ನವದೆಹಲಿ: ರಾಜ್ಯಸಭೆಯ ಕಲಾಪದಲ್ಲಿ ಕೃಷಿ ಕಾಯ್ದೆ ರದ್ದು ಮಸೂದೆ 2021 ಅನ್ನು ಮಂಡಿಸುವ ಸಂದರ್ಭದಲ್ಲಿ ವಿಪಕ್ಷ ಸಂಸದರು ಭಾರೀ ಕೋಲಾಹಲ, ಗದ್ದಲ ನಡೆಸಿದ್ದರು. ಚಳಿಗಾಲದ ಮೊದಲ ದಿನದ (ಸೋಮವಾರ ನವೆಂಬರ್ 29) ಅಧಿವೇಶನದಲ್ಲಿ ಕೋಲಾಹಲ ಎಬ್ಬಿಸಿದ 12 ಮಂದಿ ಸಂಸದರನ್ನು ಮುಂದಿನ ಕಲಾಪದಲ್ಲಿ ಭಾಗವಹಿಸದಂತೆ ಅಮಾನತುಗೊಳಿಸಲಾಗಿದೆ.
ಇದನ್ನೂ ಓದಿ:ಕಾಂಗ್ರೆಸ್ ಭಿನ್ನಮತ ಸ್ಫೋಟ: ಬ್ಯಾನರ್ ನಲ್ಲಿ ಮಾಜಿ ಸಚಿವರ ಫೋಟೋ ಮಾಯ
ರಾಜ್ಯಸಭೆಯ ಸಭಾಧ್ಯಕ್ಷರ ಸೂಚನೆಗೆ ಗೌರವ ಕೊಡದೇ ಕೋಲಾಹಲ ಎಬ್ಬಿಸಿರುವುದನ್ನು ಈ ಸದನ ಗಂಭೀರವಾಗ ಖಂಡಿಸುತ್ತದೆ. ಕಲಾಪ ಸುಗಮವಾಗಿ ನಡೆಯಲು ಅವಕಾಶ ಕೊಡದೇ ಗದ್ದಲ ನಡೆಸಿ ಅನುಚಿತವಾಗಿ ವರ್ತಿಸಿರುವುದಕ್ಕೆ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಅಧಿಕೃತ ನೋಟಿಸ್ ನಲ್ಲಿ ತಿಳಿಸಲಾಗಿದೆ.
ಕೃಷಿ ಕಾಯ್ದೆ ರದ್ದು ಮಸೂದೆ ಮಂಡನೆಗೂ ಮೊದಲು ಚರ್ಚೆ ನಡೆಸಲು ಅವಕಾಶ ನೀಡಬೇಕೆಂದು ವಿಪಕ್ಷಗಳು ಪಟ್ಟು ಹಿಡಿದಿದ್ದವು. ಆದರೆ ವಿಪಕ್ಷ ಸದಸ್ಯರು ತೀವ್ರ ಕೋಲಾಹಲ, ಗದ್ದಲ ನಡೆಸಿದ್ದರು. ರಾಜ್ಯಸಭೆಯಲ್ಲಿ ಅನುಚಿತವಾಗಿ ವರ್ತಿಸಿದ ಕಾಂಗ್ರೆಸ್, ಸಿಪಿಎಂ ಹಾಗೂ ಟಿಎಂಸಿ ಸೇರಿದಂತೆ 12 ಮಂದಿ ಸಂಸದರನ್ನು ಸಭಾಪತಿ ಅಮಾನತುಗೊಳಿಸಿರುವುದಾಗಿ ತಿಳಿಸಿದ್ದಾರೆ.
ರಾಜ್ಯಸಭೆಯ ಇಳಮಾರಮ್ ಕರೀಮ್ (ಸಿಪಿಎಂ), ಫುಲೊ ದೇವಿ ನೇತಾಂ (ಕಾಂಗ್ರೆಸ್), ಛಾಯಾ ವರ್ಮಾ (ಕಾಂಗ್ರೆಸ್), ರಿಪುನ್ ಬೋರಾ(ಕಾಂಗ್ರೆಸ್), ಬಿನೋಯ್ ಬಿಸ್ವಂ(ಸಿಪಿಐ), ರಾಜಾಮಣಿ ಪಟೇಲ್ (ಕಾಂಗ್ರೆಸ್), ಡೋಲಾ ಸೇನ್ (ಟಿಎಂಸಿ), ಶಾಂತ ಚೇಟ್ರಿ(ಟಿಎಂಸಿ), ಸೈಯದ್ ನಾಸಿರ್ ಹುಸೈನ್(ಕಾಂಗ್ರೆಸ್), ಅನಿಲ್ ದೇಸಾಯಿ(ಶಿವಸೇನಾ), ಅಖಿಲೇಶ್ ಪ್ರಸಾದ್ ಸಿಂಗ್(ಕಾಂಗ್ರೆಸ್) ಸೇರಿದಂತೆ 12 ಸದಸ್ಯರನ್ನು ಅಮಾನತು ಮಾಡಲಾಗಿದೆ.
ಯಾವುದೇ ಚರ್ಚೆ ನಡೆಸದೇ ಈ ರೀತಿ ಕೃಷಿ ಕಾಯ್ದೆಯನ್ನು ರದ್ದುಗೊಳಿಸುವ ಮಸೂದೆಯನ್ನು ಮಂಡಿಸಿ ಅಂಗೀಕರಿಸಿರುವುದು. ಕೇಂದ್ರ ಸರ್ಕಾರ ಚರ್ಚೆ ನಡೆಸಲು ಭಯಪಟ್ಟುಕೊಳ್ಳುತ್ತಿದೆ ಎಂದು ಅರ್ಥ ಎಂಬುದಾಗಿ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಆರೋಪಿಸಿದ್ದಾರೆ.