸಿದರು.
ಇದಕ್ಕೂ ಮುನ್ನ ಯಡಿಯೂರಪ್ಪ ವಿರುದ್ಧದ ತನಿಖೆಗೆ ತಡೆಯಾಜ್ಞೆ ನೀಡಬಾರದು ಎಂದು ಕೋರಿದ್ದ ಎಸಿಬಿಯ ವಾದಕ್ಕೆ ಪ್ರತಿವಾದ ಮಂಡಿಸಿದ ಸಿ.ವಿ ನಾಗೇಶ್, ಅರ್ಜಿದಾರರ ವಿರುದ್ಧ ಎಸಿಬಿ ನಡೆಸಿರುವ ಪ್ರಾಥಮಿಕ ತನಿಖೆಯಲ್ಲಿ ಅವರ ವಿರುದ್ಧ ಪ್ರಬಲ ಸಾಕ್ಷ್ಯಾಧಾರಗಳು ಲಭ್ಯವಾಗಿಲ್ಲ. ಎಫ್ಐಆರ್ ರದ್ದುಕೋರಿರುವ ರಿಟ್ ಅರ್ಜಿ ಊರ್ಜಿತವಾಗಲಿದೆ ಎಂದು ಸುಪ್ರೀಂಕೋರ್ಟ್‌ನ ಕೆಲ ತೀರ್ಪುಗಳನ್ನು ಉಲ್ಲೇಖೀಸಿದರು. ಇಂತಹ ಪ್ರಕರಣಗಳಲ್ಲಿ ಆರೋಪಿತರ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಿ ಅಧೀನ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದ್ದರೆ ಮಾತ್ರ ತಡೆಯಾಜ್ಞೆ ನೀಡಲು ನಿರ್ಬಂಧವಿದೆ. ಆದರೆ, ಈ ಪ್ರಕರಣ ಇನ್ನೂ ಪೊಲೀಸ್ ತನಿಖಾ ಹಂತದಲ್ಲಿದೆ. ಹೀಗಾಗಿ ಪ್ರಕರಣದ ತನಿಖೆಗೆ ತಡೆಯಾಜ್ಞೆ ನೀಡುವ ಅಧಿಕಾರ ಹೈಕೋರ್ಟ್‌ಗಿದೆ. ಅರ್ಜಿದಾರರ ವಿರುದ್ಧದ ಎಸಿಬಿ ತನಿಖೆಗೆ ತಡೆಯಾಜ್ಞೆ ನೀಡುವಂತೆ ಕೋರಿದರು.ಈ ವಾದ ಆಲಿಸಿದ ನ್ಯಾಯಪೀಠ ವಿಚಾರಣೆಯನ್ನು ಬುಧವಾರಕ್ಕೆ (ಸೆ.13)ಮುಂದೂಡಿತು.