ಹುಬ್ಬಳ್ಳಿ: ನೈಋತ್ಯ ರೈಲ್ವೆ ಹುಬ್ಬಳ್ಳಿ ವಿಭಾಗ ಪ್ರಸಕ್ತ ವರ್ಷದ ಆಗಸ್ಟ್‌ವರೆಗೆ 12.77 ಮಿಲಿಯನ್ ಟನ್ ಸರಕು ಸಾಗಣೆ ಮಾಡಿ 1115.88 ಕೋಟಿ ರೂ. ಆದಾಯ ಗಳಿಸಿದೆ ಎಂದು ಅಪರ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಮುರಳಿಕೃಷ್ಣ ಹೇಳಿದರು.
ನೈರುತ್ಯ ರೈಲ್ವೆ ವಲಯ ಹುಬ್ಬಳ್ಳಿ ವಿಭಾಗೀಯ ರೈಲ್ವೆ ಬಳಕೆದಾರರ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಇದೇ ಅವಧಿಯಲ್ಲಿ 141.9 ಲಕ್ಷ ಮಂದಿ ಪ್ರಯಾಣಿಸಿದ್ದು, 149.01 ಕೋಟಿ ರೂ. ಆದಾಯ ಪಡೆದಿದೆ ಎಂದರು.
2019 ಏಪ್ರಿಲ್ನಲ್ಲಿ ವಂದಾಲ ಮತ್ತು ಮುಳವಾಡ ನಡುವಿನ 26 ಕಿ.ಮೀ. ಜೋಡಿ ಮಾರ್ಗ ಪೂರ್ಣಗೊಳಿಸಲಾಗಿದೆ ಎಂದು ತಿಳಿಸಿದರು.
ಸಾವರ್ಡೆ-ದಡೇಮ್ ರಸ್ತೆಯಲ್ಲಿ ಸಬ್ ವೇ ನಿರ್ಮಾಣ ಕುರಿತು ಗೋವಾ ಸಂಸದ ದೀಪಕ ಪ್ರಭು ಪ್ರಶ್ನೆ ಕೇಳಿದಾಗ, ಕಾಮಗಾರಿ ಟೆಂಡರ್ ಪೂರ್ಣಗೊಂಡಿದ್ದು, ಶೀಘ್ರ ಕಾಮಗಾರಿ ಆರಂಭಿಸಲಾಗುವುದು. ಕುಲೆಮ್‌ನಲ್ಲಿ ಹೊಸ ನಿಲ್ದಾಣ ಕಾರ್ಯ ಆರಂಭಗೊಂಡಿದ್ದು, ಅಲ್ಲಿ 2ನೇ ಪ್ಲಾಟ್ಫಾರ್ಮ್ ಅನ್ನು ಶೀಘ್ರದಲ್ಲೇ ಆರಂಭಿಸಲಾಗುವುದು ಎಂದು ತಿಳಿಸಿದರು.
ವಿನಯ ಜವಳಿ, ವಿಮಲ್ ತಾಳಿಕೋಟಿ, ಮಾಧುರಿ ಕುಲಕರ್ಣಿ, ರೋಹನ್ ಜವಳಿ ಪಾಲ್ಗೊಂಡಿದ್ದರು.