ದಾವಣಗೆರೆ: ಮೊರಾರ್ಜಿ ವಸತಿ ಶಾಲೆಯ ಆರನೇ ತರಗತಿ ವಿದ್ಯಾರ್ಥಿಯೊಬ್ಬ ಅನುಮಾನಸ್ಪದವಾಗಿ ಸಾವನ್ನಪ್ಪಿರುವ ಘಟನೆ ಜಗಳೂರು ತಾಲೂಕಿನ ಮೆದಗಿನಕೆರೆ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.
ಮೆದಗಿನಕೆರೆ ಸಮೀಪದ ಮೊರಾರ್ಜಿ ವಸತಿ ಶಾಲೆಯ 6ನೇ ತರಗತಿಯ ಸುನಿಲ್ (13) ಮೃತಪಟ್ಟಿರುವ ವಿದ್ಯಾರ್ಥಿ. ಸುನಿಲ್ ಸಾವು ಅನುಮಾನಸ್ಪದವಾಗಿದೆ ಎಂದು ಪೋಷಕರು ಬುಧವಾರ ಮೊರಾರ್ಜಿ ವಸತಿ ಶಾಲೆಯ ಮುಂದೆ ಪ್ರತಿಭಟನೆ ನಡೆಸಿದರು.
ಮೃತ ವಿದ್ಯಾರ್ಥಿ ಪೋಷಕರು ಮತ್ತು ಸಂಬಂಧಿಕರು ಶಾಲೆಯ ಪ್ರಾಂಶುಪಾಲರು , ನಿಲಯ ಮೇಲ್ವಿಚಾರಕನ ವಿರುದ್ದ ಹರಿಹಾಯ್ದರು. ಈ ವೇಳೆ ಕಾಂಗ್ರೆಸ್ ಮುಖಂಡ ದೇವೆಂದ್ರಪ್ಪ ಪರಿಸ್ಥಿತಿಯನ್ನು ತಿಳಿಗೊಳಿಸಿದರು.
6ನೇ ತರಗತಿಯ ಸುನಿಲ್ ಆ.23 ರ ಸಂಜೆ ಶಾಲೆಯ ಶೌಚಾಲಯದ ಕೊಠಡಿಯಲ್ಲಿ ಪ್ಲಾಸ್ಟಿಕ್ ವೈರಿನಿಂದ ನೇಣುಬಿಗಿದ ಸ್ಥಿತಿಯಲ್ಲಿ ಕಂಡು ಬಂದಿದ್ದಾನೆ. ಪ್ರಥಮ ಚಿಕಿತ್ಸೆ ನೀಡಿ ನಂತರ ಶಾಲೆಯ ಪ್ರಾಂಶುಪಾಲರು , ನಿಲಯ ಮೇಲ್ವಿಚಾರಕರು ಜಗಳೂರು ಸಾರ್ವಜನಿಕ ಆಸ್ಪತ್ರೆ ಚಿಕಿತ್ಸೆಗೆ ಕರೆತಂದಿದ್ದಾರೆ. ಈ ವೇಳೆ ಪರಿಕ್ಷೀಸಿದ ವೈದರು ದಾರಿ ಮಧ್ಯದಲ್ಲಿಯೇ ಸಾವಿಗಿಡಾಗಿದ್ದಾನೆ ದೃಢ ಪಡಿಸಿದ್ದಾರೆ. ಬಿಳಿಚೋಡು ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಮತ್ತು ಎಸ್. ಪಿ ರಿಷ್ಯಂತ್, ತಹಶೀಲ್ದಾರ್ ಸಂತೋಷ್ ಕುಮಾರ್ ಮಂಗಳವಾರ ಮಧ್ಯ ರಾತ್ರಿ ಶಾಲೆ ಮತ್ತು ಆಸ್ಪತ್ರೆಗೆ ಭೇಟಿ ನೀಡಿ ಪರೀಶಿಲನೆ ನಡೆಸಿದರು.
ಮೃತ ಸುನಿಲ್ ಕುಟುಂಬಕ್ಕೆ 2.5 ಲಕ್ಷ ಮೊತ್ತದ ಪರಿಹಾರದ ಚೆಕ್ ವಿತರಿಸಲಾಯಿತು.