ಮುಂಬಯಿ : ಮಹಾರಾಷ್ಟ್ರದ ಬುಲ್ದಾನಾ ಜಿಲ್ಲೆಯಲ್ಲಿ ಮುಂಬಯಿ – ನಾಗಪುರ ಹೆದ್ದಾರಿಯಲ್ಲಿ ಟ್ರಕ್ ಒಂದು ಟೆಂಪೋ ಮೇಲೆ ಉರುಳಿ ಬಿದ್ದ ಭೀಕರ ಅಪಘಾತದಲ್ಲಿ ಐವರು ಮಹಿಳೆಯರು ಮತ್ತು ಇಬ್ಬರು ಮಕ್ಕಳು ಸೇರಿ ಒಟ್ಟು 13 ಮಂದಿ ಮೃತಪಟ್ಟ ಘಟನೆ ವರದಿಯಾಗಿದೆ.
ಇಂದು ಸೋಮವಾರ ಮಧ್ಯಾಹ್ನ 2.15ರ ಸುಮಾರಿಗೆ ಈ ಅವಘಡ ಮಲ್ಕಾಪುರದಲ್ಲಿ ನಡೆದಿದೆ. ಮೃತರು ಗೂಡಿಟ್ಟಿಗೆ ಕಾರ್ಖಾನೆಯ ಕಾರ್ಮಿಕರಾಗಿದ್ದು ದಿನಸಿ ಸಾಮಗ್ರಿಗಳನ್ನು ಖರೀದಿಸಿ ಅನೂರಾಬಾದ್ ಗ್ರಾಮಕ್ಕೆ ಮರಳುತ್ತಿದ್ದರು.
ಟ್ರಕ್ ಟೈರ್ ಸ್ಫೋಟಗೊಂಡ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿದ್ದೇ ಈ ಭೀಕರ ಅಪಘಾತಕ್ಕೆ ಕಾರಣವಾಯಿತು. ಟ್ರಕ್ ಟೆಂಪೋ ಮೇಲೆ ಉರುಳಿ ಬಿದ್ದ ಕಾರಣ ಅದರೊಳಗಿದ್ದವರ ಪೈಕಿ ಹದಿಮೂರು ಮಂದಿ ಸ್ಥಳದಲ್ಲೇ ಮೃತಪಟ್ಟರು.
ಇತರ ಮೂವರಿಗೆ ಗಂಭೀರ ಗಾಯಗಳಾಗಿವೆ ಎಂದು ಪೊಲೀಸ್ ಸುಪರಿಂಟೆಂಡೆಂಟ್ ದಿಲೀಪ್ ಪಾಟೀಲ್ ಭುಜಬಲ್ ತಿಳಿಸಿದ್ದಾರೆ.
ಮೇ 18ರಂದು ಗುಜರಾತ್ ನ ಕಚ್ ನಿಂದ ಹೊರಟಿದ್ದ ಟ್ರಕ್, 400 ಚೀಲ ಉಪ್ಪನ್ನು ನಾಗಪುರಕ್ಕೆ ಸಾಗಿಸುತ್ತಿತ್ತು. ಮೃತರಲ್ಲಿ ಐವರು ಅನೂರಾಬಾದ್ ನವರು; ಆರು ಮಂದಿ ನಗ್ರಾಜಿ ಯವರು ಮತ್ತು ಇಬ್ಬರು ಭೂಸವಾಲ್ ನವರು ಎಂದು ಭುಜಬಲ್ ತಿಳಿಸಿದರು.
ಅವಘಡದ ಬಳಿಕ ಟ್ರಕ್ ಡ್ರೈವರ್ ನಾಪತ್ತೆಯಾಗಿದ್ದು ಪೊಲೀಸರು ಆತನಿಗಾಗಿ ಹುಡುಕಾಡುತ್ತಿದ್ದಾರೆ.