Advertisement

118 ಅಬಕಾರಿ ಉಪ ನಿರೀಕ್ಷಕರು ಸೇವೆಗೆ ಅಣಿ

04:12 PM Feb 09, 2021 | Team Udayavani |

ಕಲಬುರಗಿ: ನಗರದ ಹೊರವಲಯದ ನಾಗನಹಳ್ಳಿಯಲ್ಲಿರುವ ಪೊಲೀಸ್‌ ತರಬೇತಿ ಮಹಾವಿದ್ಯಾಲಯ (ಪಿಟಿಸಿ) ಸೋಮವಾರ ಹೊಸ ಭಾಷ್ಯೆ ಬರೆಯಿತು. ಮಹಾವಿದ್ಯಾಲಯ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಮಹಿಳಾ ಕಮಾಂಡರ್‌ ನಿರ್ಗಮನ ಪಥ ಸಂಚಲನದ ನೇತೃತ್ವ ವಹಿಸಿ, ಆಕರ್ಷಕವಾದ ಪಥ ಸಂಚಲನ ನಡೆಸಿಕೊಡಲಾಯಿತು.

Advertisement

ಕವಾಯತು ಮೈದಾನದಲ್ಲಿ ಬುನಾದಿ ತರಬೇತಿ ಪೂರ್ಣಗೊಳಿಸಿದ 3ನೇ ತಂಡದ 118 ಅಬಕಾರಿ ಉಪ-ನಿರೀಕ್ಷಕ ಪ್ರಶಿಕ್ಷಣಾರ್ಥಿಗಳ (ಇಎಸ್‌ಐ) ನಿರ್ಗಮನ ಪಥ ಸಂಚಲನ ಶಿಸ್ತು ಬದ್ಧವಾಗಿ ನಡೆಯಿತು. ಪಥ ಸಂಚಲನದ ಪ್ರಧಾನ ದಂಡ ನಾಯಕಿಯಾಗಿ ಪುಷ್ಪಾ ಸದಾಶಿವ ಗದಾಡಿ ಹಾಗೂ ದ್ವಿತೀಯ ದಂಡ ನಾಯಕನಾಗಿ ಅಬಕಾರಿ ಉಪ ನಿರೀಕ್ಷಕ ನಾಗರಾಜ ಎನ್‌. ಮುಂದಾಳತ್ವ ವಹಿಸಿದರು. ಅನಿಲ ಜೋಗದಂಡೆ, ಗಂಗಾಧರ ಅಂತರಶೆಟ್ಟಿ, ಬಸವರಾಜ ಗುಗ್ಗರಿ ಹಾಗೂ
ದಿನೇಶ್‌ ಕೆ. ತಮ್ಮ ತುಕುಡಿಗಳನ್ನು ಮುನ್ನಡೆಸಿದರು.

77 ಪುರುಷರು ಮತ್ತು 41 ಮಹಿಳೆಯರು ಬುನಾದಿ ತರಬೇತಿಯ ಅಂತಿಮ ಘಟ್ಟ ಮುಗಿಸಿ ಸಾರ್ವಜನಿಕರ ಸೇವೆ ನಾವು ಅಣಿ ಎಂಬ ಸಂದೇಶ ಸಾರಿದರು. ಪಥ
ಸಂಚಲನ ಮುಗಿಯುತ್ತಲೇ ಎಲ್ಲರೂ ಸಂಭ್ರಮದಲ್ಲಿ ತೇಲಾಡಿದರು. ಕುಟುಂಬದವರು, ಸ್ನೇಹಿತರು ಜತೆಗೆ ಸೇರಿ ಸಂಭ್ರಮಿಸಿದರು. ಖಾಕಿ ಸಮವಸ್ತ್ರದಲ್ಲಿ
ತಂದೆ-ತಾಯಿ, ಸಹೋದರ, ಸಹೋದರಿಯರು ಮತ್ತು ಗೆಳೆಯರೊಂದಿಗೆ ಫೋಟೋ, ಸೆಲ್ಫಿ ತೆಗೆಸಿಕೊಂಡರು.  ಕೆಲವರು ಹಾರ, ತುರಾಯಿ ಹಾಕಿ, ಶಾಲು ಹೊದಿಸಿ ಹೊಸ ಅಬಕಾರಿ ಉಪ-ನಿರೀಕ್ಷಕರಿಗೆ ಗೌರವಿಸಿದರು. ಮತ್ತೆ ಕಲವರು ತಮ್ಮ ಪುಟ್ಟ ಮಕ್ಕಳು, ತಾಯಿ ತಲೆಗೆ ಕ್ಯಾಪ್‌ ಹಾಕಿ ಖುಷಿಪಟ್ಟರು.

ನಂತರ ಎಲ್ಲ ಅಧಿಕಾರಿಗಳೊಂದಿಗೆ ಗುಂಪು ಫೋಟೋ ತೆಗೆದುಕೊಂಡು ತಮ್ಮ ಜೀವನ ಐತಿಹಾಸಿಕ ಕ್ಷಣವನ್ನು ಸೆರೆ ಹಿಡಿದುಕೊಂಡರು. ಇದಕ್ಕೂ ಮೊದಲು
ಪಥ ಸಂಚಲನದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಅಬಕಾರಿ ಇಲಾಖೆ ಹೆಚ್ಚುವರಿ (ತಪಾಸಣೆ) ಆಯುಕ್ತ ವೆಂಕಟರಾಜ್‌ ಮತ್ತು ಅಧಿಕಾರಿಗಳಿಗೆ ಗೌರವ ವಂದನೆ
ಸಲ್ಲಿಸಿದರು.

ಹೆಮ್ಮೆಯ ವಿಷಯ: ಪಿಟಿಸಿ ಪ್ರಾಂಶುಪಾಲ ಮತ್ತು ಪೊಲೀಸ್‌ ಅಧೀಕ್ಷಕ ಯಡಾ ಮಾರ್ಟಿನ್‌ ಮಾರ್ಬನ್ಯಾಂಗ್‌ ಸಂಸ್ಥೆಯ ವರದಿ ವಾಚಿಸಿ, 2003ರಲ್ಲಿ
ಆರಂಭವಾದ ತರಬೇತಿ ಕೇಂದ್ರವಾಗಿದೆ. ಪ್ರಸ್ತುತ 3ನೇ ತಂಡದ ಅಬಕಾರಿ ಉಪ ನಿರೀಕ್ಷಕ ಪ್ರಶಿಕ್ಷಣಾರ್ಥಿಗಳು ಬುನಾದಿ ತರಬೇತಿ ಪೂರ್ಣಗೊಳಿಸಿದೆ. ಇಷ್ಟು
ವರ್ಷದ ಸಂಸ್ಥೆಯ ಇತಿಹಾಸದಲ್ಲಿ ಮೊದಲ ಬಾರಿಗೆ ನಿರ್ಗಮನ ಪಥ ಸಂಚಲನದ ಕಮಾಂಡರ್‌ ಆಗಿ ಮಹಿಳಾ ಪ್ರಶಿಕ್ಷಣಾರ್ಥಿ ಪುಷ್ಪಾ ಗದಾಡಿ ಮುನ್ನಡೆಸಿದ್ದು,
ಹೆಮ್ಮೆಯ ವಿಯಷವಾಗಿದೆ ಎಂದು ಬಣ್ಣಿಸಿದರು.  2003ರಿಂದ ಪಿಟಿಸಿಯಲ್ಲಿ ಇದುವರೆಗೂ ಪಿಎಸ್‌ಐ, ಆರ್‌ಎಸ್‌ಐ ಮತ್ತು ಇಎಸ್‌ಐ ಸೇರಿ 1,699
ಅಧಿಕಾರಿಗಳು ಮತ್ತು ಪೇದೆ, ಅಬಕಾರಿ ರಕ್ಷಕರು, ಕೈಗಾರಿಕಾ ಭದ್ರತಾ ಪೊಲೀಸರು ಸೇರಿದಂತೆ 4,796 ಪ್ರಶಿಕ್ಷಣಾರ್ಥಿಗಳಿಗೆ ತರಬೇತಿ ನೀಡಲಾಗಿದೆ ಎಂದು
ವಿವರಿಸಿದರು.

Advertisement

ವೇದಿಕೆ ಮೇಲೆ ಪೊಲೀಸ್‌ ಆಯುಕ್ತಾಲಯ ಡಿಸಿಪಿ ಡಿ.ಕಿಶೋರಬಾಬು, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಸಿಮಿ ಮರಿಯಮ್‌ ಜಾರ್ಜ್‌, ಈಶಾನ್ಯ ಸಾರಿಗೆ
ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಎಂ.ಕೂರ್ಮರಾವ್‌, ಮಹಾನಗರ ಪಾಲಿಕೆಯ ಆಯುಕ್ತ ಸ್ನೇಹಲ್‌ ಲೋಖಂಡೆ, ಎಸಿಪಿ ಅಂಶುಕುಮಾರ, ಅಬಕಾರಿ ಉಪ ಆಯುಕ್ತೆ ಶಶಿಕಲಾ ಒಡೆಯರ, ಆದಾಯ ತೆರಿಗೆ ಇಲಾಖೆ ಸಹಾಯಕ ನಿರ್ದೇಶಕ ಲಕ್ಕಪ್ಪ ಇದ್ದರು. ಪಿಟಿಸಿ ಉಪ ಪ್ರಾಂಶುಪಾಲ ಅರುಣ ರಂಗರಾಜನ್‌ ಸ್ವಾಗತಿಸಿದರು. ಶಶಿಕಲಾ ಜಡೆ ಕಾರ್ಯಕ್ರಮ ನಿರೂಪಿಸಿದರು. ಡಿಎಸ್ಪಿ ಶಿವಾನಂದ ಪವಾಡಶೆಟ್ಟಿ ವಂದಿಸಿದರು. ಅಧಿಕಾರಿಗಳಾದ ನಾವಡಗಿ, ಶ್ರೀಮಂತ ಇಲ್ಲಾಳ, ಶಿವಾನಂದ ವಾಲೀಕಾರ, ಚಂದ್ರಶೇಖರ ತಿಗಡಿ ಸೇರಿದಂತೆ ಪಿಟಿಸಿ ಅಧಿಕಾರಿಗಳು, ಪ್ರಶಿಕ್ಷಣಾರ್ಥಿಗಳು ಕುಟುಂಬದವರು ಪಾಲ್ಗೊಂಡಿದ್ದರು.

ಇಂಜಿನಿಯರ್‌ಗಳು, ಮಾಜಿ ಸೈನಿಕರು ಅಬಕಾರಿ ಉಪ-ನಿರೀಕ್ಷಕರ ಸೇವೆ ಅಣಿಯಾದವರಲ್ಲಿ ಬಿಇ, ಎಂಎಸ್ಸಿ, ಎಂಟೆಕ್‌, ಬಿಬಿಎ, ಬಿಇಡಿ, ಬಿ.ಫಾರ್ಮಾ ವಿವಿಧ
ಪದವಿಗಳನ್ನು ಪೂರೈಸಿದ್ದಾರೆ. ಅಲ್ಲದೇ, ಐವರು ಮಾಜಿ ಸೈನಿಕರು ಸಹ ಅಬಕಾರಿ ಉಪ-ನಿರೀಕ್ಷಕರ ತರಬೇತಿ ಮುಗಿಸಿದರು. 29 ಜನರ ಬೇರೆ ಸರ್ಕಾರಿ
ಹುದ್ದೆಗಳನ್ನು ತ್ಯಜಿಸಿ ಇಎಸ್‌ಐ ಹುದ್ದೆ ಆಯ್ಕೆ ಮಾಡಿಕೊಂಡು ಬಂದಿದ್ದಾರೆ.

ಮ್ಯಾಥ್ಯೂವ್‌ ಆಲ್‌ರೌಂಡರ್‌
ತರಬೇತಿ ಸಮಯದಲ್ಲಿ ಏರ್ಪಡಿಸಿದ್ದ ವಿವಿಧ ಕ್ರೀಡೆಗಳಲ್ಲಿ ವಿಜೇತರಾಗಿ ಗಣ್ಯರು ಬಹುಮಾನ ನೀಡಿ ಗೌರವಿಸಿದರು. ಒಳಾಂಗಣ ವಿಭಾಗದಲ್ಲಿ ಜೋಸ್ಲಿನ್‌ ಫರ್ನಾಂಡಿಸ್‌ (ಪ್ರಥಮ ಸ್ಥಾನ), ಹೊರಾಂಗಣ ವಿಭಾಗದಲ್ಲಿ ಪುಷ್ಪಾ ಗದಾಡಿ (ಪ್ರಥಮ ಸ್ಥಾನ), 9 ಎಂಎಂ ಪಿಸ್ತೂಲ್‌ ಶೂಟಿಂಗ್‌ನಲ್ಲಿ ದಿಲೀಪ್‌ ಠಾಕೂರ್‌ (ಪ್ರಥಮ ಸ್ಥಾನ), ಪಾಯಿಂಟ್‌ 303 ರೈಫಲ್‌ ಶೂಟಿಂಗ್‌ ನಲ್ಲಿ ಕಿರಣ್‌ ಜುಲಿ  (ಪ್ರಥಮ ಸ್ಥಾನ) ಹಾಗೂ ಆಲ್‌ ರೌಂಡರ್‌ ಪ್ರಶಸ್ತಿಗೆ ಮ್ಯಾಥ್ಯೂವ್‌ ಪ್ರಿನ್ಸ್‌ಟನ್‌ ಕಾರ್ಲೊ ಭಾಜನರಾದರು.

ಬುನಾದಿ ತರಬೇತಿ ಪಡೆದು ಸಾರ್ವಜನಿಕರ ಸೇವೆಗೆ ಅಬಕಾರಿ ಉಪ-ನಿರೀಕ್ಷಕರಾಗಿ ನೀವು ಅಣಿಯಾಗಿದ್ದು, ನಿಮ್ಮಲ್ಲಿ ರಾಷ್ಟ್ರ ಸೇವೆ ಉದ್ದೇಶವೇ ಮುಖ್ಯವಾಗಬೇಕು. ನಾವು ಸರ್ಕಾರದ ಪ್ರತಿನಿಧಿ ಗಳಾಗಿ ಸಾರ್ವಜನಿಕರ ಒಳಿತಿಗಾಗಿ ಕಾರ್ಯನಿರ್ವಹಿಸಬೇಕು. ಖಾಕಿ ಸಮವಸ್ತ್ರವೇ ಹೆಮ್ಮೆ ಗುರುತು ಹಾಗೂ ಜೀವನೋದ್ದೇಶ ಏನೆಂದು ಅರ್ಥವಾಗುತ್ತದೆ. ಪ್ರತಿ ಜಿಲ್ಲೆ, ಪ್ರದೇಶದಲ್ಲಿ ಸಮಸ್ಯೆ ವಿಭಿನ್ನವಾಗಿರುತ್ತದೆ, ನಿಮ್ಮದೇ ಆದ ಶೈಲಿಯಲ್ಲಿ ಒಬ್ಬರೇ ಕೆಲಸ ಮಾಡಿದರೆ ಯಶಸ್ವಿ ಕಾಣಲು ಆಗಲ್ಲ. ಸ್ನೇಹಿತರು, ಹಿರಿಯರು, ಅಧಿಕಾರಿಗಳ ಅಭಿಪ್ರಾಯ ಸಲಹೆ ಪಡೆದುಕೊಳ್ಳುವುದರಿಂದ ಸೇವಾ ಸಾಮರ್ಥ್ಯ ಹೆಚ್ಚಾಗುತ್ತದೆ ಎಂದರು.
ವೆಂಕಟರಾಜ್‌, ಹೆಚ್ಚುವರಿ ಆಯುಕ್ತ, ಅಬಕಾರಿ ಇಲಾಖೆ

ಕಲಬುರಗಿ ಪಿಟಿಸಿ ಇತಿಹಾಸದಲ್ಲಿ ಪಥ ಸಂಚಲನದ  ಮೊದಲ ಮಹಿಳಾ ಪ್ರಧಾನ ದಂಡ ನಾಯಕಿ ನಾನು ಎಂದು ಹೇಳಿಕೊಳ್ಳುವುದೇ ಹೆಮ್ಮೆ ಸಂಗತಿ. ಇದಕ್ಕೆ
ಪಿಟಿಸಿ ಪ್ರಾಂಶುಪಾಲ ಯಡಾ ಮಾರ್ಟಿನ್‌ ಮಾರ್ಬನ್ಯಾಂಗ್‌ ಮತ್ತು ಅಧಿಕಾರಿಗಳೇ ಕಾರಣ. ಅವರು ಪೋತ್ಸಾಹ ನೀಡಿ, ಉತ್ಸಾಹ ತುಂಬಿದರು. ಜತೆಗೆ ಇದನ್ನು ಸಮರ್ಥವಾಗಿ ನಿಭಾಯಿಸುತ್ತೇನೆ ಎಂಬ ಧೈರ್ಯವೂ ನನ್ನಲ್ಲಿ ಇತ್ತು.
ಪುಷ್ಪಾ ಗದಾಡಿ (ಬೆಳಗಾವಿ),
ಪಥ ಸಂಚಲನ ಕಮಾಂಡರ್‌

ಅಬಕಾರಿ ಉಪ-ನಿರೀಕ್ಷಕಿಯಾಗಿ ಬುನಾದಿ ತರಬೇತಿ ತಡೆಯಲು ಪಿಟಿಸಿಗೆ ಬಂದಾಗ ಆರಂಭದಲ್ಲಿ ತುಂಬಾ ಭಯ ಇತ್ತು. ಮೇಲಾಗಿ ನಮ್ಮೂರು ಉತ್ತರ ಕನ್ನಡ ಅಲ್ಲಿಯ ವಾತಾವರಣ ಮತ್ತು ಕಲಬುರಗಿ ವಾತಾವರಣ ಬೇರೆ-ಬೇರೆ ಹೇಗೋ ಏನು ಎಂಬ ಆತಂಕ ಇತ್ತು. ಆದರೆ, ಇಲ್ಲಿಯ ವಾತಾವರಣಕ್ಕೆ ಹೊಂದಿಕೊಂಡು ಬಿಟ್ಟೆ. ಉತ್ತಮ ತರಬೇತಿ ಸಿಕ್ಕಿದೆ.
ಜೋಸ್ಲಿನ್‌ ಫರ್ನಾಂಡಿಸ್‌, ವಿಜೇತೆ,
ಒಳಾಂಗಣ ಕ್ರೀಡೆಗಳ ವಿಭಾಗ.

Advertisement

Udayavani is now on Telegram. Click here to join our channel and stay updated with the latest news.

Next