Advertisement

ಕರಾವಳಿಯ 60 ಸಾವಿರ ಹೈನುಗಾರರಿಗೆ 12 ಲಕ್ಷ ರೂ! ಏರಿಕೆಯಾದ ಹಾಲಿನ ದರ ನೇರ ರೈತರಿಗೆ

11:25 PM Jul 31, 2023 | Team Udayavani |

ಮಂಗಳೂರು: ಇಂದಿನಿಂದ ಪ್ರತೀ ಲೀಟರ್‌ ಹಾಲಿನ ದರ 3 ರೂ. ಏರಿಕೆಯಾಗಲಿದ್ದು ಈ ಹೆಚ್ಚುವರಿ ಹಣವು ಕರಾವಳಿಯ ಸುಮಾರು 60 ಸಾವಿರ ರೈತರ ಖಾತೆಗೆ ಜಮೆಯಾಗಲಿದೆ!

Advertisement

ದ.ಕ. ಹಾಗೂ ಉಡುಪಿ ಜಿಲ್ಲೆಯ 60 ಸಾವಿರ ಹೈನುಗಾರರಿಗೆ ಆ. 1ರಿಂದ ಲೀ.ಗೆ 3 ರೂ.ಗಳಂತೆ ಹೆಚ್ಚುವರಿ ಹಣ ಸಿಗಲಿದೆ. ಅಂದರೆ, 1 ದಿನಕ್ಕೆ 12 ಲಕ್ಷ ರೂ. ಹಣ ರೈತರಿಗೆ ಸಿಗಲಿದೆ.

ಸಾಮಾನ್ಯವಾಗಿ ಈಗ ರೈತರಿಗೆ 1 ಲೀ. ಹಾಲಿಗೆ 37 ರೂ. (ಸರಕಾರದ 5 ರೂ. ಸಹಾಯಧನ ಸೇರಿ)ಸಿಗುತ್ತಿದ್ದರೆ, ಮುಂದೆ 40 ರೂ. (ಹಾಲಿನ ಗುಣಮಟ್ಟ ಏರಿಕೆ ಇದ್ದ ಹಾಗೆ ದರ ವ್ಯತ್ಯಾಸ ಇರಲಿದೆ)ಸಿಗಲಿದೆ.

ರಾಜ್ಯದಲ್ಲಿ 1 ದಿನಕ್ಕೆ ಈ ಹಿಂದೆ 95 ಲಕ್ಷ ಲೀ. ಹಾಲು ಉತ್ಪಾದನೆ ಆಗುತ್ತಿತ್ತು. ಆದರೆ ಈಗ 84 ಲಕ್ಷ ಲೀ. ಮಾತ್ರ ಸಂಗ್ರಹಣೆ ಆಗುತ್ತಿದೆ. ಸರಾಸರಿ 10 ಲಕ್ಷ ಲೀ.ನಷ್ಟು ಕೊರತೆ ಆಗಿದೆ. ದಕ್ಷಿಣ ಕನ್ನಡ-ಉಡುಪಿಯಲ್ಲಿ ಸದ್ಯ ಪ್ರತೀದಿನ 4.50 ಲಕ್ಷ ಲೀ. ಹಾಲು ಅಗತ್ಯವಿದೆ. ಆದರೆ, ಸರಾಸರಿ 4 ಲಕ್ಷ ಲೀ. ಮಾತ್ರ ಹಾಲು ಈಗ ಲಭ್ಯವಾಗುತ್ತಿದೆ. ಹೀಗಾಗಿ, ಹೆಚ್ಚುವರಿ ಹಾಲನ್ನು ಹಾಸನ, ಮಂಡ್ಯದಿಂದ ತರಲಾಗುತ್ತಿದೆ. ಇದು ಹಾಲು ಒಕ್ಕೂಟಕ್ಕೂ ಹೊರೆಯಾಗುತ್ತಿದೆ. ಸರಕಾರ 3 ರೂ. ದರ ಏರಿಕೆ ಮಾಡಿರುವ ಕ್ರಮದಿಂದಾಗಿ ಕರಾವಳಿಯ ಹೈನುಗಾರರಿಗೆ ಹಾಲು ಉತ್ಪಾದನೆಗೆ ಹೊಸ ನಿರೀಕ್ಷೆ ಮೂಡಿದೆ.

“ಸಾಮಾನ್ಯವಾಗಿ ಏರಿಕೆ ಮಾಡುವ ಮಾರುಕಟ್ಟೆ ದರದಲ್ಲಿ ಕೊಂಚ ಭಾಗವನ್ನು ಈ ಹಿಂದೆ ಒಕ್ಕೂಟವು ನಿರ್ವಹಣೆ ಕಾರಣದಿಂದ ಬಳಸುತ್ತಿತ್ತು. ಆದರೆ ಈ ಬಾರಿ ಹಾಗಾಗುವುದಿಲ್ಲ. ಏರಿಕೆ ಮಾಡಿರುವ ಮಾರುಕಟ್ಟೆ ದರ (3 ರೂ.)ವನ್ನು ನೇರವಾಗಿ ರೈತರಿಗೆ ನೀಡಲಾಗುತ್ತದೆ’ ಎನ್ನುತ್ತಾರೆ ಕೆಎಂಎಫ್‌ ನಿರ್ದೇಶಕ ಕಾಪು ದಿವಾಕರ ಶೆಟ್ಟಿ.

Advertisement

ಸಹಾಯಧನ ಬಾಕಿ!
ಸರಕಾರ 5 ರೂ. ಸಹಾಯಧನ ನೀಡು ತ್ತದೆ. ಆದರೆ, ಇದು ಸಮರ್ಪ ಕವಾಗಿ ದೊರೆಯುತ್ತಿಲ್ಲ ಎಂಬ ದೂರು ಇದೆ. ಕಳೆದ ಫೆಬ್ರವರಿವರೆಗೆ ಮಾತ್ರ ಸಬ್ಸಿಡಿ ಬಂದಿದೆ. ಆ ಬಳಿಕದ ಸಬ್ಸಿಡಿ ಇನ್ನೂ ಸಿಕ್ಕಿಲ್ಲ ಎಂದು ಹೈನುಗಾರರು ದೂರಿದ್ದಾರೆ.

ಕೊರತೆ ಯಾಕೆ?
ಋತುಮಾನ ವ್ಯತ್ಯಾಸ ಹಾಗೂ ಅನಿಯಮಿತ ಮಳೆ ಸಂಕಷ್ಟದಿಂದ ಹಾಲು ಉತ್ಪಾದನೆ ಸಹಜವಾಗಿ ಕಡಿಮೆಯಾಗುತ್ತದೆ. ಈ ಬಾರಿ ಚರ್ಮಗಂಟು ರೋಗ ಬಹುಪ್ರಮಾಣದಲ್ಲಿ ವ್ಯಾಪಿಸಿ ಹಾಲು ಉತ್ಪಾದನೆಗೆ ಬಹುದೊಡ್ಡ ಹೊಡೆತ ನೀಡಿತ್ತು. ಹೈನುಗಾರರಿಗೆ ಸರಕಾರದಿಂದ ಸಿಗುವ ಪ್ರೋತ್ಸಾಹಧನ ಕಡಿಮೆ ಹಾಗೂ ಪಶು ಆಹಾರಗಳ ಬೆಳೆ ಗಗನಮುಖೀಯಾದ ಕಾರಣ ಕೆಲವರು ಇದರಿಂದ ವಿಮುಖರಾಗುತ್ತಿದ್ದಾರೆ ಎಂಬ ಅಭಿಪ್ರಾಯವೂ ಇದೆ.

“ಗಡಿ’ ಮೀರಿದ ಹಾಲು ಮಾರಾಟ!
ಕರ್ನಾಟಕ ಗಡಿ ಭಾಗದಲ್ಲಿರುವ ಕೆಲವು ಹೈನುಗಾರರು ಪಕ್ಕದ ಕೇರಳಕ್ಕೆ ಹಾಲು ಮಾರಾಟ ಮಾಡುತ್ತಿರುವುದರಿಂದ ಸಾವಿರಾರು ಲೀ.ನಷ್ಟು ಹಾಲು ಕರಾವಳಿಗೆ ಕೊರತೆ ಕಾಡುತ್ತಿದೆ. ಕೇರಳದಲ್ಲಿ ಕರ್ನಾಟಕಕ್ಕಿಂತ ಅಧಿಕ ಹಣ ನೀಡಿ ಹಾಲು ಖರೀದಿಸಲಾಗುತ್ತಿದೆ. ಆದರೆ, ಕರ್ನಾಟಕದಲ್ಲಿ ಸದ್ಯ 37 ರೂ. ಮಾತ್ರ ಹಣ ಸಿಗುತ್ತಿದೆ. ಈ ಕಾರಣದಿಂದ, ಗಡಿ ಭಾಗದಲ್ಲಿರುವ ಕೆಲವು ಮಂದಿ ಕೇರಳದಲ್ಲಿ ಹಾಲು ಮಾರಾಟ ಮಾಡುತ್ತಿದ್ದಾರೆ!

ಹೈನೋದ್ಯಮದಲ್ಲಿ ಭರವಸೆ
ಎರಡೂ ಜಿಲ್ಲೆಯಲ್ಲಿ ಹಾಲಿನ ಬೇಡಿಕೆ ಅಧಿಕವಿದೆ. ಆದರೆ, ಉತ್ಪಾದನೆ ಪ್ರಮಾಣ ಕಡಿಮೆಯಾಗಿದೆ. ಇದೀಗ ಸರಕಾರ 3 ರೂ. ದರ ಏರಿಕೆಯ ಲಾಭವನ್ನು ರೈತರಿಗೆ ವರ್ಗಾಯಿಸಿದೆ. ಈ ಮೂಲಕ ಎರಡೂ ಜಿಲ್ಲೆಯಲ್ಲಿ ಹೈನುಗಾರರು ಹಾಲು ಉತ್ಪಾದನೆಗೆ ವಿಶೇಷ ಆದ್ಯತೆ ನೀಡಬೇಕಾಗಿದೆ. ಈ ಮೂಲಕ ಹೈನೋದ್ಯಮದಲ್ಲಿ ಹೊಸ ಭರವಸೆ ನಿರೀಕ್ಷಿಸಲಾಗಿದೆ.
-ಸುಚರಿತ ಶೆಟ್ಟಿ, ಅಧ್ಯಕ್ಷರು,
ದ.ಕ. ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ

12 ಲಕ್ಷ ರೂ. ಲಾಭ
3 ರೂ. ದರ ಏರಿಕೆ ಕಾರಣ ದ.ಕ.ಮತ್ತು ಉಡುಪಿ ಜಿಲ್ಲೆಯ 60 ಸಾವಿರ ಹಾಲು ಉತ್ಪಾದಕರಿಗೆ ಅನುಕೂಲವಾಗಲಿದೆ. ದಿನಕ್ಕೆ 4 ಲಕ್ಷ ಲೀ. ಹಾಲು ಲಭ್ಯವಾಗುತ್ತಿರುವ ಕಾರಣದಿಂದ 3 ರೂ. ದರ ಏರಿಕೆಯಿಂದ 12 ಲಕ್ಷ ರೂ. ಪ್ರತೀ ದಿನ ರೈತರಿಗೆ ಸಿಗಲಿದೆ.
-ಡಿ.ಅಶೋಕ್‌,
ವ್ಯವಸ್ಥಾಪಕ ನಿರ್ದೇಶಕರು
ದ.ಕ. ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ

-ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next