Advertisement

120ರ ಸಂಭ್ರಮದಲ್ಲಿ ವಿದ್ಯಾಮಂದಿರ

10:39 AM Sep 13, 2019 | Suhan S |

ಹುಬ್ಬಳ್ಳಿ: ಶತಮಾನಕ್ಕೂ ಹಳೆಯ ಈ ಶಾಲೆ ಹಲವು ದಾಖಲೆಗಳನ್ನು ತನ್ನೊಳಗಿಟ್ಟುಕೊಂಡಿದೆ. ಮುಂಬಯಿ ಪ್ರಾಂತ್ಯದ ಮೊದಲ ಕನ್ನಡ ಶಾಲೆಯೂ ಆಗಿದೆ. ಸದ್ಗುರು ಶ್ರೀ ಸಿದ್ಧಾರೂಢ ಸ್ವಾಮೀಜಿಯವರ ಪರಮ ಶಿಷ್ಯರಾದ ಸದ್ಗುರು ಶ್ರೀ ಗುರುನಾಥರೂಢ ಸ್ವಾಮೀಜಿಯವರು ವ್ಯಾಸಂಗ ಮಾಡಿದ ಶಾಲೆ ಇದಾಗಿದೆ.

Advertisement

ಹಳೇಹುಬ್ಬಳ್ಳಿ ದುರ್ಗದ ಬಯಲು ಪ್ರದೇಶದಲ್ಲಿರುವ ಸರಕಾರಿ ಮಾದರಿ ಕನ್ನಡ ಗಂಡು ಮಕ್ಕಳ ಶಾಲೆ ನಂ.1 ಇಂತಹ ಹಲವು ಕೀರ್ತಿಗಳನ್ನು ತನ್ನದಾಗಿಸಿಕೊಂಡಿದೆ. ಇದೀಗ ಹಿಂದಿನ ಹಲವು ನೆನಪುಗಳೊಂದಿಗೆ 120ನೇ ವರ್ಷದ ಸಂಭ್ರಮಾಚರಣೆಗೆ ಮುಂದಡಿ ಇರಿಸಿದೆ.

1889ರಲ್ಲಿ ಆರಂಭಗೊಂಡಿದ್ದಾಗಿ ದಾಖಲೆಗಳು ಹೇಳುತ್ತವೆ. ಮುಂಬೈ ಪ್ರಾಂತ್ಯದ ಆಡಳಿತ ಇರುವಾಗ ಈ ಭಾಗದಲ್ಲಿ ಮರಾಠಿ ಶಾಲೆಗಳಿಗೆ ಹೆಚ್ಚಿನ ಪ್ರಾಧ್ಯಾನ್ಯತೆ ಇತ್ತು. ಕಾಲಕ್ರಮೇಣ ಈ ಭಾಗದಲ್ಲಿ ಕನ್ನಡ ಶಾಲೆಗಳು ಆರಂಭಗೊಳ್ಳಲು ಪ್ರಾರಂಭಗೊಂಡವು. ಇದರಲ್ಲಿ ಮೊದಲನೆಯದಾಗಿ ಆರಂಭವಾಗಿದ್ದು ಈ ಶಾಲೆ ಎಂದರೂ ತಪ್ಪಾಗಲಾರದು.

ಗುರುನಾಥರೂಢರು ಕಲಿತ ಶಾಲೆ: ಶ್ರೀ ಗುರುನಾಥರೂಢರು ಇದೇ ಶಾಲೆಯಲ್ಲಿ ವ್ಯಾಸಂಗ ಮಾಡಿದ್ದಾರೆ. ಶಾಲಾ ದಾಖಲಾತಿ ಪ್ರಕಾರ 2-5-1907ರಲ್ಲಿ ಜನ್ಮ ತಾಳಿರುವ ಸದ್ಗುರು ಶ್ರೀ ಗುರುನಾಥರೂಢ ಸ್ವಾಮೀಜಿ ಅವರು ಮೊದಲನೇ ತರಗತಿಯನ್ನು ಹಳೇಹುಬ್ಬಳ್ಳಿ ಅಕ್ಕಿಪೇಟೆಯಲ್ಲಿದ್ದ ಬಾಸೆಲ್ ಮಿಷನ್‌ ಶಾಲೆಯಲ್ಲಿ ಕಲಿತಿದ್ದರು. ಎರಡನೇ ತರಗತಿಗೆ ಸರಕಾರಿ ಮಾದರಿ ಕನ್ನಡ ಗಂಡು ಮಕ್ಕಳ ಶಾಲೆ ನಂ.1ರಲ್ಲಿ ಪ್ರವೇಶ ಪಡೆದಿದ್ದರು. ನಂತರ ಸಿದ್ಧಾರೂಢರ ಪ್ರಭಾವಕ್ಕೆ ಒಳಗಾಗುವ ಗುರುನಾಥರೂಢರು ಸಿದ್ಧಾರೂಢರ ಶಿಷ್ಯರಾಗಿ ಮಠದಲ್ಲಿ ಉಳಿದುಕೊಂಡಿದ್ದರು.

ಕೇವಲ 1 ಕೊಠಡಿ, 22 ವಿದ್ಯಾರ್ಥಿಗಳಿಂದ ಆರಂಭಗೊಂಡಿರುವ ಶಾಲೆ ಇಂದು 120 ವರ್ಷಗಳಲ್ಲಿ ಹಲವು ಏಳು-ಬೀಳುಗಳ ನಡುವೆ ಪ್ರಸ್ತುತ 200ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆ ಆಲಯವಾಗಿದೆ. ಅಂದು ಇದ್ದ 1ನೇ ತರಗತಿ ನಂತರದ ದಿನಗಳಲ್ಲಿ 5ನೇ ತರಗತಿವರೆಗೆ ವಿಸ್ತಾರಗೊಂಡಿತ್ತು. ಇದೀಗ 8ನೇ ತರಗತಿವರೆಗೆ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಒಟ್ಟು 16 ಕೊಠಡಿಗಳಿವೆ. ಶಾಲೆಯಲ್ಲಿ ಸುಸಜ್ಜಿತ ಪ್ರಯೋಗಾಲಯ, ಗ್ರಂಥಾಲಯ, ಸ್ಮಾರ್ಟ್‌ ಕ್ಲಾಸ್‌ ಸೇರಿದಂತೆ ಎಲ್ಲ ರೀತಿಯ ಸೌಲಭ್ಯಗಳಿದ್ದು, ಇನ್ನು ಹೆಚ್ಚಿನ ಸೌಲಭ್ಯಗಳನ್ನು ಶಾಲೆ ಎದುರು ನೋಡುತ್ತಿದೆ.

Advertisement

ಶಾಲೆಯಲ್ಲಿ ಇಲ್ಲಿಯವರೆಗೆ ಸುಮಾರು 40ಕ್ಕೂ ಹೆಚ್ಚು ಮುಖೋಪಾಧ್ಯಯರು ಹಾಗೂ 100ಕ್ಕೂ ಹೆಚ್ಚು ಶಿಕ್ಷಕರು ಸೇವೆ ಸಲ್ಲಿಸಿದ್ದಾರೆ. ಸದ್ಯ ಮುಖೋಪಾಧ್ಯಯರು ಸೇರಿದಂತೆ 6 ಜನ ಶಿಕ್ಷಕರು ಸೇವೆ ಸಲ್ಲಿಸುತ್ತಿದ್ದಾರೆ. ಖಾಸಗಿ ಶಾಲೆಗಳ ಆರ್ಭಟದ ನಡುವೆಯೂ ಬಡ ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಮಹತ್ವದ ತಾಣವಾಗಿ 120 ವರ್ಷಗಳಿಂದ ತನ್ನ ಮಹತ್ವವನ್ನು ಉಳಿಸಿಕೊಂಡು ವಿದ್ಯಾಮಂದಿರ ಮುನ್ನಡೆದಿದೆ.

 

•ಬಸವರಾಜ ಹೂಗಾರ

Advertisement

Udayavani is now on Telegram. Click here to join our channel and stay updated with the latest news.

Next