Advertisement
ಪ್ರಧಾನಿ ನರೇಂದ್ರ ಮೋದಿ ನೀಡಿದ “ಒಗ್ಗಟ್ಟಿನ ಕರೆ’ಗೆ ರಾಜ್ಯದಲ್ಲಿ ಅಭೂತಪೂರ್ವ ಸ್ಪಂದನೆ ದೊರಕಿತು. ಜನ ಭಾನುವಾರ ರಾತ್ರಿ 9 ಗಂಟೆ ಆಗುತ್ತಿದ್ದಂತೆ ಎಲ್ಲೆಡೆ ವಿದ್ಯುದ್ದೀಪಗಳನ್ನು ಆರಿಸಿ, ಮೋಂಬತ್ತಿ, ಮೊಬೈಲ್ ಲೈಟ್, ಟಾರ್ಚ್ ಬೆಳಗುವ ಮೂಲಕ ಬೆಂಬಲಿಸಿದರು. ಪರಿಣಾಮ ಆ ಒಂಬತ್ತು ನಿಮಿಷಗಳಲ್ಲಿ ರಾಜ್ಯದ ವಿದ್ಯುತ್ ಬಳಕೆ ಏಕಾಏಕಿ 1,200 ಮೆ.ವ್ಯಾ. ಕುಸಿತ ಕಂಡಿತ್ತು. ಇದು ಒಟ್ಟಾರೆ ಬೆಂಗಳೂರು ಒಂದು ದಿನಕ್ಕೆ ಬಳಕೆ ಮಾಡುವ (ನಿತ್ಯದ ಬಳಕೆ 4,800 ಮೆ.ವ್ಯಾ.) ವಿದ್ಯುತ್‌ನ ಶೇ. 25ರಷ್ಟಾಗಿದೆ.
Related Articles
Advertisement
ಬೆಸ್ಕಾಂ ವ್ಯಾಪ್ತಿಯಲ್ಲಿ ಕಳೆದ ಬೇಸಿಗೆಯಲ್ಲೇ ವಿದ್ಯುತ್ ಬೇಡಿಕೆ 6000 ಮೆಗಾವ್ಯಾಟ್‌ಗೆ ಏರಿಕೆಯಾಗಿತ್ತು. ಆದರೆ ಸದ್ಯ ಲಾಕ್ ಡೌನ್‌ನಿಂದಾಗಿ ಬೇಡಿಕೆ 4,800 ಮೆಗಾವ್ಯಾಟ್‌ನಷ್ಟಿದೆ. ವರ್ಷದಿಂದ ವರ್ಷಕ್ಕೆ ವಿದ್ಯುತ್ ಬೇಡಿಕೆ 300- 400 ಮೆಗಾವ್ಯಾಟ್‌ನಷ್ಟು ಹೆಚ್ಚಾಗುತ್ತದೆ. ಆದರೆ ಈ ಬಾರಿ ಬೇಡಿಕೆ 4,800 ಮೆಗಾವ್ಯಾಟ್‌ನಷ್ಟಿದೆ. ಕೈಗಾರಿಕೆ ಹಾಗೂ ವಾಣಿಜ್ಯ ಬಳಕೆ ವಿದ್ಯುತ್ ಪ್ರಮಾಣ ಕಡಿಮೆಯಿರುವ ಕಾರಣ ಬೇಡಿಕೆ ಇಳಿಕೆಯಾಗಿದೆ ಎಂದು ಹೇಳಿದರು.
9 ನಿಮಿಷದ ನಂತರ ದೀಪಗಳು ಬೆಳಗಲಾರಂಭಿಸುತ್ತಿದ್ದಂತೆ ವಿದ್ಯುತ್ ಬಳಕೆ ಸಹಜ ಸ್ಥಿತಿಗೆ ಮರಳಿತು. ಕರ್ನಾಟಕ ವಿದ್ಯುತ್ ನಿಗಮ (ಕೆಪಿಸಿಎಲ್), ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ (ಕೆಪಿಟಿಸಿಎಲ್), ಎಲ್ಲ ಎಸ್ಕಾಂಗಳು ಸಮನ್ವಯದಿಂದ ಕಾರ್ಯನಿರ್ವಹಿಸಿದ್ದರಿಂದ ಯಾವುದೇ ರೀತಿಯ ಸಮಸ್ಯೆ ಉಂಟಾಗಿಲ್ಲ ಎಂದು ಇಂಧನ ಇಲಾಖೆ ತಿಳಿಸಿದೆ.
ರಾಜ್ಯಾದ್ಯಂತ ವಿದ್ಯುತ್ ಬೇಡಿಕೆ 225 ದಶಲಕ್ಷ ಯೂನಿಟ್‌ನಷ್ಟಿದ್ದು, ಲಾಕ್‌ಡೌನ್‌ನಿಂದಾಗಿ ಸುಮಾರು 30 ದಶಲಕ್ಷ ಯೂನಿಟ್ ನಷ್ಟು ಬೇಡಿಕೆ ಇಳಿಕೆಯಾಗಿದೆ. ಲಾಕ್‌ಡೌನ್‌ಗೂ ಮೊದಲು ದಿನದ ಪೀಕ್ ಲೋಡ್ 12,500 ಮೆಗಾವ್ಯಾಟ್‌ನಷ್ಟಿತ್ತು. ಈಗ ಬೇಡಿಕೆ 9000ದಿಂದ 10,000 ಮೆಗಾವ್ಯಾಟ್‌ನಷ್ಟಿದೆ. – ಡಾ.ಎನ್.ಮಂಜುಳಾ, ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕಿ