ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆಸಿದ ಹಿಂಸಾಚಾರ ಪ್ರಕರಣದಲ್ಲಿ ಶಾಮೀಲಾಗಿದ್ದ 130 ಮಂದಿಗೆ ಉತ್ತರಪ್ರದೇಶ ಜಿಲ್ಲಾಡಳಿತ ನೋಟಿಸ್ ಜಾರಿ ಮಾಡಿದ್ದು, ಪ್ರತಿಭಟನೆ ಹೆಸರಲ್ಲಿ ಹಿಂಸಾಚಾರ ನಡೆಸಿ ಸಾರ್ವಜನಿಕ ಆಸ್ತಿಯನ್ನು ಹಾನಿ ಮಾಡಿದ್ದಕ್ಕೆ 50 ಲಕ್ಷ ರೂಪಾಯಿ ಪಾವತಿಸುವಂತೆ ಸೂಚನೆ ನೀಡಿದೆ ಎಂದು ವರದಿ ತಿಳಿಸಿದೆ.
ಉತ್ತರಪ್ರದೇಶದ ರಾಂಪುರದ 28 ಮಂದಿ, ಸಂಭಾಲ್ ನ 26, ಬಿಜ್ನೋರ್ ನ 43, ಗೋರಖ್ ಪುರದ 33 ಮಂದಿಗೆ ಜಿಲ್ಲಾಡಳಿತ ಬುಧವಾರ ನೋಟಿಸ್ ಜಾರಿ ಮಾಡಿ, ತಮ್ಮ ಆಸ್ತಿ ಜಪ್ತಿಯನ್ನು ತಪ್ಪಿಸಿಕೊಳ್ಳಬೇಕಾದಲ್ಲಿ 50 ಲಕ್ಷ ರೂಪಾಯಿ ಪಾವತಿಸುವಂತೆ ತಿಳಿಸಿದೆ.
ಸಿಎಎ ವಿರೋಧಿ ಹಿಂಸಾಚಾರದಲ್ಲಿ ರಾಂಪುರದಲ್ಲಿ 14.8 ಲಕ್ಷ ಆಸ್ತಿ ನಾಶ, ಸಂಭಾಲ್ ನಲ್ಲಿ 15 ಲಕ್ಷ, ಬಿಜ್ನೋರ್ ನಲ್ಲಿ 19.7 ಲಕ್ಷ ರೂಪಾಯಿಯಷ್ಟು ಆಸ್ತಿ ನಷ್ಟವಾಗಿತ್ತು. ಹಿಂಸಾಚಾರದಲ್ಲಿ ಶಾಮೀಲಾಗಿ ಸಾರ್ವಜನಿಕ ಆಸ್ತಿಯನ್ನು ಹಾನಿಗೊಳಿಸಿದವರ ಸಿಸಿಟಿವಿ ವಿಡಿಯೋ ಫೂಟೇಜ್ ಸಿಕ್ಕಿದ್ದು, ಅವರನ್ನು ಪತ್ತೆಹಚ್ಚಿ ನೋಟಿಸ್ ಜಾರಿ ಮಾಡಲಾಗಿದೆ ಎಂದು ರಾಂಪುರ್ ಜಿಲ್ಲಾಧಿಕಾರಿ ಆಂಜನೇಯ ಕುಮಾರ್ ಸಿಂಗ್ ತಿಳಿಸಿದ್ದಾರೆ.
ರಾಂಪುರದಲ್ಲಿ ನಡೆದ ಹಿಂಸಾಚಾರದಲ್ಲಿ ಪೊಲೀಸ್ ವಾಹನಗಳು, ವೈಯರ್ ಲೆಸ್ ಸೆಟ್, ಲೌಡ್ ಸ್ಪೀಕರ್, ಮೂರು ಹೆಲ್ಮೆಟ್ ಅನ್ನು ನಾಶಮಾಡಿದ್ದು, ಒಟ್ಟು 14.86 ಲಕ್ಷ ರೂಪಾಯಿ ನಷ್ಟವಾಗಿರುವುದಾಗಿ ವಿವರಿಸಿದ್ದಾರೆ.
ಸಂಭಾಲ್ ಡಿಸ್ಟ್ರಿಕ್ಟ್ ಮ್ಯಾಜಿಸ್ಟ್ರೇಟ್ ಡಿಎಂ ಅವಿನಾಶ್ ಕೃಷ್ಣ ಸಿಂಗ್, ಬಿಜ್ನೋರ್ ಡಿಸ್ಟ್ರಿಕ್ಟ್ ಮ್ಯಾಜಿಸ್ಟ್ರೇಟ್ ರಮಾಕಾಂತ್ ಪಾಂಡೆ, ಗೋರಖ್ ಪುರ್ ಡಿಸ್ಟ್ರಿಕ್ಟ್ ಮ್ಯಾಜಿಸ್ಟ್ರೇಟ್ ವಿಪಿ ಸಿಂಗ್ ನಷ್ಟದ ಮಾಹಿತಿ ನೀಡಿ, ನೋಟಿಸ್ ಜಾರಿಗೊಳಿಸಿರುವುದಾಗಿ ತಿಳಿಸಿದ್ದಾರೆ.