ಬೆಂಗಳೂರು: ಸರಕಾರಿ ಕಾಲೇಜು ವಿದ್ಯಾರ್ಥಿಗಳಿಗೆ ಸಿಇಟಿ, ನೀಟ್ ಸೇರಿ ವಿವಿಧ ಕೋರ್ಸ್‌ಗಳ ಪ್ರವೇಶಕ್ಕೆ ಅಗತ್ಯವಾದ ತರಬೇತಿ ನೀಡಲು ರಾಜ್ಯ ಸರಕಾರ ಮುಂದಾಗಿದೆ.
ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಕಾರ್ಯಕ್ರಮವನ್ನು ಜಾರಿ ಮಾಡಲಾಗುವುದು. ವಾರ್ಷಿಕ ಕನಿಷ್ಠ 20 ಸಾವಿರ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಇಂಥ ಕೋರ್ಸ್‌ಗಳ ತರಬೇತಿ ಕಾರ್ಯಕ್ರಮಕ್ಕಾಗಿ 12 ಕೋಟಿ ರೂ.ವನ್ನು ಸರಕಾರ ಬಿಡುಗಡೆ ಮಾಡಿದೆ. ಖಾಸಗಿ ಶಾಲೆಗಳ ವಿದ್ಯಾರ್ಥಿಗಳು ನೀಟ್, ಜೆಇಇ ಮತ್ತಿತರ ಪ್ರವೇಶ ಪರೀಕ್ಷೆಗಳಿಗೆ ಪ್ರತ್ಯೇಕ ಶುಲ್ಕ ಪಾವತಿಸಿ ಕಾಲೇಜು ಹಂತದಲ್ಲೇ ತರಬೇತಿ ಪಡೆಯುತ್ತಾರೆ. ಇಲ್ಲವೇ ಖಾಸಗಿ ಕೋಚಿಂಗ್ ಸೆಂಟರ್‌ಗಳಲ್ಲಿ ಸಿದ್ಧರಾಗುತ್ತಾರೆ. ಸರಕಾರಿ ಕಾಲೇಜುಗಳಲ್ಲಿ ಓದುವ ವಿದ್ಯಾರ್ಥಿಗಳಿಗೂ ತರಬೇತಿ ದೊರಕಬೇಕು ಎನ್ನುವ ಉದ್ದೇಶದಿಂದ ವಾರ್ಷಿಕ ಕನಿಷ್ಠ 20 ಸಾವಿರ ವಿದ್ಯಾರ್ಥಿಗಳಿಗೆ ತರಬೇತಿ ನೀಡಲು ಆಯವ್ಯಯದಲ್ಲೇ ಘೋಷಣೆ ಮಾಡಲಾಗಿತ್ತು ಎಂದು ತಿಳಿಸಿದರು.
ಈ ಸಂಬಂಧ ತರಬೇತಿ ಸಂಸ್ಥೆಗಳನ್ನು ಆಯ್ಕೆ ಮಾಡಲಾಗುತ್ತಿದೆ. ಹೆಚ್ಚಿನ ವಿದ್ಯಾರ್ಥಿಗಳಿಂದ ಬೇಡಿಕೆ ಬಂದರೆ ಕಾಲೇಜು ಹಂತಗಳಲ್ಲೇ ಕಿರು ಪರೀಕ್ಷೆ ನಡೆಸಿ, ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು.
ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯು ಅನುತ್ತಿರ್ಣರಾದ ವಿದ್ಯಾರ್ಥಿಗಳಿಗೆ ಶಾಲೆ ಹಾಗೂ ಕಾಲೇಜಿಗೆ ಮರು ದಾಖಲಾಗಲು ಅವಕಾಶ ಕಲ್ಪಿಸಲಾಗಿದೆ. ಈ ಮಕ್ಕಳಿಗೂ ಸಮವಸ್ತ್ರ, ಪಠ್ಯಪುಸ್ತಕ, ಶೂ, ಸಾಕ್ಸ್ , ಮಧ್ಯಾಹ್ನದ ಬಿಸಿಯೂಟದ ಸೌಲಭ್ಯ ಕಲ್ಪಿಸಲಾಗುವುದು ಎಂದರು.
ಶಾಲೆಗಳಲ್ಲಿ ಶಿಕ್ಷಕರ ಕೊರತೆ ನೀಗಿಸಲು ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ಹಿಂದಿನ ಸರಕಾರದ ಅವಧಿಯಲ್ಲಿ ವಿಳಂಬವಾಗಿದ್ದ 13,500 ಶಿಕ್ಷಕರ ನೇಮಕಾತಿ ಪೂರ್ಣಗೊಳಿಸಿ, ಅತಿಥಿ ಶಿಕ್ಷಕರನ್ನು ಬಳಸಿಕೊಳ್ಳಲಾಗಿದೆ. ಈ ವರ್ಷ ಕಲ್ಯಾಣ ಕರ್ನಾಟಕದ 7 ಜಿಲ್ಲೆಗಳಲ್ಲಿ ಒಂದು ಸಾವಿರಕ್ಕೂ ಹೆಚ್ಚು ಪೂರ್ವ ಪ್ರಾಥಮಿಕ ಶಾಲೆಗಳನ್ನು ಆರಂಭಿಸಲಾಗುತ್ತಿದೆ ಎಂದರು.