ನವದೆಹಲಿ: ಎಸ್ ಯುವಿ (ಸ್ಫೋರ್ಟ್ಸ್ ಯುಟಿಲಿಟಿ ವೆಹಿಕಲ್) ಕಾರನ್ನು ನಕ್ಸಲೀಯರು ಐಇಡಿ ಬಳಸಿ ಸ್ಫೋಟಗೊಳಿಸಿದ ಪರಿಣಾಮ 12 ಮಂದಿ ಗಾಯಗೊಂಡಿರುವ ಘಟನೆ ಚತ್ತೀಸ್ ಗಢದ ದಾಂತೇವಾಡ ಜಿಲ್ಲೆಯಲ್ಲಿ ಗುರುವಾರ (ಆಗಸ್ಟ್ 05) ನಡೆದಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ:ವೊಡಾಫೋನ್ ಐಡಿಯಾ ಕಾರ್ಯನಿರ್ವಾಹಣಾಧಿಕಾರಿ ಹುದ್ದೆಗೆ ರಾಜೀನಾಮೆ ನೀಡಿದ ಮಂಗಳಂ ಬಿರ್ಲಾ
ಈ ಘಟನೆ ಘೋಟಿಯಾ ಗ್ರಾಮದ ಸಮೀಪದ ಮಾಲೆವಾಧಿ ಪೊಲೀಸ್ ಠಾಣಾ ವ್ಯಾಪ್ತಿಯೊಳಗೆ ಸಂಭವಿಸಿದೆ. ನಾರಾಯಣ್ ಪುರ್ ಮತ್ತು ದಾಂತೇವಾಡವನ್ನು ಸಂಪರ್ಕಿಸುವ ರಸ್ತೆ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ಈ ವೇಳೆ ನಕ್ಸಲೀಯರು ಐಇಡಿ ಬಳಸಿ ಎಸ್ ಯುವಿ ಕಾರನ್ನು ಸ್ಫೋಟಗೊಳಿಸಿರುವುದಾಗಿ ಪೊಲೀಸ್ ವರಿಷ್ಠಾಧಿಕಾರಿ ಅಭಿಷೇಕ್ ಪಲ್ಲವಾ ಪಿಟಿಐಗೆ ತಿಳಿಸಿದ್ದಾರೆ.
ಎಸ್ ಯುವಿ ಬೊಲೆರೊ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಎಲ್ಲಾ 12 ಮಂದಿಯೂ ಗಾಯಗೊಂಡಿದ್ದು, ಇದರಲ್ಲಿ ಮೂವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಅಭಿಷೇಕ್ ವಿವರಿಸಿದ್ದಾರೆ. ಘಟನೆ ಬಗ್ಗೆ ತಿಳಿಯುತ್ತಿದ್ದಂತೆಯೇ ಭದ್ರತಾ ಪಡೆ ಸ್ಥಳಕ್ಕೆ ತೆರಳಿದ್ದು, ಶೋಧ ಕಾರ್ಯ ನಡೆಸುತ್ತಿರುವುದಾಗಿ ವರದಿ ತಿಳಿಸಿದೆ.
ಘಟನೆಯಲ್ಲಿ ಗಾಯಗೊಂಡವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ನಕ್ಸಲೀಯರು ಭದ್ರತಾ ಪಡೆಯನ್ನು ಗುರಿಯಾಗಿರಿಸಿ ಸ್ಫೋಟದ ಸಂಚು ನಡೆಸಿದ್ದು, ಅದು ತಪ್ಪು ತಿಳುವಳಿಕೆಯಿಂದ ನಾಗರಿಕರ ವಾಹನದ ಮೇಲೆ ದಾಳಿ ನಡೆಸುವಂತಾಗಿದೆ ಎಂದು ಶಂಕಿಸಿರುವುದಾಗಿ ಪೊಲೀಸ್ ವರಿಷ್ಠಾಧಿಕಾರಿ ಮಾಹಿತಿ ನೀಡಿದ್ದಾರೆ.