Advertisement

ನಿವೇಶನ ಹಂಚಿಕೆಗೆ 1,158 ಎಕರೆ ಮಂಜೂರು; ಜಿಲ್ಲಾಧಿಕಾರಿ ಆರ್‌.ಲತಾ

06:03 PM Jul 08, 2022 | Team Udayavani |

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಆಶ್ರಯ ವಸತಿ ಯೋಜನೆ ಯಡಿ ನಿವೇಶನ ಹಂಚಿಕೆಗಾಗಿ 1,158 ಎಕರೆ, ಇತರೆ ಕಾಮಗಾರಿಗಳ ನಿರ್ಮಾಣದ ಉದ್ದೇಶಕ್ಕೆ 564 ಎಕರೆ ಸೇರಿ 1,722 ಎಕರೆ ಜಮೀನನ್ನು ಕಳೆದೆರಡು ವರ್ಷ ಗಳಲ್ಲಿ ಜಿಲ್ಲಾಡಳಿತ ಮಂಜೂರು ಮಾಡಿದೆ ಎಂದು ಜಿಲ್ಲಾಧಿಕಾರಿ ಆರ್‌.ಲತಾ ತಿಳಿಸಿದರು.

Advertisement

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಕಂದಾಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿ, ಜಿಲ್ಲೆಯಲ್ಲಿ ಆಶ್ರಯ ಯೋಜನೆಯಡಿ ನಿವೇಶನ ರಹಿತರಿಗಾಗಿ 1,158 ಎಕರೆ ಜಮೀನು ಜಿಲ್ಲಾಡಳಿತ ಮಂಜೂರು ಮಾಡಿದೆ. ಇದರಲ್ಲಿ 50 ಸಾವಿರಕ್ಕೂ ಹೆಚ್ಚು ನಿವೇಶನ ಹಂಚಿಕೆ ಮಾಡಬಹುದಾಗಿದೆ. ಇಷ್ಟು ಅಗಾದ ಪ್ರಮಾಣದ ಜಮೀನನ್ನು ಕೋವಿಡ್‌ ಸಂಕಷ್ಟದ ನಡುವೆ ಮಂಜೂರು ಮಾಡಿರುವುದು ಜಿಲ್ಲಾಡಳಿತದ ಉತ್ತಮ
ಕಾರ್ಯವೈಖರಿಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಅಭಿಪ್ರಾಯಪಟ್ಟರು.

ಬಡಾವಣೆ ರಚನೆ: ಈ ಎಲ್ಲಾ ಜಮೀನನ್ನು ಜಿಲ್ಲಾಡಳಿತ, ರಾಜೀವ್‌ಗಾಂಧಿ  ವಸತಿ ನಿಗಮದ ಸಹಯೋಗದಲ್ಲಿ ಬಡಾವಣೆಗಳನ್ನಾಗಿ ಅಭಿವೃದ್ಧಿಪಡಿಸಿ, ನಿವೇಶನ ವಿತರಿಸುವ ಕಾರ್ಯ ವಿವಿಧ ಹಂತಗಳಲ್ಲಿ ಪ್ರಗತಿ ಯಲ್ಲಿದೆ. ಈಗಾಗಲೇ 10 ಸಾವಿರಕ್ಕೂ ಹೆಚ್ಚು ಹೆಚ್ಚಿನ ನಿವೇಶನಕ್ಕಾಗಿ ಬಡಾವಣೆ ರಚಿಸಲಾಗಿದೆ. ಉಳಿದವುಗಳಿಗಾಗಿ ಬಡಾವಣೆ ರಚಿಸುವ ಕಾರ್ಯವು ಪ್ರಗತಿಯಲ್ಲಿದೆ. ಶೀಘ್ರ ಪೂರ್ಣಗೊಳಿಸಲಾಗುವುದು ಎಂದು ಹೇಳಿದರು.

ವಸತಿ ಯೋಗ್ಯ ಜಮೀನು ಗುರುತಿಸುವಿಕೆ: ನಿವೇಶನ ವಿತರಿಸುವ ಕಾರ್ಯವನ್ನು ಅಭಿಯಾನದ ರೀತಿಯಲ್ಲಿ ಜಿಲ್ಲಾಡಳಿತ ಕೈಗೊಳ್ಳುತ್ತಿದ್ದು, ಇದಕ್ಕಾಗಿ ಕಂದಾಯ, ಪಂಚಾಯತ್‌ ರಾಜ್‌ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಪರಿಶ್ರಮದಿಂದ ವಸತಿ ಯೋಗ್ಯ ಜಮೀನನ್ನು ಜಿಲ್ಲಾದ್ಯಂತ ಗುರುತಿಸಿ ಅಗತ್ಯತೆಗೆ ಅನುಗುಣವಾಗಿ ಮಂಜೂರು ಮಾಡಲಿದೆ. ಕಳೆದ ವರ್ಷವೇ ಈ ಎಲ್ಲಾ ಕಾರ್ಯ ಪೂರ್ವ ತಯಾರಿ ಮಾಡಿಕೊಂಡಿದ್ದು, ಪ್ರಸ್ತುತ ನಿವೇಶನ ವಿತರಣೆ ಕಾರ್ಯ ಸನಿಹದಲ್ಲೇ ಆಗಲಿದೆ ಎಂದು ತಿಳಿಸಿದರು.

50 ಸಾವಿರ ನಿವೇಶನ ವಿತರಿಸುವ ಗುರಿ: ಪ್ರಾಣಿ, ಪಕ್ಷಿಗಳು ಸಹ ಒಂದು ಗೂಡನ್ನು ಮಾಡಿಕೊಂಡಿರು ತ್ತವೆ. ಅಂತಹದ್ದರಲ್ಲಿ ಮಾನವನಾಗಿ ಹುಟ್ಟಿದ ಪ್ರತಿಯೊಬ್ಬರಿಗೂ ಒಂದು ಸೂರನ್ನು ಹೊಂದುವ ಆಸೆ ಇದ್ದೆ ಇರುತ್ತದೆ. ಆಶ್ರಯ ಯೋಜನೆಯಡಿ ಒಂದು ನಿವೇಶನ ನೀಡಿದರೆ ಎಲ್ಲರೂ ಒಂದು ಸೂರು ಹೊಂದಲು ಸಹಾಯ ಆಗಲಿದೆ. ಆದ್ದರಿಂದ ನಿವೇಶನರಹಿತ ಎಲ್ಲ ರಿಗೂ 30×20 ಅಳತೆಯ ನಿವೇಶನಗಳನ್ನು ನೀಡುವ ಉದ್ದೇಶವನ್ನು ಜಿಲ್ಲಾಡಳಿತ ಹೊಂದಿದೆ ಎಂದು ಜಿಲ್ಲಾಧಿಕಾರಿ ಆರ್‌.ಲತಾ ಹೇಳಿದರು.

Advertisement

ಈ ಹಿನ್ನೆಲೆಯಲ್ಲಿ ಗ್ರಾಮೀಣ ಭಾಗದಲ್ಲಿ 40 ಸಾವಿರಕ್ಕೂ ಹೆಚ್ಚು, ನಗರ ವ್ಯಾಪ್ತಿಯಲ್ಲಿ 10 ಸಾವಿರಕ್ಕೂ ಹೆಚ್ಚು ನಿವೇಶನಗಳನ್ನು ಜಿಲ್ಲೆಯ ನಿವೇಶನರಹಿತರಿಗೆ ನೀಡಲು ಗುರಿ ನಿಗದಿಪಡಿಸಿಕೊಂಡು, ರೂಪುರೇಷೆ ಯನ್ನು ಸಿದ್ಧಪಡಿಸಲಾಗಿದೆ. ಸದ್ಯದಲ್ಲೆ ನಿವೇಶನ ಹಂಚಿಕೆ ಮಾಡುವ ಕಾರ್ಯ ಮುಂದಿನ ತಿಂಗಳಲ್ಲಿ ಅಭಿಯಾನದ ರೀತಿಯಲ್ಲಿ ಜರುಗಲಿದೆ ಎಂದು ತಿಳಿಸಿದರು.

ದಾಖಲೆಯಾಗಲಿದೆ: ಗ್ರಾಮೀಣ, ನಗರ ಪ್ರದೇಶ ಸೇರಿ 50 ಸಾವಿರಕ್ಕೂ ಹೆಚ್ಚು ನಿವೇಶನ ಹಂಚಿಕೆಗಾಗಿ ಜಿಲ್ಲಾಡಳಿತ ಜಮೀನು ಮಂಜೂರು ಮಾಡಿರುವುದು ರಾಜ್ಯದಲ್ಲಿ ದಾಖಲೆಯಾಗಿದೆ. ಈ ಕಾರ್ಯಕ್ಕೆ ಸಹಕಾರ ನೀಡಿದ ಈ ಹಿಂದಿನ ಜಿಲ್ಲಾ ಉಸ್ತುವಾರಿ ಸಚಿವ ಡಾ. ಕೆ.ಸುಧಾಕರ್‌, ಹಾಲಿ ಸಚಿವ ಎನ್‌.ನಾಗರಾಜು ಹಾಗೂ ಜಿಲ್ಲೆಯ ಜನಪ್ರತಿನಿಧಿಗಳಿಗೆ ಜಿಲ್ಲಾಧಿಕಾರಿ ಗಳು ಧನ್ಯವಾದ ತಿಳಿಸಿದರು.

ಜನಪ್ರತಿನಿಧಿಗಳ ಸಮ್ಮುಖದಲ್ಲಿ ಸೈಟ್‌ ಹಂಚಿಕೆ
ಜಿಲ್ಲೆಯ ಶಾಸಕರು, ಸಂಸದರು, ಜಿಲ್ಲಾ ಉಸ್ತುವಾರಿ ಸಚಿವರ ಸಮ್ಮುಖದಲ್ಲಿಯೇ ನಿವೇಶನಗಳನ್ನು ಫಲಾನುಭವಿಗಳಿಗೆ ವಿತರಿಸಲು ಜಿಲ್ಲಾಡಳಿತ ಸಕಲ ಸಿದ್ಧತೆ ನಡೆಸಿದೆ. ಅಧಿ ಕಾರಿಗಳು 50 ಸಾವಿರಕ್ಕೂ ಹೆಚ್ಚು ನಿವೇಶನ ಮುಂದಿನ 3 ತಿಂಗಳಲ್ಲಿ ಅರ್ಹರಿಗೆ ಹಂಚಿಕೆ ಮಾಡಿ, ಈ ಮಹತ್ವಾಕಾಂಕ್ಷಿ ಆಶ್ರಯ ಯೋಜನೆ ಸಾಕಾರಗೊಳಿಸಲು ತಾವೆಲ್ಲರೂ ಕಾರಣೀಭೂತರಾಗಬೇಕು. ಜಿಲ್ಲೆಯ ಕೀರ್ತಿಯನ್ನು ರಾಜ್ಯ ಮಟ್ಟಕ್ಕೆ ಎತ್ತರಿಸುವ ನಿಟ್ಟಿನಲ್ಲಿ ತಾವೆಲ್ಲರೂ ಕೆಲಸ ಮಾಡಬೇಕೆಂದು ಜಿಲ್ಲಾಧಿಕಾರಿ ಆರ್‌.ಲತಾ ಸೂಚನೆ ನೀಡಿದರು.

ನಿವೇಶನ ಹಂಚಿಕೆಗೆ ಜಮೀನು ಮಂಜೂರು ಮಾಡುವುದರ ಜೊತೆಗೆ ಕಳೆದ ಎರಡು ವರ್ಷಗಳಲ್ಲಿ ಇತರ ಉದ್ದೇಶಗಳಿಗೂ ಜಮೀನು ಮಂಜೂರು ಮಾಡುವುದರಲ್ಲಿ ಜಿಲ್ಲೆ ಮುಂಚೂಣಿಯಲ್ಲಿದ್ದು, ವಿವಿಧ ಕಾಮಗಾರಿಗಳನ್ನು ಕೈಗೊಳ್ಳಲು 564.30 ಎಕರೆ ಜಮೀನನ್ನು ಜಿಲ್ಲಾಡಳಿತ ಮಂಜೂರು ಮಾಡಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next