ಬೆಂಗಳೂರು: ಮಲೆನಾಡು, ಕರಾವಳಿ, ಮಧ್ಯ ಕರ್ನಾಟಕ, ಉತ್ತರ ಕರ್ನಾಟಕ ಸೇರಿ ರಾಜ್ಯದ ಹಲವೆಡೆ ಉತ್ತಮ ಮಳೆಯಾಗುತ್ತಿದೆ. ಭಾನುವಾರ ಮುಂಜಾನೆ 8.30ಕ್ಕೆ ಅಂತ್ಯಗೊಂಡ 24 ತಾಸುಗಳ ಅವಧಿಯಲ್ಲಿ ಕೊಲ್ಲೂರಿನಲ್ಲಿ ರಾಜ್ಯದಲ್ಲಿಯೇ ಅಧಿಕ 12 ಸೆಂ.ಮೀ.ಮಳೆ ಸುರಿಯಿತು.
ಉತ್ತರ ಕನ್ನಡ, ಶಿವಮೊಗ್ಗ ಜಿಲ್ಲೆ ಸೇರಿ ಮಲೆನಾಡಿನಲ್ಲಿ ಉತ್ತಮ ಮಳೆಯಾಗುತ್ತಿದೆ. ಗಾಳಿ, ಮಳೆಯಿಂದಾಗಿ ತೀರ್ಥಹಳ್ಳಿ, ಸಾಗರ ತಾಲೂಕಿನ ಹಲವೆಡೆ ವಿದ್ಯುತ್ ಕಂಬಗಳು ಉರುಳಿ ವಿದ್ಯುತ್ ಪೂರೈಕೆ ಅಸ್ತವ್ಯಸ್ತಗೊಂಡಿದೆ. ತುಂಗಾ, ಮಾಲತಿ ನದಿಗಳಲ್ಲಿ ನೀರಿನ ಹರಿವು ಕಂಡು ಬಂದಿದೆ.
ಬೆಳಗಾವಿ, ಖಾನಾಪುರ ಭಾಗದಲ್ಲಿ ಮಳೆಯಾಗುತ್ತಿದ್ದು, ಮಲಪ್ರಭಾ ನದಿಗೆ ನೀರು ಹರಿದು ಬರುತ್ತಿದೆ. ಖಾನಾಪುರದ ನಂದಗಡ ಗ್ರಾಮದಿಂದ ಸಂಗೊಳ್ಳಿ ರಾಯಣ್ಣ ಸಮಾಧಿ ಗೆ ತೆರಳುವ ರಸ್ತೆಯಲ್ಲಿ ಮಣ್ಣು ಕುಸಿದು ರಸ್ತೆ ಸಂಚಾರಕ್ಕೆ ಅಡ್ಡಿಯಾಗಿದೆ.
ಶಹಾಪುರದಲ್ಲಿ ಮಧ್ಯಾಹ್ನ ಸುರಿದ ಮಳೆಯಿಂದಾಗಿ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಯಾದಗಿರಿ ಸುತ್ತಮುತ್ತ ಮಧ್ಯಾಹ್ನ 10 ನಿಮಿಷ, ಸಂಜೆಯ ವೇಳೆ, ಗುರುಮಠಕಲ್ ವ್ಯಾಪ್ತಿಯಲ್ಲಿ ಸುಮಾರು 15 ನಿಮಿಷಕ್ಕೂ ಹೆಚ್ಚು ಕಾಲ ಮಳೆಯಾಗಿದೆ. ದಾವಣಗೆರೆ, ಜಗಳೂರು, ಹರಿಹರ ತಾಲೂಕುಗಳಲ್ಲಿಯೂ ಜಿಟಿ ಜಿಟಿ ಮಳೆಯಾಗುತ್ತಿದೆ.
ಈ ಮಧ್ಯೆ, ರಾಜ್ಯದ ಕರಾವಳಿ, ಮಲೆನಾಡು ಮತ್ತು ಒಳನಾಡು, ಬಯಲು ಸೀಮೆಯಲ್ಲಿ ಭಾರೀ ಮಳೆ ಸುರಿಯುವ ಮುನ್ನೆಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ. ಹೀಗಾಗಿ, ಪ್ರತಿ ಪಂಚಾಯತ್ ಮತ್ತು ಹೋಬಳಿಗಳಲ್ಲಿ ಎಚ್ಚರಿಕೆಯಿಂದ ಇರುವಂತೆ, ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಸನ್ನದ್ಧರಾಗಿರುವಂತೆ ಸಂಬಂಧಪಟ್ಟ ಜಿಲ್ಲಾಡಳಿತಗಳಿಗೆ ಸರ್ಕಾರದಿಂದ ಎಚ್ಚರಿಕೆ ರವಾನಿಸಲಾಗಿದೆ.
ಲೋಂಡಾ ಬಳಿ ರೈಲು ಹಳಿ ಮೇಲೆ ಬಿದ್ದ ಮರ: ಖಾನಾಪುರ ತಾಲೂಕಿನ ಲೋಂಡಾ ಬಳಿ ಮಿರಜ್‌ದಿಂದ ಬೆಂಗಳೂರಿಗೆ ಹೊರಟಿದ್ದ ರೈಲಿನ ಮುಂದೆಯೇ ದೊಡ್ಡ ಮರ ಮುರಿದು ಬಿತ್ತು. ಕೂಡಲೇ ರೈಲು ನಿಲ್ಲಿಸಿದ ಲೋಕೋ ಪೈಲೆಟ್ ಇದೇ ಮಾರ್ಗದ ಇನ್ನೊಂದು ಹಳಿಯಲ್ಲಿ ಬರುತ್ತಿದ್ದ ರೈಲನ್ನು ತಡೆದು ಅನಾಹುತ ತಡೆದರು. ರೈಲಿನ ಎಂಜಿನ್‌ನಲ್ಲಿ ಸಿಕ್ಕಿ ಹಾಕಿಕೊಂಡ ಮರದ ಕೊಂಬೆಯಿಂದಾಗಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.