ನ್ಯೂಯಾರ್ಕ್: ಯುರೋಪ್ ಮತ್ತು ಅಮೆರಿಕದ ಹಲವಾರು ರಾಜ್ಯಗಳಲ್ಲಿ ದಾಖಲೆ ಪ್ರಮಾಣದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಳವಾದ ಕಾರಣ ಕಳೆದ ಶುಕ್ರವಾರದಿಂದ 11,500 ವಿಮಾನ ಸಂಚಾರ ರದ್ದುಗೊಳಿಸಿದ ಪರಿಣಾಮ ಜಾಗತಿಕವಾಗಿ ಕ್ರಿಸ್ಮಸ್ ರಜೆ ಕಳೆಯಲು ಬಂದ ಲಕ್ಷಾಂತರ ಮಂದಿ ವಾಪಸ್ ತೆರಳುವಂತಾಗಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:ಹೆಚ್ ಎಎಲ್ ನಿಲ್ದಾಣದಲ್ಲೇ ಬಾಕಿಯಾದ ಸಿಎಂ ಬೊಮ್ಮಾಯಿ ವಿಶೇಷ ವಿಮಾನ!
ಶುಕ್ರವಾರದಿಂದ ವಿಶ್ವಾದ್ಯಂತ ಸುಮಾರು 11,500 ವಿಮಾನಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ. ಕೋವಿಡ್ ಪ್ರಕರಣ, ಒಮಿಕ್ರಾನ್ ಪ್ರಕರಣಗಳ ಹೆಚ್ಚಳದಿಂದ ಸಿಬಂದಿಗಳ ಕೊರತೆ ತಲೆದೋರಿದ್ದು, ಇದರಿಂದಾಗಿ ವಿಮಾನ ಸಂಚಾರ ರದ್ದುಗೊಳಿಸಿದ್ದು, ಲಕ್ಷಾಂತರ ಪ್ರವಾಸಿಗರು ತೊಂದರೆ ಅನುಭವಿಸುವಂತಾಗಿದೆ ಎಂದು ವಿಮಾನಯಾನ ಸಂಸ್ಥೆಗಳು ಹೇಳಿವೆ.
ಸೋಮವಾರ 3,000 ವಿಮಾನ ಸಂಚಾರ ರದ್ದುಗೊಂಡಿದ್ದು, ಮಂಗಳವಾರ 1,100ಕ್ಕೂ ಅಧಿಕ ವಿಮಾನ ಸಂಚಾರ ರದ್ದುಗೊಳಿಸಲಾಗಿದೆ. ಇದರಿಂದಾಗಿ ಜಾಗತಿಕವಾಗಿ ದೊಡ್ಡ ಪರಿಣಾಮ ಬೀರಿದೆ ಎಂದು ಫ್ಲೈಟ್ ಟ್ರ್ಯಾಕರ್ ಅಂಕಿಅಂಶದಲ್ಲಿ ತಿಳಿದು ಬಂದಿದೆ.
ಶೀಘ್ರದಲ್ಲಿಯೇ ಸಿಬಂದಿಗಳು ಕೆಲಸಕ್ಕೆ ಹಾಜರಾಗಲಿದ್ದು, ದೊಡ್ಡ ಸಂಖ್ಯೆಯ ಸಿಬಂದಿಗಳ ಕೊರತೆಯನ್ನು ನೀಗಿಸಲಾಗುವುದು ಎಂದು ವರದಿ ವಿವರಿಸಿದೆ. ಕೋವಿಡ್ 19 ಸೋಂಕು ಪತ್ತೆಯಾದವರ ಐಸೋಲೇಶನ್ ಅವಧಿಯನ್ನು 10 ದಿನಗಳಿಂದ 5 ದಿನಕ್ಕೆ ಇಳಿಕೆ ಮಾಡಲಾಗುವುದು ಎಂದು ಅಮೆರಿಕದ ಸೋಂಕು ನಿಗ್ರಹ ಕೇಂದ್ರ ತಿಳಿಸಿದೆ.
ಜನವರಿಯಲ್ಲಿ ಅಮೆರಿಕದಲ್ಲಿ ದಾಖಲೆ ಪ್ರಮಾಣದ ಕೋವಿಡ್ 19 ಪ್ರಕರಣಗಳು ಹೆಚ್ಚಳವಾಗಲಿದೆ. ನೂತನ ಒಮಿಕ್ರಾನ್ ಎದುರಿಸಲು ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದೆ. ಅಮೆರಿಕದ ಪ್ರಜೆಗಳು ಈ ಬಗ್ಗೆ ಭಯಪಡಬೇಕಾದ ಅಗತ್ಯವಿಲ್ಲ ಎಂದು ಅಧ್ಯಕ್ಷ ಜೋ ಬೈಡೆನ್ ತಿಳಿಸಿದ್ದಾರೆ.