ಗುಂಡ್ಲುಪೇಟೆ: ಕಬಿನಿ ನದಿ ಮೂಲ ದಿಂದ ಕೆರೆಗಳಿಗೆ ನೀರು ತುಂಬಿಸುವ ಮುಂದುವರಿದ ಯೋಜನೆಯ ವ್ಯಾಪ್ತಿಗೆ ಸೇರಿದ 12 ಕೆರೆಗಳಿಗೆ ಜನವರಿ ಮಾಸಾಂತ್ಯದಲ್ಲಿ ನೀರು ತುಂಬಿಸಲಾಗುವುದು ಎಂದು ಶಾಸಕ ಸಿ.ಎಸ್.ನಿರಂಜನಕುಮಾರ್ ಹೇಳಿದರು.
ತಾಲೂಕಿನ ಕರಕಲಮಾದಹಳ್ಳಿ ಹಾಗೂ ಯರಿಯೂರು ಕೆರೆಗಳಿಗೆ ಬಾಗಿನ ಅರ್ಪಿಸಿ ಮಾತನಾಡಿದ ಅವರು. ಯೋಜನೆಯ ಉಳಿದ ಕೆರೆಗಳಿಗೆ ಈ ಮಾಸಾಂತ್ಯದಲ್ಲಿ ನೀರು ತುಂಬಿಸಲಾಗುವುದು. ಈ ಮೂಲಕ ಈ ಭಾಗದ ಜನತೆಯ ಬಹುದಿನದ ನಿರೀಕ್ಷೆ ಈಡೇರಿಸಲಾಗುತ್ತಿದೆ ಎಂದರು.
ಈಗಾಗಲೇ ಹುರಾ ಗ್ರಾಮದ 2ನೇ ಹಂತದ ಕೆರೆಗೆ ನೀರು ತುಂಬಿಸುವ ಯೋಜನೆಗೆ ಸರ್ಕಾರ 18 ಕೋಟಿ ರೂ. ಅನುದಾನ ನೀಡಲು ಹಣಕಾಸು ಇಲಾಖೆ ಒಪ್ಪಿಗೆ ನೀಡಿದೆ. ಇದನ್ನು ಈ ಬಾರಿಯ ಬಜೆಟ್‌ನಲ್ಲಿ ಸೇರಿಸಲಾಗುತ್ತಿದೆ. ಶೀಘ್ರದಲ್ಲೇ ತಾಲೂಕಿನ ಎಲ್ಲಾ ಕೆರೆಗಳಿಗೂ ನದಿನೀರು ತುಂಬಿಸಲಾಗುವುದು. ತೀವ್ರ ಅಂತರ್ಜಲ ಕೊರತೆ ಎದುರಿಸುತ್ತಿರುವ ಬೇಗೂರು ಹೋಬಳಿಯ ಇತರ ಕೆರೆಗಳಿಗೆ ನೀರು ತುಂಬಿಸಲು ಹುರಾ 2ನೇ ಹಂತದ ನೀರಾವರಿ ಯೋಜನೆಯನ್ನು ವಿಶೇಷವಾಗಿ ಸಿದ್ಧಪಡಿಸಲಾಗಿದೆ. ಈಹಿಂದೆ ಮುಖ್ಯಮಂತ್ರಿ ಯಡಿಯೂರಪ್ಪ 218 ಕೋಟಿ ರೂ. ನೀಡಿದ್ದರಿಂದ ಜಿಲ್ಲೆಯ ಹಲವಾರು ಕೆರೆಗಳಿಗೆ ನದಿನೀರು ತುಂಬಿಸಲು ಸಾಧ್ಯವಾಗಿದೆ ಎಂದರು.
ಇದನ್ನೂ ಓದಿ:ಮ್ಯಾನುವಲ್ ಸ್ಕ್ಯಾವೆಂಜರ್ ಗುರುತಿಸಲು ಸಮೀಕ್ಷೆ ನಡೆಸಿ
ಈ ವೇಳೆ ಮಂಡಲಾಧ್ಯಕ್ಷ ಜಗದೀಶ್, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಪ್ರಣಯ್, ತಾಪಂ ಸದಸ್ಯ ಕೆ.ಎನ್. ಮಹದೇವಸ್ವಾಮಿ, ಮಾಜಿ ಸದಸ್ಯ ಸಿ.ಮಹದೇವಪ್ರಸಾದ್, ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಕೊಡಸೋಗೆ ಶಿವಬಸಪ್ಪ, ಮುಖಂಡರಾದ ಕುಂದಕೆರೆ ನಾಗಮಲ್ಲಪ್ಪ, ಗುಡಿಮನೆ ಅಭಿಷೇಕ್, ವಿವೇಕ್ ಸ್ವಾಮಿ, ಸಣ್ಣಪ್ಪ, ಕೆ.ಎಲ್. ಮಹದೇವಸ್ವಾಮಿ ಇತರರಿದ್ದರು