Advertisement

Ashwini Vaishnaw; ಭಾರತಕ್ಕೆ 12 ಕೈಗಾರಿಕಾ ಸ್ಮಾರ್ಟ್‌ಸಿಟಿಗಳ ನೆಕ್ಲೇಸ್‌

01:39 AM Aug 29, 2024 | Team Udayavani |

ಹೊಸದಿಲ್ಲಿ: ದೇಶೀಯ ಉತ್ಪಾದನ ಕ್ಷೇತ್ರವನ್ನು ಬಲಪಡಿಸುವ ನಿಟ್ಟಿನಲ್ಲಿ 28,602 ಕೋಟಿ ರೂ. ವೆಚ್ಚದಲ್ಲಿ 12 ಹೊಸ ಕೈಗಾರಿಕಾ ಸ್ಮಾರ್ಟ್‌ ಸಿಟಿಗಳ ನಿರ್ಮಾಣಕ್ಕೆ, ಕೇಂದ್ರ ಸಚಿವ ಸಂಪುಟ ಬುಧವಾರ ಒಪ್ಪಿಗೆ ನೀಡಿದೆ. ಈ ಕೈಗಾರಿಕಾ ಸ್ಮಾರ್ಟ್‌ ಸಿಟಿಗಳು ಭಾರತದ ಬೃಹತ್‌ ಕಂಠಹಾರ (ಗ್ರ್ಯಾಂಡ್‌ ನೆಕ್ಲೇಸ್‌) ರೀತಿಯಿದ್ದು, ಸುವರ್ಣ ಚತುಷ್ಪಥಕ್ಕೆ ಬೆಂಬಲ ನೀಡಲಿವೆ ಎಂದು ಕೇಂದ್ರ ಸಚಿವ ಅಶ್ವಿ‌ನ್‌ ವೈಷ್ಣವ್‌ ಹೇಳಿದ್ದಾರೆ.

Advertisement

ಈ 12 ಕೈಗಾರಿಕಾ ಸ್ಮಾರ್ಟ್‌ಸಿಟಿಗಳ ಪೈಕಿ ಒಂದೊಂದು ಬಿಹಾರ ಮತ್ತು ಆಂಧ್ರ ಪ್ರದೇಶದಲ್ಲೂ ಇರಲಿವೆ. ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್‌ ಅಭಿವೃದ್ಧಿ ಕಾರ್ಯಕ್ರಮ (ಎನ್‌ಐಸಿಡಿಪಿ)ದ ಅಡಿ ಈ ಕೈಗಾರಿಕಾ ಸ್ಮಾರ್ಟ್‌ಸಿಟಿಗಳನ್ನು ಅಭಿವೃದ್ಧಿಪಡಿಸಲಾಗುತ್ತದೆ. 6 ಪ್ರಮುಖ ಕೈಗಾರಿಕಾ ಕಾರಿಡಾರ್‌ಗಳ ಅಡಿ 10 ರಾಜ್ಯ ಗಳಲ್ಲಿ ಈ 12 ಕೈಗಾರಿಕಾ ಸ್ಮಾರ್ಟ್‌ ಸಿಟಿಗಳು ನಿರ್ಮಾಣ ಗೊಳ್ಳಲಿವೆ ಎಂದು ತಿಳಿಸಿದ್ದಾರೆ. ಈಗಾಗಲೇ ದೇಶದಲ್ಲಿ 8 ಕೈಗಾರಿಕಾ ಸ್ಮಾರ್ಟ್‌ ಸಿಟಿಗಳಿದ್ದು, ಹೊಸದಾಗಿ 12 ನಿರ್ಮಾಣಗೊಂಡರೆ ಒಟ್ಟು ಸಂಖ್ಯೆ 20ಕ್ಕೇರಲಿದೆ.

ಎಲ್ಲೆಲ್ಲಿ ಕಾರಿಡಾರ್‌ಗಳು?
ಖುರ್ಪಿಯಾ (ಉತ್ತರಾಖಂಡ), ರಾಜ್‌ಪುರಾ- ಪಟಿಯಾಲಾ (ಪಂಜಾಬ್‌), ದಿ (ಮಹಾರಾಷ್ಟ್ರ), ಪಾಲಕ್ಕಾಡ್‌ (ಕೇರಳ), ಆಗ್ರಾ ಮತ್ತು ಪ್ರಯಾಗ್‌ರಾಜ್‌ (ಉತ್ತರ ಪ್ರದೇಶ), ಗಯಾ (ಬಿಹಾರ), ಝರೀದಾಬಾದ್‌ (ತೆಲಂಗಾಣ), ಓರ್ವಕಲ್‌ ಮತ್ತು ಕೂಪರ್ತಿ (ಆಂಧ್ರ ಪ್ರದೇಶ), ಜೋಧಪುರ್‌-ಪಾಲಿ (ರಾಜಸ್ಥಾನ) ನಗರಗಳಲ್ಲಿ ಕೈಗಾರಿಕಾ ಕಾರಿಡಾರ್‌ಗಳು ತಲೆ ಎತ್ತಲಿವೆ ಎಂದು ಸಚಿವರು ತಿಳಿಸಿದ್ದಾರೆ.

ಜಾಗತಿಕ ಮಾನದಂಡಕ್ಕನುಗುಣವಾಗಿ ಪ್ಲಗ್‌ ಆ್ಯಂಡ್‌ಪ್ಲೇ, ವಾಕ್‌ ಟು ವರ್ಕ್‌ ಮತ್ತು ಅಹೆಡ್‌ ಆಫ್ ಡಿಮಾಂಡ್‌ ಪರಿಕಲ್ಪನೆಯಡಿ ಈ ಕಾರಿಡಾರ್‌ಗಳನ್ನು ನಿರ್ಮಾಣ ಮಾಡಲಾಗುತ್ತದೆ.

ಈಗ ಒಪ್ಪಿಗೆ ನೀಡಲಾಗಿರುವ ಎಲ್ಲ ಯೋಜನೆಗಳು ವಿಕಸಿತ ಭಾರತಕ್ಕೆ ನೆರವಾಗಲಿವೆ ಎಂದು ತಿಳಿಸಿದ್ದಾರೆ. ರಾಜ್ಯ ಸರಕಾರಗಳು ಮತ್ತು ಖಾಸಗಿಯವರ ನೆರವಿನೊಂದಿಗೆ ಪ್ಲಗ್‌ ಆ್ಯಂಡ್‌ ಪ್ಲೇ (ಎಲ್ಲ ಸೌಲಭ್ಯಗಳನ್ನು ಒಳಗೊಂಡ) ಮಾದರಿಯ 100 ಕೈಗಾರಿಕಾ ಪಾರ್ಕ್‌ಗಳ ನಿರ್ಮಾಣ ಕುರಿತು ಕೇಂದ್ರ ಸರಕಾರವು ಬಜೆಟ್‌ನಲ್ಲಿ ಘೋಷಿಸಿತ್ತು.

Advertisement

ಕೈಗಾರಿಕಾ ಸ್ಮಾರ್ಟ್‌ಸಿಟಿ ವಿವರ
1. ಅಮೃತಸರ್‌-ಕೋಲ್ಕತಾ ಕೈಗಾರಿಕಾ ಕಾರಿಡಾರ್‌ನಲ್ಲಿ 6 ಯೋಜನೆ: ಖುರ್ಪಿಯಾ, ಉತ್ತರಾಖಂಡ- 1,002 ಎಕರೆ, ರಾಜ್‌ಪುರ್‌-ಪಟಿಯಾಲ- 1,099 ಎಕರೆ, ಆಗ್ರಾ- ಉತ್ತರ ಪ್ರದೇಶ- 1,058 ಎಕರೆ, ಪ್ರಯಾಗ್‌ರಾಜ್‌- ಉತ್ತರ ಪ್ರದೇಶ -352 ಎಕರೆ, ಗಯಾ- ಬಿಹಾರ- 1,670 ಎಕರೆ
2. ದಿಲ್ಲಿ-ಮುಂಬಯಿ ಕೈಗಾರಿಕಾ ಕಾರಿಡಾರ್‌ನಲ್ಲಿ 2 ಯೋಜನೆ: ದಿ , ಮಹಾರಾಷ್ಟ್ರ- 6,056 ಎಕರೆ, ಜೋಧಪುರ್‌-ಪಾಲಿ, ರಾಜಸ್ಥಾನ- 1,578 ಎಕರೆ. 3. ದಕ್ಷಿಣ ಭಾರತದಲ್ಲಿ ಕಾರಿಡಾರ್‌: ಕೂಪರ್ತಿ, ಆಂಧ್ರಪ್ರದೇಶ- 2,596 ಎಕರೆ, ಓರ್ವಕಲ್‌, ಆಂಧ್ರಪ್ರದೇಶ- 2,621 ಎಕರೆ, ಝಹೀರಾಬಾದ್‌, ತೆಲಂಗಾಣ- 3,245 ಎಕರೆ, ಪಾಲಕ್ಕಾಡ್‌, ಕೇರಳ- 1,710 ಎಕರೆ(ಈ ಕೈಗಾರಿಕಾ ನಗರಗಳು ವೈಜಾಗ್‌-ಚೆನ್ನೈ, ಹೈದರಾಬಾದ್‌-ಬೆಂಗಳೂರು, ಹೈದರಾಬಾದ್‌-ನಾಗಪುರ್‌ ಮತ್ತು ಚೆನ್ನೈ-ಬೆಂಗಳೂರು (ವಿಸ್ತರಣೆ) ಕಾರಿಡಾರ್‌ಗಳ ವ್ಯಾಪ್ತಿಯಲ್ಲಿ ಬರಲಿವೆ)

ತುಮಕೂರಲ್ಲಿ ಪ್ರಕ್ರಿಯೆ ಆರಂಭ
ಇದೇ ರೀತಿಯ ನಗರಗಳ ನಿರ್ಮಾಣ ಈಗಾಗಲೇ ಧೋಲೆರಾ (ಗುಜರಾತ್‌), ಆರೀಕ್‌ (ಮಹಾರಾಷ್ಟ್ರ), ವಿಕ್ರಮ್‌ ಉದ್ಯೋಗಪುರಿ (ಮಧ್ಯಪ್ರದೇಶ), ಕೃಷ್ಣ ಪಟ್ಟಣಂ (ಆಂಧ್ರಪ್ರದೇಶ)ಗಳಲ್ಲಿ ಚಾಲ್ತಿಯಲ್ಲಿದೆ. ಅದೇ ರೀತಿ ಕರ್ನಾಟಕದ ತುಮಕೂರು, ಹರ್ಯಾಣದ ನಂಗಲ್‌ ಚೌಧರಿ, ಉತ್ತರ ಪ್ರದೇಶದ ಗ್ರೇಟರ್‌ ನೋಯ್ಡಾ ಮತ್ತು ದಾದ್ರಿಯಲ್ಲೂ ಕೈಗಾರಿಕಾ ಪ್ರದೇಶಗಳನ್ನು ನಿರ್ಮಿಸಲಾಗುತ್ತಿದೆ. ಇದಕ್ಕಾಗಿ ಸರಕಾರವು ಎಸ್‌ಪಿವಿ (ವಿಶೇಷ ಉದ್ದೇಶಿತ ಸಂಸ್ಥೆ)ಯು ಅಗತ್ಯ ಮೂಲ ಸೌಕರ್ಯಗಳಾದ ರಸ್ತೆ ಸಂಪರ್ಕ, ನೀರು ಮತ್ತು ವಿದ್ಯುತ್‌ ಪೂರೈಕೆ ಪ್ರಕ್ರಿಯೆಗಳಲ್ಲಿ ತೊಡಗಿಸಿಕೊಂಡಿದೆ.

ಏನಿದು ನೆಕ್ಲೇಸ್‌ ಸಿಟಿ ?
-ಎನ್‌ಐಸಿಡಿಪಿ ಅಡಿ ಕೈಗಾರಿಕಾ ಕಾರಿಡಾರ್‌ಗಳ ನಿರ್ಮಾಣಕ್ಕೆ ಕೇಂದ್ರ ಸಂಪುಟ ಒಪ್ಪಿಗೆ
-ಉತ್ತರಾಖಂಡದಿಂದ ಹಿಡಿದು ಕೇರಳದವರೆಗೆ 12 ಕಡೆ ಕೈಗಾರಿಕಾ ನಗರ ನಿರ್ಮಾಣ
-ಭಾರತದ ನಕ್ಷೆಯಲ್ಲಿ ಇಡೀ ದೇಶಕ್ಕೆ ಕೊರಳ ಹಾರದಂತೆ ಕಾಣಲಿದೆ ನೆಕ್ಲೇಸ್‌ ಯೋಜನೆ

ಯೋಜನೆಯ ಲಾಭ ?
-ಅಂದಾಜು 1.52 ಲಕ್ಷ ಕೋಟಿ ರೂ. ಹೂಡಿಕೆ ನಿರೀಕ್ಷೆ
-10 ಲಕ್ಷ ನೇರ, 30 ಲಕ್ಷ ಪರೋಕ್ಷ ಉದ್ಯೋಗ ಸೃಷ್ಟಿ
-ಪ್ರಧಾನಿ ಗತಿಶಕ್ತಿ ತತ್ವಗಳಡಿಕಾರಿಡಾರ್‌ಗಳ ನಿರ್ಮಾಣ
- ಪ್ರಾದೇಶಿಕ ಅಭಿವೃದ್ಧಿ ಸಮ ತೋಲನಕ್ಕೆ ಸುಸ್ಥಿರ ಸೌಕರ್ಯ

Advertisement

Udayavani is now on Telegram. Click here to join our channel and stay updated with the latest news.

Next