Advertisement

ಮಾತೃಭಾಷೆಯಲ್ಲೇ ಪ್ರಬಲ ಅಭಿವ್ಯಕ್ತಿ ಸಾಮರ್ಥ್ಯ

02:02 PM Feb 16, 2021 | Team Udayavani |

ಚಾಮರಾಜನಗರ (ಕೆ.ಪ್ರಭುಶಂಕರ ವೇದಿಕೆ): ಕನ್ನಡ ಮನೆಯಂಗಳದ, ಮನದಂಗಳದ ಭಾಷೆಯಾಗದಿದ್ದರೆ, ರಾಜ್ಯ ಭಾಷೆಯಾಗಲು ಸಾಧ್ಯವಿಲ್ಲ, ಸಾರ್ವಭೌಮ ಭಾಷೆಯಾಗಲೂ ಸಾಧ್ಯವಿಲ್ಲ ಎಂದು ರಾಜ್ಯ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಸಿ.ಸೋಮಶೇಖರ್‌ ಅಭಿಪ್ರಾಯಪಟ್ಟರು.

Advertisement

ನಗರದ ಜೆ.ಎಚ್‌.ಪಟೇಲ್‌ ಸಭಾಂಗಣದಲ್ಲಿ ಕನ್ನಡ ಸಾಹಿತ್ಯ ಪರಿಷತ್‌ನಿಂದ ಆಯೋಜಿಸಿರುವ 11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು. ತಾಯಂದಿರು ತಮ್ಮ ಮಕ್ಕಳಿಗೆ ಹಾಲುಣಿಸುವಾಗ ಮಕ್ಕಳ ನಾಲಗೆ ಮೇಲೆ ಕನ್ನಡ ‌ದ ದೀಕ್ಷೆ ಕೊಡಬೇಕು. ನಾವು ನಮ್ಮ ಮಕ್ಕಳಿಗೆ ಸಂಸ್ಕೃತಿಕಲಿಸಬೇಕು. ಮೊದಲು ಮಾನವನಾಗು ಎಂಬುದನ್ನು ಕಲಿಸಬೇಕು. ಆದರೆ, ಪ್ರಸ್ತುತ ದಿನಗಳಲ್ಲಿ ತಾಯಂದಿರುವ ತಮ್ಮ ಮಕ್ಕಳಿಗೆ ಎಂಜಿನಿಯರ್‌ ಆಗು, ಡಾಕ್ಟರ್‌ ಆಗು, ಮಿನಿಸ್ಟರ್‌ ಆಗುವ ಮೂಲಕ ಶ್ರೀಮಂತನಾಗು ಎಂದು ಹೇಳುತ್ತಿರುವುದು ದುರಂತ. ಮೊದಲು ಕನ್ನಡ ದೀಪ ಮನೆಯೊಳಗೆ ಮನೆಯಂಗಳದಲ್ಲಿ ಬೆಳಗಬೇಕು. ಮಮ್ಮಿ, ಡ್ಯಾಡಿ ಸಂಸ್ಕೃತಿ ಹೋಗಬೇಕು. ಮಕ್ಕಳು ಇಂಗಿಷ್‌ನ ‌ಲ್ಲಿ ಮಾತನಾಡಿದರೆ ಪೋಷಕರಿಗೆ ಏನೋ ಒಂದು ಆನಂದ. ಅಮ್ಮಾ ಎಂದಾಗ ಆಗುವ ಸಂತೋಷ ಇನ್ನೊಂದಿಲ್ಲ. ನಾನು ಐಎಎಸ್‌ ಅಧಿಕಾರಿಯಾಗಿದ್ದಾಗ ಇಂಗ್ಲಿಷ್‌ನಲ್ಲಿ ಟಿಪ್ಪಣಿ ಬಂದರೆ ಹಿಂದಿರುಗಿಸುತ್ತಿದ್ದೆ. ಭಾರತೀಯ ಸೇವಾ ಆಯೋಗದ ಪರೀಕ್ಷೆಯನ್ನು ಕನ್ನಡದಲ್ಲಿ ಬರೆದ ತೃಪ್ತಿ ನನ್ನದು ಎಂದು ಅವರು ಹೇಳಿದರು.

ಕನ್ನಡ ಎಂಬುದು ಸಂಸ್ಕೃತಿಯ ಸಂಕೇತ. ಬದುಕಿನ ದರ್ಶನದ ಸಂಕೇತ. ಕನ್ನಡ ನಾಡಿನಲ್ಲಿ 2 ಸಾವಿರ ವರ್ಷಗಳಿಂದ ಕನ್ನಡ ಸಾಹಿತ್ಯದ ಕೃಷಿ ನಡೆಯುತ್ತಾ ಇದೆ. ಮಾನವ ಕುಲ ತಾನೊಂದೇ ವಲಂ ಎಂಬ ಪಂಪನ ಸಂದೇಶ ಆ ನಂತರದ ಎಲ್ಲ ಕವಿಗಳಿಗೆ ದಾರ್ಶನಿಕರಿಗೆ ಸ್ಫೂರ್ತಿ ಯಾಯಿತು. ಕವಿರಾಜಮಾರ್ಗಕಾರ ಹೇಳುವಂತೆ ಕನ್ನಡಿಗರು ಅಭಿಮಾನಿಗಳು, ಧೀರರು, ಯೋಧರು, ಗುಣಿಗಳು, ಸೌಂದರ್ಯರು, ವಿವೇಕಿಗಳು, ಕವಿಗಳು, ಕುರಿತೋದದಯೆಂ ಕಾವ್ಯ ಪರಿಣತಿಮತಿಗಳು ಎಂದು ಅವರು ಸ್ಮರಿಸಿದರು.

ಕನ್ನಡ ಕೇವಲ ಅಕ್ಷರ ಲಿಪಿಯಲ್ಲ. ಸಂಸ್ಕೃತಿಯ ಸಂಕೇತ. ದಾರ್ಶನಿಕರು, ಶರಣರು ಬದುಕನ್ನೇ ಕಾವ್ಯ ಮಾಡಿಕೊಂಡಿದ್ದರು. ಕನ್ನಡದ ಅಸ್ಮಿತೆಯೇ ವಿವೇಕ. ಕನ್ನಡ ತಾಯಿ, ಕನ್ನಡ ‌ ಭಾಷೆಯ ಋಣವನ್ನು ನಾವು ತೀರಿಸಬೇಕು. ಮಾತೃಭಾಷೆಗಿರುವ ಪ್ರಬಲ ಅಭಿವ್ಯಕ್ತಿ ಸಾಮರ್ಥ್ಯ ಪರಭಾಷೆಗಿಲ್ಲ ಎಂದು ಸೋಮಶೇಖರ್‌ ಹೇಳಿದರು. ಗಡಿಭಾಗದ ಮರಾಠಿ ಶಾಲೆಗಳಲ್ಲಿ ಹಾಗೂ ಗಡಿ ಭಾಗದ ಶಾಲೆಗಳಲ್ಲಿ ಕನ್ನಡ ಶಿಕ್ಷಕರನ್ನು ನೇಮಿಸಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದ್ದೇವೆ. ಅಲ್ಲದೇ ಗಡಿಭಾಗದಲ್ಲಿನ ಕವಿ, ದಾರ್ಶನಿಕರ ಸ್ಮಾರಕಗಳು ಹೀನಾಯಸ್ಥಿತಿಯಲ್ಲಿರುವುದನ್ನು ಪುನರುತ್ಥಾನ ಮಾಡಲಾಗುವುದು. ಗಡಿನಾಡಿನಲ್ಲಿ ಕನ್ನಡದ ಕಹಳೆ ಮೊಳಗಬೇಕು ಎಂದು ಅವರು ಹೇಳಿದರು.

ಇದೇ ಸಂದರ್ಭದಲ್ಲಿ ಕೊತ್ತಲವಾಡಿ ಶಿವಕುಮಾರ್‌, ಸಂಪತ್‌ ಆರಾಧ್ಯ, ಪ್ರಸನ್ನಮೂರ್ತಿ ಗುರುವಿನಪುರ, ಮಾ. ಮಹೇಶ ಮಲೆಯೂರು, ಬಾಹುಬಲಿ ಜಯ ರಾಜ್‌, ಅನುರಾಧಾ ಸಿಂಗಾನಲ್ಲೂರು, ಎ. ಶಿವರಾಜು ಅವರ ಪುಸ್ತಕಗಳನ್ನು ಜಿಲ್ಲಾ ಕಸಾಪ ನಿಕಟಪೂರ್ವ ಅಧ್ಯಕ್ಷರಾದ ಪ್ರೊ. ಮಲೆಯೂರು ಗುರುಸ್ವಾಮಿ, ಎ.ಎಂ. ನಾಗಮಲ್ಲಪ್ಪ, ಸೋಮಶೇಖರ ಬಿಸಲ್ವಾಡಿ ಲೋಕಾರ್ಪಣೆ ಮಾಡಿದರು. ಮುದ್ದುಮಾದಪ್ಪ ದತ್ತಿ ಪ್ರಶಸ್ತಿಯನ್ನು ಸಾಹಿತಿ ಡಾ.ಎನ್‌. ಮಧುಸೂದನ್‌ ಅವರಿಗೆ ಸಚಿವ ಸುರೇಶ್‌ಕುಮಾರ್‌ ಪ್ರದಾನ ಮಾಡಿದರು. ಶಾಸಕ ಪುಟ್ಟರಂಗಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಸಮ್ಮೇಳನಾಧ್ಯಕ್ಷ ಮಂಜು ಕೋಡಿಉಗನೆ, ಜಿಲ್ಲಾ ಕಸಾಪ ಅಧ್ಯಕ್ಷ ಬಿ.ಎಸ್‌. ವಿನಯ್‌, ಮಂಗಳಾ ಮುದ್ದುಮಾದಪ್ಪ, ಜಿಪಂ ಅಧ್ಯಕ್ಷೆ ಎಂ. ಅಶ್ವಿ‌ನಿ, ತಾಪಂ ಅಧ್ಯಕ್ಷೆ ಎಚ್‌.ಎಸ್‌. ಶೋಭಾ, ನಗರಸಭಾಧ್ಯಕ್ಷೆ ಆಶಾ ನಟರಾಜು, ಜಿಪಂ ಸದಸ್ಯರಾದ ಯೋಗೇಶ್‌, ಸದಾಶಿವಮೂರ್ತಿ, ಲೇಖಾ, ಕೆರೆಹಳ್ಳಿ ನವೀನ್‌, ರಮೇಶ್‌, ಚೆನ್ನಪ್ಪ ವೇದಿಕೆಯಲ್ಲಿ ಉಪಸ್ಥಿತರಿದ್ದರು.

Advertisement

ತಿಂಗಳಿಗೊಮ್ಮೆ ಕನ್ನಡ ಜಾಗೃತಿ ಕಾರ್ಯಕ್ರಮ :

ರಾಜ್ಯದಲ್ಲಿ 6 ಗಡಿ ಜಿಲ್ಲೆ ಹಾಗೂ 63 ಗಡಿ ತಾಲೂಕುಗಳಿವೆ. ಗಡಿಭಾಗದಲ್ಲಿ ಅನಾಥಪ್ರಜ್ಞೆ ಕಾಡುತ್ತಿದೆ. ತಮಿಳು, ತೆಲುಗು, ಮರಾಠಿ, ಮಲಯಾಳಂ, ಗೋವಾದ ಭಾಷೆಗಳು ಗಡಿಭಾಗಗಳಲ್ಲಿ ವಿಜೃಂಭಿಸುತ್ತಿವೆ. ಹೀಗಾಗಿ ಅಲ್ಲಿನ ಕನ್ನಡ ಮನಸ್ಸುಗಳಿಗೆ ಭದ್ರತೆ ಕೊಡಬೇಕು. ಅದಕ್ಕಾಗಿ ಪ್ರಾಧಿಕಾರದಿಂದ ಗಡಿಭಾಗದಲ್ಲಿ ಸ್ವಾಗತ ಕಮಾನು ರಚನೆ, ಗಡಿಭಾಗದ ಸಾಧಕರ ಹೆಸರಲ್ಲಿ ಪ್ರಶಸ್ತಿ ನೀಡುವುದು, ಗಡಿ ಭಾಗದಲ್ಲಿ ತಿಂಗಳಿಗೊಮ್ಮೆ ಕನ್ನಡ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಸೋಮಶೇಖರ್‌ ತಿಳಿಸಿದರು.

ಕನ್ನಡ ಶಾಲೆಯಲ್ಲಿ ಕಲಿತವರು ಭಾರತರತ್ನ : ಕನ್ನಡ ಶಾಲೆಯಲ್ಲಿ ಕಲಿತವರು ಭಾರತರತ್ನ ಪ್ರಶಸ್ತಿ ಪಡೆದಿದ್ದಾರೆ. ಸಿಎನ್‌ಆರ್‌ ರಾವ್‌, ಎಚ್‌. ನರಸಿಂಹಯ್ಯ, ನಂಜುಂಡಪ್ಪನವರಂಥ ಅನೇಕ ಉದಾಹರಣೆಗಳಿವೆ. ಮಕ್ಕಳಿಗೆ ಇಂಗ್ಲಿಷ್‌ ಕಾನ್ವೆಂಟ್‌ಗೆ ಹೋದರೆ ಅವರು ಪ್ರತಿಭಾವಂತರಾಗುತ್ತಾರೆ ಎಂಬ ತಪ್ಪು ಕಲ್ಪನೆ ಹೋಗಬೇಕು. ಮಕ್ಕಳನ್ನು ಕನ್ನಡ ಶಾಲೆಗಳಿಗೆ ಕಳುಹಿಸಿ ಎಂದು ಪೋಷಕರಲ್ಲಿ ಡಾ| ಸೋಮಶೇಖರ್‌ ಮನವಿ ಮಾಡಿದರು.

ಪ್ರವಾಸೋದ್ಯಮ ಅಭಿವೃದ್ಧಿಪಡಿಸಿ :

ಜಿಲ್ಲೆಯ ಆಮೂಲಾಗ್ರ ಅಭಿವೃದ್ಧಿಗೆ ಇನ್ನು ಕೈಗೊಳ್ಳಬೇಕಾದ ಹಲವು ಸವಾಲುಗಳು ನಮ್ಮ ಮುಂದಿವೆ. ಎರಡು ಹುಲಿಯೋಜನೆ, ಎರಡು ಧಾಮಗಳು, ಮಹದೇಶ್ವರ ಬೆಟ್ಟ, ಬಿಳಿಗಿರಿರಂಗನಬೆಟ್ಟ, ಭರಚುಕ್ಕಿಯಂತಹ ಸ್ಥಳಗಳನ್ನು ಪ್ರವಾಸೋದ್ಯಮ ಹಿನ್ನೆಲೆಯಲ್ಲಿ ಅಭಿವೃದ್ಧಿಪಡಿಸುವ ಅಗತ್ಯವಿದೆ. ಜಾನಪದ ಅಧ್ಯಯನ ಕೇಂದ್ರವನ್ನು ಮಹದೇಶ್ವರ ಬೆಟ್ಟದಲ್ಲಿ ಅಲ್ಲದೆ ಜಿಲ್ಲಾ ಕೇಂದ್ರಕ್ಕೆ ವಿಸ್ತರಿಸುವುದು ಸೂಕ್ತ. ಕೃಷಿ ಉತ್ಪನ್ನ ಸಂಸ್ಕರಣಾ ಘಟಕಗಳನ್ನು ಎಲ್ಲಾ ತಾಲೂಕು ಕೇಂದ್ರಗಳಲ್ಲೂ ನಿರ್ಮಿಸುವುದು.

ಇವರು ಭಾಗದ ಆರಾಧ್ಯ ದೇವರು :  ಮಲೆಮಾದಪ್ಪ, ಮಂಟೇದಯ್ಯ, ಸಿದ್ದಪ್ಪಾಜಿ, ಬಿಳಿಗಿರಿರಂಗಯ್ಯ, ಮುಡುಕುತೊರೆ ಮಲ್ಲಪ್ಪ, ನಂಜನಗೂಡು ನಂಜುಂಡೇಶ್ವರ, ಕೊಂಗಳ್ಳಿ ಮಲ್ಲಪ್ಪ, ಕಪ್ಪಡಿ ರಾಚಪ್ಪ, ತೋಪಿನ ದೊಡ್ಡಮ್ಮತಾಯಿ ಇವರು ದೈವಿ ಸ್ವರೂಪದ ಸಂತರುಗಳಾಗಿ ಈ ಭಾಗದ ಜನರ ಆರಾಧ್ಯ ದೇವರುಗಳಾಗಿದ್ದಾರೆ. ಸಾಹಿತ್ಯ, ಸಂಸ್ಕೃತಿ ಹಾಗೂ ಇತಿಹಾಸದ ಹಿನ್ನೆಲೆಯಲ್ಲಿ ಚಾಮರಾಜನಗರ ಜಿಲ್ಲೆ ವಿಶಿಷ್ಟ ಸ್ಥಾನವನ್ನು ಪಡೆದಿದೆ ಎಂದು ಮಂಜು ಕೋಡಿಉಗನೆ ತಿಳಿಸಿದರು.

ಡಾ| ರಾಜ್‌ ನಮ್ಮ ಜಿಲ್ಲೆಯವರು :

ಜಿಲ್ಲೆಯ ಸಾಂಸ್ಕೃತಿಕ ಮಹತ್ವವನ್ನು ಕಟ್ಟಿಕೊಟ್ಟಿರುವ ಗ್ರಾಮೀಣ ರಂಗಭೂಮಿ, ವೃತ್ತಿರಂಗಭೂಮಿ, ಹವ್ಯಾಸಿ ರಂಗಭೂಮಿ ಅಲ್ಲದೆ ಸಿನಿಮಾ ಕ್ಷೇತ್ರದಲ್ಲಿ ಅದ್ವೀತಿಯರೆನಿಸಿದ ಡಾ. ರಾಜಕುಮಾರ್‌ ಅವರು ನಮ್ಮ ಜಿಲ್ಲೆಯವರೆಂಬುದು ನಮಗೆಲ್ಲ ಹೆಮ್ಮೆಯ ಸಂಗತಿ, ತಮ್ಮ ಕಲೆಯಿಂದ ಅವರು ಆಚಂದ್ರಾರ್ಕವಾಗಿ ಉಳಿದಿದ್ದಾರೆ ಜಾನಪದ ಸಾಹಿತ್ಯವಲ್ಲದೆ ನಮ್ಮ ಜಿಲ್ಲೆ ಜಾನಪದ ಕಲೆಗಳ ತವರೂರು ಎಂದು ಎಂದು ಸಮ್ಮೇಳನದ ಅಧ್ಯಕ್ಷ ಮಂಜು ಕೋಡಿಉಗನೆ ಶ್ಲಾ ಸಿದರು.

 

-ಕೆ.ಎಸ್‌.ಬನಶಂಕರ ಆರಾಧ್ಯ

Advertisement

Udayavani is now on Telegram. Click here to join our channel and stay updated with the latest news.

Next