ಬೆಂಗಳೂರು: ನಗರದಲ್ಲಿ ಒಂದು ವಾರದಿಂದ ಕೋವಿಡ್ 19 ಸೋಂಕಿತರ ಸಂಖ್ಯೆ ಶತಕ ದಾಟುತ್ತಿದ್ದು, ಗುರುವಾರ 113 ಮಂದಿಗೆ ಸೋಂಕು ದೃಢಪಟ್ಟಿದೆ. 112 ಸೋಂಕಿತರು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗುರುವಾರ ಸೋಂಕಿತರ ಸಂಪರ್ಕ 10, ವಿಷಮ ಶೀತ ಜ್ವರ 59, ಸಂಪರ್ಕ ಪತ್ತೆ ಹಚ್ಚಲಾಗುತ್ತಿರುವುದು 33, ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ನಾಲ್ವರು, ಕಂಟೈನ್ಮೆಂಟ್ ವಲಯದಲ್ಲಿ ವಾಸವಿದ್ದ ಒಬ್ಬರಿಗೆ ಸೋಂಕು ತಗುಲಿದ್ದು, ನಿಗದಿಪಡಿಸಿದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಮಧ್ಯೆ ಸೋಂಕಿತರ ಸಂಖ್ಯೆ 1,791 ಏರಿಕೆಯಾಗಿದ್ದು, 30 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. 31 ಜ್ವರ ತಪಾಸಣಾ ಕೇಂದ್ರಗಳಲ್ಲಿ ಒಟ್ಟು 16,317 ಜನರ ತಪಾಸಣೆ ನಡೆಸಲಾಗಿದೆ. ಬೆಂಗಳೂರಿನಲ್ಲಿ ಕೋವಿಡ್ 19 ಆತಂಕ ಹೆಚ್ಚಾದ ಹಿನ್ನೆಲೆ ರ್‍ಯಾಂಡಮ್ ಟೆಸ್ಕ್ ಮಾಡಲು ಪಾಲಿಕೆ ಮುಂದಾಗಿದೆ. ಈ ಹಿಂದೆ ಪಾದರಾಯನಪುರ, ಶಿವಾಜಿನಗರ ಸೇರಿ ಕೆಲವು ಕಡೆ ಟೆಸ್ಕ್ ಮಾಡಲಾಗಿತ್ತು. ನಂತರ ಸ್ಥಗಿತಗೊಳಿಸಲಾಗಿತ್ತು. ಆನಂದಪುರ, ಗಂಗೊಂಡನಹಳ್ಳಿ, ಕೆ.ಆರ್. ಮಾರುಕಟ್ಟೆ, ಜೆಸಿ ನಗರ ಮಾರುಕಟ್ಟೆ ಸೇರಿದಂತೆ ಹಲವೆಡೆ ಪರೀಕ್ಷೆ ಆರಂಭವಾಗಿದ್ದು, ಪ್ರತಿದಿನ 400ಕ್ಕೂ ಹೆಚ್ಚು ಜನರನ್ನು ಪರೀಕ್ಷೆಗೊಳಪಡಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಏರಿಯಾಗಳಲ್ಲಿ ಪರೀಕ್ಷೆಗೆ ಪಾಲಿಕೆ ಚಿಂತನೆ ನಡೆಸಿದೆ.
2.64 ಲಕ್ಷ ರೂ. ಸಂಗ್ರಹ: ಕೋವಿಡ್-19 ಸೋಂಕು ನಿಯಂತ್ರಿಸುವ ಹಿನ್ನೆಲೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳದ ಹಾಗೂ ಮುಖಗವಸು(ಮಾಸ್ಕ್) ಧರಿಸದೆ ಸಾರ್ವಜನಿಕ ಸ್ಥಳಗಳಲ್ಲಿ ಓಡಾಡುವವರಿಗೆ ಮಾರ್ಷಲ್‌ಗಳು ದಂಡ ಸಂಗ್ರಹಿಸುತ್ತಿದ್ದು, ಗುರುವಾರ ಮಾಸ್ಕ್ ಧರಿಸದ 1,268 ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳದ 52 ಮಂದಿ ಸೇರಿದಂತೆ 1,320 ಮಂದಿಯಿಂದ ಒಟ್ಟು 2.64 ಲಕ್ಷ ರೂ. ದಂಡ ಸಂಗ್ರಹಿಸಿದೆ.
ಬಿಎಂಟಿಸಿ; ಮತ್ತೊಬ್ಬರಿಗೆ ಸೋಂಕು: ಬಿಎಂಟಿಸಿ ಕೆಂಗೇರಿ ಡಿಪೋ 12ರಲ್ಲಿ ಮತ್ತೆ ಒಬ್ಬ ಚಾಲಕನಿಗೆ ಸೋಂಕು ದೃಢಪಟ್ಟಿದೆ. ಇವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇವರ ಸಂಪರ್ಕದಲ್ಲಿ ರುವ 10ಕ್ಕೂ ಅಧಿಕ ಸಿಬ್ಬಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ. ಈ ಮೂಲಕ ಸೋಂಕಿತರ ಸಂಖ್ಯೆ 15ಕ್ಕೆ ಏರಿಕೆ ಯಾಗಿದೆ. ಅದೇ ರೀತಿ, ಕೆಂಗೇರಿ ಠಾಣೆಯ ಸಿಬ್ಬಂದಿಗೆ ಸೋಂಕು ದೃಡಪಟ್ಟ ಹಿನ್ನೆಲೆ ಠಾಣೆಯಲ್ಲಿ ಸ್ಯಾನಿಟೈಸ್ ಸಿಂಪಡಣೆ ಮಾಡಲಾಗಿದೆ.
ಅಗ್ನಿಶಾಮಕ ಠಾಣೆ ಸಿಬ್ಬಂದಿಗೂ ಸೋಂಕು: ವೈದ್ಯರು, ಪೊಲೀಸ್ ಸಿಬ್ಬಂದಿಗೆ ಮಾತ್ರವಲ್ಲ ಈಗ ಅಗ್ನಿ ಶಾಮಕ ದಳ ಸಿಬ್ಬಂದಿಗೂ ಕೋವಿಡ್ 19 ಪಾಸಿಟಿವ್ ವರದಿಯಾಗಿದೆ. ಗುರುವಾರ ಹೈಗ್ರೌಂಡ್ಸ್ ಅಗ್ನಿ ಶಾಮಕ ಠಾಣೆಯ 6 ಸಿಬ್ಬಂದಿಗೆ ಸೋಂಕು ಇರುವುದು ದೃಢಪಟ್ಟಿದೆ. ಇದರಿಂದ ಇನ್ನುಳಿದ 6 ಸಿಬ್ಬಂದಿಯನ್ನು ಪಾಲಿಕೆ ಹೋಮ್ ಕ್ವಾರಂಟೈನ್ ಮಾಡಲಾಗಿದೆ. ಕೋರಮಂಗಲ ಪೊಲೀಸ್ ಕಾಲೊನಿಯಲ್ಲಿರುವ ಸರ್ಕಾರಿ ಆಸ್ಪತ್ರೆಯ ನರ್ಸ್ ಹಾಗೂ ವಾರ್ಡ್ ಬಾಯ್ ಇಬ್ಬರಿಗೂ ಸೋಂಕು ದೃಢಪಟ್ಟಿದ್ದು, ಇವರ ಸಂಪರ್ಕದಲ್ಲಿರುವವರನ್ನು ಕ್ವಾರಂಟೈನ್ ಮಾಡಲಾಗಿದೆ.
ಅಂಚೆ ಕಚೇರಿ ಸೀಲ್‌ಡೌನ್: ಎಚ್‌ಎಎಲ್ 2ನೇ ಹಂತದಲ್ಲಿರುವ ಅಂಚೆ ಕಚೇರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ 40 ವರ್ಷದ ಸಿಬ್ಬಂದಿಗೆ ಕೋವಿಡ್ 19 ಪಾಸಿಟಿವ್ ಬಂದಿದ್ದು, ಪಾಲಿಕೆ ಅಧಿಕಾರಿಗಳು ಕಚೇರಿಯನ್ನು ಸೀಲ್‌ಡೌನ್ ಮಾಡಿದ್ದಾರೆ. ಸೋಂಕಿತ ವ್ಯಕ್ತಿಗೆ ಮೂರು ದಿನದಿಂದ ಜ್ವರ ಇದ್ದು, ಸಕ್ರ ಆಸ್ಪತ್ರೆಯಲ್ಲಿ ಪರೀಕ್ಷೆ ಮಾಡಿಸಿದ್ದಾರೆ. ಬುಧವಾರ ರಾತ್ರಿ ವರದಿ ಬಂದಿದ್ದು, ಗುರುವಾರ ಬೆಳಗ್ಗೆ ಅಂಚೆ ಕಚೇರಿಯನ್ನು ಸೀಲ್ ಡೌನ್ ಮಾಡಲಾಗಿದೆ. ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ 64 ಸಿಬ್ಬಂದಿಯನ್ನು ಹೋಮ್ ಕ್ವಾರಂಟೈನ್ ಮಾಡಲಾಗಿದೆ.
ಸೋಂಕಿತ ವ್ಯಕ್ತಿಯ ಮನೆಯಲ್ಲಿ 4 ಜನರಿದ್ದು, ಅವರನ್ನೂ ಕೋವಿಡ್ 19 ಪರೀಕ್ಷೆಗೆ ಒಳಪಡಿಸಲಾಗಿದೆ. ಹೋಮ್ ಕ್ವಾರಂಟೈನ್ ನಲ್ಲಿರುವ ಅಂಚೆ ಕಚೇರಿ ಸಿಬ್ಬಂದಿಗೆ ಐದು ದಿನಗಳ ನಂತರ ಪರೀಕ್ಷೆಗೆ ಒಳಪಡಿಸಲಾಗುವುದು. ತಾತ್ಕಾಲಿಕವಾಗಿ ಅಂಚೆ ಕಚೇರಿಯನ್ನು ಬಂದ್ ಮಾಡಲಾಗಿದ್ದು, ಗ್ರಾಹಕರು ಇಂದಿರಾನಗರ ಅಂಚೆ ಕಚೇರಿ ಸೇರಿದಂತೆ ಹತ್ತಿರದ ಕಚೇರಿಯಲ್ಲಿ ಸೇವೆ ಪಡೆಯಬಹುದು ಎಂದು ಬೆಂಗಳೂರು ಪೂರ್ವ ಅಂಚೆ ವಿಭಾಗದ ಸೀನಿಯರ್ ಸೂಪರಿಟೆಂಡೆಂಟ್ ಬಿ.ಎಸ್. ಚಂದ್ರಶೇಖರ್ ತಿಳಿಸಿದ್ದಾರೆ.