Advertisement

ಜಿಲ್ಲೆಯಲ್ಲಿ 110 ಡೆಂಘೀ ಪ್ರಕರಣ ದೃಢ

06:49 PM Apr 28, 2020 | Suhan S |

ಬಳ್ಳಾರಿ: ಗಣಿಜಿಲ್ಲೆ ಬಳ್ಳಾರಿಯಲ್ಲಿ ಡೆಂಘೀ ಪ್ರಕರಣಗಳು ಅಧಿಕ ಪ್ರಮಾಣದಲ್ಲಿ ವರದಿಯಾಗುತ್ತಿದ್ದು ಅವುಗಳ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಹಾಗೂ ತಾಲೂಕು ಆಡಳಿತಗಳು ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಎಸ್‌.ಎಸ್‌. ನಕುಲ್‌ ಸೂಚನೆ ನೀಡಿದರು.

Advertisement

ನಗರದ ಜಿಲ್ಲಾಧಿಕಾರಿ ಕಚೇರಿಯ ಕೆಸ್ವಾನ್‌ ಸಭಾಂಗಣದಲ್ಲಿ ಸೋಮವಾರ ಸಹಾಯಕ ಆಯುಕ್ತರು, ತಹಶೀಲ್ದಾರ್‌ರು, ಆರೋಗ್ಯ ಇಲಾಖೆಯ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್‌ ನಡೆಸಿ ಅವರು ಮಾತನಾಡಿದರು. ಕಳೆದ ವರ್ಷ ಇದೇ ಸಂದರ್ಭದಲ್ಲಿ ಸಂಶಯಾಸ್ಪದ 658 ಪ್ರಕರಣಗಳಿದ್ದು, 12 ಪಾಸಿಟಿವ್‌ ಎಂದು ದೃಢಪಟ್ಟಿದ್ದವು. ಈ ವರ್ಷ 1425 ಸಂಶಯಾಸ್ಪದ ಪ್ರಕರಣಗಳು ಕಂಡುಬಂದಿದ್ದು, 110 ಪಾಸಿಟಿವ್‌ ಎಂದು ದೃಢೀಕರಿಸಲಾಗಿದೆ.

ಇದು ಅತ್ಯಂತ ಆತಂಕಕಾರಿ ಬೆಳವಣಿಗೆಯಾಗಿದೆ. ಕೂಡಲೇ ಆರೋಗ್ಯ ಇಲಾಖೆ ಅಧಿಕಾರಿಗಳು ಮನೆ-ಮನೆ ಸಮೀಕ್ಷೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಬೇಕು. ಎಲ್ಲಿಯೂ ನೀರು ನಿಲ್ಲದಂತೆ ನೋಡಿಕೊಳ್ಳಬೇಕು

ಹಾಗೂ ಲಾರ್ವ ನಾಶಪಡಿಸಬೇಕು.  ಕೋವಿಡ್ 19 ಸಂದರ್ಭದಲ್ಲಿ ಡೆಂಘೀ ಬಗ್ಗೆ ಉದಾಸೀನ ತೊರದೇ ಕಡಿವಾಣ ಹಾಕಲು ಆರೋಗ್ಯ ಇಲಾಖೆ ಜೊತೆಗೆ ತಾಲೂಕು ಆಡಳಿತಗಳು ಕಾರ್ಯಪ್ರವೃತ್ತರಾಗಬೇಕು. ಕಂಟೈನ್ಮೆಂಟ್‌ ಝೋನ್‌ ಸೇರಿದಂತೆ ಎಲ್ಲ ವಲಯಗಳ ಗರ್ಭಿಣಿಯರು, ಕ್ಷಯರೋಗ, ಎಚ್‌ ಐವಿ, ಡಯಾಲಿಸಸ್‌, ವಯೋವೃದ್ಧರ ಗೃಹಗಳು ಸೇರಿದಂತೆ ದುರ್ಬಲ ಗುಂಪುಗಳ ಸಮೀಕ್ಷೆಯನ್ನು ಕೂಡಲೇ ಕೈಗೆತ್ತಿಕೊಳ್ಳಬೇಕು ಎಂದು ಅವರು ಸೂಚಿಸಿದರು.

ಲಾಕ್‌ಡೌನ್‌ ಸಡಿಲಿಕೆ: ಲಾಕ್‌ಡೌನ್‌ ಸಡಿಲಿಕೆ ಕುರಿತು ತಹಶೀಲ್ದಾರ್‌ರು, ಎಸಿಗಳಿಗೆ ವಿಡಿಯೋ ಕಾನ್ಫರೆನ್ಸ್‌ ಮೂಲಕ ಸೂಚನೆ ನೀಡಿದ ಡಿಸಿ ನಕುಲ್‌ ಅವರು ಕೃಷಿ ಚಟುವಟಿಕೆ ಮತ್ತು ಸರಕು ಸಾಗಣಿಕೆ, ಗ್ರಾಮ ಪಂಚಾಯಿತಿಯಲ್ಲಿ ಕೈಗೊಳ್ಳಲಾಗುವ ನರೇಗಾ ಕೆಲಸಗಳಿಗೆ, ರಾಜ್ಯ ಮತ್ತು ಅಂತಾರಾಜ್ಯ, ಒಂದು ಜಿಲ್ಲೆಯಿಂದ ಇನ್ನೊಂದು ಜಿಲ್ಲೆಗಳಿಗೆ ಹೋಗುವ ಅಗತ್ಯವಸ್ತುಗಳ ವಾಹನ ಸರಬರಾಜು ಮಾಡುವ ವಾಹನಗಳಿಗೆ ಯಾವುದೇ ನಿರ್ಬಂಧವಿಲ್ಲ ಎಂದರು.

Advertisement

ಅಲ್ಲದೇ ಹೋಟೆಲ್‌ಗ‌ಳಿಗೆ ಪಾರ್ಸೆಲ್‌ಗೆ ಅವಕಾಶವಿದೆ. ಬುಕ್‌ಸ್ಟಾಲ್‌, ಎಲೆಕ್ಟ್ರಿಕಲ್‌ ಶಾಪ್‌ ಸೇರಿ ಅಗತ್ಯ ಸೇವೆಯನ್ನಾಗಿ ಪರಿಗಣಿಸಿದವು ಮಾತ್ರ ಕಾರ್ಯನಿರ್ವಹಿಸಬೇಕು. ಲಾಡ್ಜ್, ಬಸ್ಸು, ಆಟೋ, ಟ್ಯಾಕ್ಸಿಗಳಿಗೆ ಅಂತರ್‌ ಜಿಲ್ಲೆ, ಅಂತರ್‌ ರಾಜ್ಯ ಸಂಚಾರಕ್ಕೆ ನಿರ್ಬಂಧವಿದೆ. ಶಾಲಾ-ಕಾಲೇಜಿಗೆ ರಜೆ ನೀಡಲಾಗಿದ್ದು, ಯಾವುದೇ ರೀತಿಯ ಧಾರ್ಮಿಕ ಜಾತ್ರೆ, ಸಭೆ, ಸಮಾರಂಭಗಳಿಗೆ ಹಮ್ಮಿಕೊಳ್ಳುವಂತಿಲ್ಲ. ಯಾರಾದರೂ ಮೃತನಾದರೆ 20 ಜನಕ್ಕಿಂತ ಹೆಚ್ಚಿನ ಜನರು ಸೇರುವಂತಿಲ್ಲ ಎಂದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ| ಜನಾರ್ಧನ್‌ ಅವರು ಮಾತನಾಡಿ, ಈ ಬಾರಿ ಡೆಂಘೀ ಪ್ರಕರಣಗಳು ಜಿಲ್ಲೆಯಲ್ಲಿ ಹೆಚ್ಚು ವರದಿಯಾಗಿದೆ. ಎಲ್ಲ ತಾಲೂಕು ಆರೋಗ್ಯ ಅಧಿಕಾರಿಗಳು ಮನೆ-ಮನೆ ಸಮೀಕ್ಷೆ ನಡೆಸಬೇಕು. ನೀರು ನಿಲ್ಲದಂತೆ ನೋಡಿಕೊಳ್ಳಬೇಕು ಮತ್ತು ಲಾರ್ವ ಉತ್ಪತ್ತಿ ನಾಶಪಡಿಸಬೇಕು ಎಂದರು. ಜಿಪಂ ಸಿಇಒ ಕೆ. ನಿತೀಶ್‌ ಮಾತನಾಡಿದರು. ಸಭೆಯಲ್ಲಿ ಎಡಿಸಿ ಮಂಜುನಾಥ, ಪಾಲಿಕೆ ಆಯುಕ್ತೆ ತುಷಾರಮಣಿ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಎಲ್ಲ ಕಾರ್ಯಕ್ರಮಗಳ ಅನುಷ್ಠಾನ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next