Advertisement
ಜಾರ್ಖಂಡ್ ನ 23 ವರ್ಷಗಳ ರಾಜಕೀಯ ಇತಿಹಾಸದಲ್ಲಿ 12 ಬಾರಿ ಮುಖ್ಯಮಂತ್ರಿ ಬದಲಾವಣೆಯಾಗಿದೆ. ಅಂದರೆ ಜಾರ್ಖಂಡ್ ನ ಮುಖ್ಯಮಂತ್ರಿಯಾದವರು ಕೇವಲ ಒಂದೂವರೆ ವರ್ಷಗಳ ಕಾಲ ಆಡಳಿತ ನಡೆಸಿದ್ದರು!
Related Articles
Advertisement
ರಾಜಕೀಯ ಅಸ್ಥಿರತೆ ಮತ್ತು ಮುಖ್ಯಮಂತ್ರಿಗಳ ಬದಲಾವಣೆ ಕಾಣುತ್ತಿರುವ ಜಾರ್ಖಂಡ್ ಇದೀಗ 12ನೇ ಮುಖ್ಯಮಂತ್ರಿ ಗದ್ದುಗೆ ಏರಲು ಸಿದ್ಧರಾಗಿದ್ದಾರೆ. ಮುಖ್ಯಮಂತ್ರಿ ಸ್ಥಾನಕ್ಕೆ ಹೇಮಂತ್ ಸೊರೇನ್ ಚಂಪೈ ಸೊರೇನ್ ಅವರ ಹೆಸರನ್ನು ಸೂಚಿಸಿದ್ದಾರೆ.
2000ನೇ ಇಸವಿ ನವೆಂಬರ್ 15ರಂದು ಜಾರ್ಖಂಡ್ ನೂತನ ರಾಜ್ಯವಾಗಿ ಗುರುತಿಸಲ್ಪಟ್ಟಿತ್ತು. ಅಂದಿನಿಂದ ಈವರೆಗೂ ಜಾರ್ಖಂಡ್ ನಲ್ಲಿ ರಾಜಕೀಯ ಅಸ್ಥಿರತೆಯೇ ಮುಂದುವರಿದಿದೆ. ತಂದೆ ಶಿಬು ಸೊರೇನ್ ಅವರಂತೆ ಹೇಮಂತ್ ಸೊರೇನ್ ಬಂಧನಕ್ಕೊಳಗಾದ ಜಾರ್ಖಂಡ್ ನ ಮೂರನೇ ಮುಖ್ಯಮಂತ್ರಿಯಾಗಿದ್ದಾರೆ. (ಸಿಎಂ ಮಧು ಕೋಡಾ ಕೂಡಾ ಬಂಧನಕ್ಕೊಳಗಾಗಿದ್ದರು). 23 ವರ್ಷಗಳ ರಾಜಕೀಯ ಇತಿಹಾಸದಲ್ಲಿ ಕೇವಲ ಒಬ್ಬರು ಮುಖ್ಯಮಂತ್ರಿ ಮಾತ್ರ ಐದು ವರ್ಷಗಳ ಕಾಲ ಪೂರ್ಣಾವಧಿ ಆಡಳಿತ ನಡೆಸಿದ್ದಾರೆ.
ಚುನಾವಣೆ ಮತ್ತು ಮೈತ್ರಿ ಸರ್ಕಾರ:
2000ನೇ ಇಸವಿಯಿಂದ 2014ರ ನಡುವೆ ಜಾರ್ಖಂಡ್ ಒಂಬತ್ತು ಸರ್ಕಾರಗಳನ್ನು ಕಂಡಿದ್ದು, ಐವರು ಮುಖ್ಯಮಂತ್ರಿಗಳಾಗಿದ್ದರು. ಜತೆಗೆ ಮೂರು ಬಾರಿ ರಾಷ್ಟ್ರಪತಿ ಆಡಳಿತಕ್ಕೆ ಒಳಪಟ್ಟಿತ್ತು. ಭಾರತೀಯ ಜನತಾ ಪಕ್ಷದ ಬಾಬುಲಾಲ್ ಮರಾಂಡಿ ಎರಡು ವರ್ಷ ಮೂರು ತಿಂಗಳ ಕಾಲ ಆಡಳಿತ ನಡೆಸಿದ ಮೊದಲ ಮುಖ್ಯಮಂತ್ರಿಯಾಗಿದ್ದಾರೆ. ಮುಖ್ಯಮಂತ್ರಿಗಳಾಗಿದ್ದ ಬಾಬುಲಾಲ್ ಮರಾಂಡಿ, ಅರ್ಜುನ್ ಮುಂಡಾ, ಶಿಬು ಸೊರೇನ್, ಮಧು ಕೋಡಾ ಮತ್ತು ಹೇಮಂತ್ ಸೊರೇನ್ ಅಂದಾಜು ಆಡಳಿತಾವಧಿ (2004ರಿಂದ 2014) 15 ತಿಂಗಳ ಕಾಲ!
ಅರ್ಜುನ್ ಮುಂಡಾ ಅವರು 2014ರ ವಿಧಾನಸಭಾ ಚುನಾವಣೆಯಲ್ಲಿ ರಘುಬರ್ ದಾಸ್ ಸೋಲುವಂತೆ ಮಾಡಿದ್ದರು ಎಂದು ಹೆಸರು ಹೇಳಲು ಇಚ್ಚಿಸದ ಪತ್ರಕರ್ತರೊಬ್ಬರು ಇಂಡಿಯಾ ಟುಡೇಗೆ ತಿಳಿಸಿದ್ದಾರೆ.
14 ವರ್ಷಗಳ ಕಾಲಾವಧಿಯಲ್ಲಿ ಜೆಎಂಎಂನ ಶಿಬು ಸೊರೇನ್ ಮತ್ತು ಬಿಜೆಪಿಯ ಅರ್ಜುನ್ ಮುಂಡಾ ಮೂರು ಬಾರಿ ಮುಖ್ಯಮಂತ್ರಿಗಳಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಹೇಮಂತ್ ಸೊರೇನ್, ಮಧು ಕೋಡಾ ಮತ್ತು ಬಾಬುಲಾಲ್ ಮರಾಂಡಿ ಒಂದು ಬಾರಿಗೆ ಸಿಎಂ ಆಗಿ ಆಯ್ಕೆಯಾಗಿದ್ದರು.
ಇದೀಗ ಹೇಮಂತ್ ಸೊರೈನ್ ಬಂಧನದ ಬಳಿಕ ಚಂಪೈ ಸೊರೇನ್ ಜಾರ್ಖಂಡ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲು ಸಿದ್ಧತೆ ನಡೆಸಿದ್ದಾರೆ.
ಬಿಜೆಪಿಯ ರಘುಬರ್ ದಾಸ್ ಮಾತ್ರ 5 ವರ್ಷ ಪೂರ್ಣಾಡಳಿತ:
2014ರ ನಂತರ ಜಾರ್ಖಂಡ್ ನಲ್ಲಿ ರಾಜಕೀಯ ಸ್ಥಿತಿ ಸ್ಥಿರತೆ ಕಂಡಿತ್ತು. ಭಾರತೀಯ ಜನತಾ ಪಕ್ಷದ ರಘುಬರ್ ದಾಸ್ ಮುಖ್ಯಮಂತ್ರಿಯಾಗಿ 5 ವರ್ಷ ಪೂರ್ಣಗೊಳಿಸಿದ್ದರು. ಈ ನಿಟ್ಟಿನಲ್ಲಿ ಐದು ವರ್ಷ ಆಡಳಿತ ನಡೆಸಿದ ಜಾರ್ಖಂಡ್ ನ ಮೊದಲ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆ ದಾಸ್ ಅವರದ್ದಾಗಿದೆ.
ಐದು ವರ್ಷಗಳ ಆಡಳಿತ ಪೂರ್ಣಗೊಳಿಸಿದ ನಂತರ 2019ರಲ್ಲಿ ನಡೆದ ಜಾರ್ಖಂಡ್ ವಿಧಾನಸಭಾ ಚುನಾವಣೆಯಲ್ಲಿ ರಘುಬರ್ ದಾಸ್ ಪರಾಜಯಗೊಂಡಿದ್ದರು. 2019ರ ಚುನಾವಣೆಯಲ್ಲಿ ಬಿಜೆಪಿ ಸೋತ ನಂತರ ಬಿಜೆಪಿಯ ಅರ್ಜುನ್ ಮುಂಡಾ ಅವರನ್ನು ದೆಹಲಿಗೆ ಕರೆಯಿಸಿ ಕೇಂದ್ರ ಸರ್ಕಾರದಲ್ಲಿ ಕಾರ್ಯನಿರ್ವಹಿಸುವಂತೆ ಸೂಚಿಸಲಾಗಿತ್ತು.
2019ರಲ್ಲಿ ಹೇಮಂತ್ ಸೊರೇನ್ ನೇತೃತ್ವದ ಜೆಎಂಎಂ ಮೈತ್ರಿಕೂಟ ಸರ್ಕಾರ ರಚಿಸಿತ್ತು. ಜಾರ್ಖಂಡ್ ಮುಕ್ತಿ ಮೋರ್ಚಾಕ್ಕೆ ಕಾಂಗ್ರೆಸ್ ಮತ್ತು ಇತರ ಮೂರು ಪ್ರಾದೇಶಿಕ ಪಕ್ಷಗಳು ಬೆಂಬಲ ನೀಡಿದ್ದವು. ಜೆಎಂಎಂನ ಶಿಬು ಸೊರೇನ್, ಹೇಮಂತ್ ಸೊರೇನ್ ಅವರನ್ನು ಹೊರತುಪಡಿಸಿ ಜಾರ್ಖಂಡ್ ನ ಎಲ್ಲಾ ಮುಖ್ಯಮಂತ್ರಿಗಳು ರಾಷ್ಟ್ರೀಯ ಸ್ವಯಂ ಸೇವಕ (ಆರ್ ಎಸ್ ಎಸ್) ಸಂಘದ ಜತೆ ಸಂಪರ್ಕ ಹೊಂದಿದ್ದರು.
ಜೆಎಂಎಂ 5 ವರ್ಷ ಆಡಳಿತ ಪೂರ್ಣಗೊಳಿಸುವ ಸಾಧ್ಯತೆ:
ಭಾರತೀಯ ಜನತಾ ಪಕ್ಷದೊಳಗಿನ ಆಂತರಿಕ ಕಚ್ಚಾಟದ ಲಾಭಗಳಿಸಲು ಮುಂದಾಗಿರುವ ಜೆಎಂಎಂ ಮತ್ತೆ ಅಧಿಕಾರದ ಗದ್ದುಗೆ ಏರಲು ಕಸರತ್ತು ನಡೆಸುತ್ತಿದೆ. ಈ ನಿಟ್ಟಿನಲ್ಲಿ ಜೆಎಂಎಂ ಮೈತ್ರಿ ಸರ್ಕಾರ ಐದು ವರ್ಷಗಳ ಆಡಳಿತ ಪೂರ್ಣಗೊಳಿಸುವ ಸಾಧ್ಯತೆ ಇದೆ.