ಬೆಂಗಳೂರು: ಅಂಚೆ ಇಲಾಖೆಯಲ್ಲಿನ ಉತ್ತಮ ಸೇವೆಗಾಗಿ ಮಂಗಳೂರಿನ ಪ್ರಧಾನ ಅಂಚೆ ಕಚೇರಿ ಪೋಸ್ಟ್‌ಮನ್ ಸುಭಾಶ್ ಪಿ ಸಾಲಿಯಾನ್, ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕಿನ ಮೂಡಿ ಗ್ರಾಮದ ಅಂಚೆ ಇಲಾಖೆ ಅಧಿಕಾರಿ ಎಂ.ಕೆ.ಮೌಲಾಲಿ, ಧಾರವಾಡ ವಿಭಾಗದ ಹಿರಿಯ ಅಧಿಕಾರಿ ಎಸ್.ವಿಜಯ ನರಸಿಂಹ, ವಾಲಿಬಾಲ್‌ಪಟು ಎ.ಕಾರ್ತಿಕ್ ಸೇರಿದಂತೆ 12 ಮಂದಿಗೆ ಅಂಚೆ ಇಲಾಖೆ ನೀಡುವ 2017-18ನೇ ಸಾಲಿನ ಡಾಕ್ ಸೇವಾ ಪ್ರಶಸ್ತಿ ನೀಡಿ ಅಭಿನಂದಿಸಲಾಯಿತು.
ವಿಶ್ವ ಅಂಚೆ ದಿನಾಚರಣೆ ಅಂಗವಾಗಿ ನಗರದ ಪ್ರಧಾನ ಅಂಚೆ ಕಚೇರಿಯ ಮೇಘದೂತ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಇನ್ಫೋಸಿಸ್ ಸಂಸ್ಥೆ ಸಹ ಸಂಸ್ಥಾಪಕ ದಿನೇಶ್ ಕೃಷ್ಣಸ್ವಾಮಿ, ಸೇವಾ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಓದಿದ್ದು ಕನ್ನಡ ಶಾಲೆಯಲ್ಲಿ: ಇನ್ಫೋಸಿಸ್
ಸಂಸ್ಥೆಯ ಸಹ ಸಂಸ್ಥಾಪಕ ದಿನೇಶ್ ಕೃಷ್ಣಸ್ವಾಮಿ ಮಾತನಾಡಿ, ಶಿವಮೊಗ್ಗ ಜಿಲ್ಲೆ ಸಾಗರದಂತಹ ಪುಟ್ಟ ಪಟ್ಟಣದ ಕನ್ನಡ ಶಾಲೆಯಲ್ಲಿ ಓದಿ ಬೆಳೆದ ನಾನು, ಇನ್ಫೋಸಿಸ್ ಕಂಪನಿಯ ಸಹ ಸಂಸ್ಥಾಪಕರಲ್ಲಿ ಒಬ್ಬ ಎಂದು ಹೇಳಿಕೊಳ್ಳಲು ಹೆಮ್ಮೆ ಆಗುತ್ತದೆ. ಇದಕ್ಕೆಲ್ಲ ಕಾರಣ ನನ್ನಲ್ಲಿದ್ದ
ಸಾಧಿಸಬೇಕೆಂಬ ಛಲ ಎಂದು ಹೇಳಿದರು.
ಅಂಚೆ ಇಲಾಖೆಯಲ್ಲಿ ಸೇವೆ: ಇನ್ಫೋಸಿಸ್ ಕಂಪನಿ ಹುಟ್ಟುಹಾಕುವ ಮೊದಲು ನಾನು ಅಂಚೆ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದೆ. ತರಬೇತಿ ಅವಧಿಯಲ್ಲಿ ಅಂಚೆ ಇಲಾಖೆ ಹಿರಿಯ ಅಧಿಕಾರಿಗಳು ಹೇಳಿಕೊಟ್ಟ ಪಾಠಗಳು ನನ್ನ ಜೀವನದ ಮತ್ತಷ್ಟು ಸಾಧನೆಗೆ ಕಾರಣವಾಯಿತು. ಹೀಗಾಗಿ ನಾನು, ಆಗಾಗೆ ಅಂಚೆ ಇಲಾಖೆ ನೆನಪಿಸಿಕೊಳ್ಳುತ್ತೇನೆ ಎಂದರು. ಕರ್ನಾಟಕ ವೃತ್ತದ ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ ಡಾ.ಚಾರ್ಲ್ಸ್ ಲೋಬೊ ಮಾತನಾಡಿ, ಅಂಚೆ ಇಲಾಖೆ ವಿಶೇಷ ದಿನಗಳಲ್ಲಿ ಹೊಸ ಕಾರ್ಡ್‌ಗಳನ್ನು ಹೊರತರುತ್ತಲೇ ಇರುತ್ತದೆ. ಈ ವರ್ಷ 10 ವಿಶೇಷ ಕಾರ್ಡ್‌ಗಳನ್ನು ಹೊರತಂದಿದ್ದು, ಸಾರ್ವಜನಿಕರಲ್ಲಿ ಆರೋಗ್ಯದ ಬಗ್ಗೆ ತಿಳಿವಳಿಕೆ ನೀಡುವಲ್ಲಿ ಸಫಲವಾಗಿದೆ ಎಂದು ಹೇಳಿದರು.
ಪ್ರಶಸ್ತಿ ಪುರಸ್ಕೃತರ ಪರವಾಗಿ ಎಂ.ಕೆ. ಮೌಲಾಲಿ ಮಾತನಾಡಿ, ಸೊರಬ ತಾಲೂಕಿನ ಪುಟ್ಟ ಹಳ್ಳಿಯಲ್ಲಿ ಕೆಲಸ ಮಾಡುತ್ತಿರುವ ನನ್ನ ಸೇವೆ ಗುರುತಿಸಿ, ಪ್ರಶಸ್ತಿ ನೀಡುತ್ತಿರುವುದು ಸಂತಸ ತಂದಿದೆ. ಈ ಪ್ರಶಸ್ತಿಯನ್ನು ಅಂಚೆ ಇಲಾಖೆಯಲ್ಲಿರುವ ನನ್ನ ಸ್ನೇಹಿತರು ಮತ್ತು ಕುಟುಂಬಸ್ಥರಿಗೆ ಅರ್ಪಿಸುವೆ ಎಂದರು. ಅಂಚೆ ಇಲಾಖೆಯ ನಿವೃತ್ತ ಅಧಿಕಾರಿ ಎಸ್.ಟಿ. ಭಾಸ್ಕರನ್, ಹಿರಿಯ ಅಧಿಕಾರಿಗಳಾದ ರಾಜೇಂದ್ರ ಕುಮಾರ್, ವೀಣಾ ಶ್ರೀನಿವಾಸ್ ಇತರರು ಇದ್ದರು.
ಡಾಕ್ ಸೇವಾ ಪ್ರಶಸ್ತಿ ಬಂದಿರುವುದು ನನಗೆ ಸಂತಸ ತಂದಿದೆ. ಈ ಪ್ರಶಸ್ತಿಯನ್ನು ನನ್ನ ತಾಯಿಗೆ ಅರ್ಪಿಸಲು ಇಷ್ಟಪಡುತ್ತೇನೆ. ತಾಯಿಯ ಸಮ್ಮುಖದಲ್ಲಿ ಪ್ರಶಸ್ತಿ ತೆಗೆದುಕೊಂಡಿರುವುದು ಖುಷಿಯನ್ನು ಮತ್ತಷ್ಟು ಇಮ್ಮಡಿಗೊಳಿಸಿದೆ.
● ಸುಭಾಶ್ ಪಿ ಸಾಲಿಯಾನ್, ಪೋಸ್ಟ್‌ಮನ್ ಮಂಗಳೂರು