Advertisement

11ವಾಹನ ಚಲಾಯಿಸಿ 7ರ ಪೋರಿಯ ದಾಖಲೆ 

12:32 PM Nov 06, 2017 | Team Udayavani |

ಮೈಸೂರು: ಅವಳು 7 ವರ್ಷದ ಪೋರಿ… ಎಷ್ಟೋ ಸಂದರ್ಭಗಳಲ್ಲಿ ಸುಲಭವಾಗಿ ವಾಹನವನ್ನೇರಿ ಕೂರಲು ಪರದಾಡುವ ಪುಟಾಣಿ…ಆದರೆ, ನೀರು ಕುಡಿದಷ್ಟೇ ಸುಲಭವಾಗಿ ಹಲವು ಬಗೆಯ ವಾಹನಗಳನ್ನು ಚಾಲನೆ ಮಾಡುತ್ತಾಳೆ… ಹೌದು, ನಗರದ ಈದ್ಗಾ ಮೈದಾನದಲ್ಲಿ ಹಲವು ಬಗೆಯ ವಾಹನಗಳನ್ನುನೀರು ಕುಡಿದಷ್ಟೇ ಸುಲಭವಾಗಿ ಚಾಲನೆ ಮಾಡಿ ಗೋಲ್ಡನ್‌ ಬುಕ್‌ ಆಫ್ ವರ್ಲ್ಡ್ ರೆಕಾರ್ಡ್‌ ಪುಸ್ತಕ ಸೇರಿದರು. 

Advertisement

ಮೈಸೂರಿನ ಬನ್ನಿಮಂಟಪದ ನಿವಾಸಿ ತಾಜ್‌ಹುದೀನ್‌ ಹಾಗೂ ಫಾತಿಮಾ ಅವರ ಪುತ್ರಿ 7 ವರ್ಷದ ರೀಪಾ ತಸ್ಕೀನ್‌, ತನ್ನಲ್ಲಿರುವ ಅಪರೂಪದ ಪ್ರತಿಭೆ ಮೂಲಕ ದಾಖಲೆ ಸೇರಿದ್ದಾರೆ. ನಗರದ ಸೆಂಟ್‌ ಜೋಸೆಫ್ ಶಾಲೆಯಲ್ಲಿ 2ನೇ ತರಗತಿ ವ್ಯಾಸಂಗ ಮಾಡುತ್ತಿದ್ದು ಒಂದೇ ದಿನದಲ್ಲಿ ಲಾರಿ ಸೇರಿದಂತೆ 11 ವಾಹನ ಚಲಾಯಿಸಿ ನೋಡುಗರನ್ನು ನಿಬ್ಬೆರಗಾಗಿಸಿದಳು.

ಯಶಸ್ವಿ ಚಾಲನೆ: ತನ್ನ ಪ್ರತಿಭೆ ಅನಾವರಣಗೊಳಿಸಿ ದಾಖಲೆ ಪುಸ್ತಕ ಸೇರುವ ಪ್ರಯತ್ನಕ್ಕಾಗಿ ನಗರದ ಈದ್ಗಾ ಮೈದಾನದಲ್ಲಿ ಇದರ ಪ್ರಯೋಗ ನಡೆಯಿತು. ಗೋಲ್ಡನ್‌ ಬುಕ್‌ ಆಫ್ ರೆಕಾರ್ಡ್ಸ್‌ನ ತೀರ್ಪುಗಾರ ಸಂತೋಷ್‌ ಅಗರವಾಲ್‌ರ ಸಮ್ಮುಖದಲ್ಲಿ ಪರೀಕ್ಷೆ ನಡೆಯಿತು.

ಈ ವೇಳೆ ಬಾಲಕಿ ರೀಪಾ ತಸ್ಕೀನ್‌, 10 ಚಕ್ರದ ಲಾರಿ ಓಡಿಸಿದರೆ, ಸೆಂಟ್‌ ಜೋಸೆಫ್ ಶಾಲೆ ಆವರಣದಲ್ಲಿ ಗೂಡ್ಸ್‌ ವಾಹನ, ಆ್ಯಂಬುಲೆನ್ಸ್‌, ಹೋಂಡಾ ಸಿಟಿ, ಸ್ಕಾರ್ಪಿಯೋ, ಟಾಟಾ ಸಫಾರಿ, ಮಾರುತಿ 800 ಕಾರುಗಳನ್ನು ಸುಲಲಿತವಾಗಿ ಓಡಿಸಿದಳು. ಇದನ್ನು ಗಮನಿಸಿದ ತೀರ್ಪುಗಾರರು, ಬಾಲಕಿ ಸಾಧನೆ ಗೋಲ್ಡನ್‌ ಬುಕ್‌ ಆಫ್ ರೆಕಾರ್ಡ್ಸ್‌ ಪುಸ್ತಕ ಸೇರಿರುವುದಾಗಿ ಘೋಷಿಸಿದರು. 

ತಂದೆ ಕನಸು ನನಸಾಯ್ತು: ಬಾಲಕಿ ರೀಪಾ ತಸ್ಕೀನ್‌ರ ತಂದೆ ತಾಜ್‌ವುದ್ದೀನ್‌ 4 ದಶಕಗಳ ಹಿಂದೆ ರಾಜ್ಯದಲ್ಲಿ ಕಾರು -ಬೈಕ್‌ ರೇಸ್‌ನಲ್ಲಿ ಪ್ರಖ್ಯಾತಿ ಪಡೆದಿದ್ದರು. ತಮ್ಮ 10ನೇ ವಯಸ್ಸಿನಲ್ಲೇ ಬೈಕ್‌ ಮತ್ತು ಕಾರುಗಳನ್ನು ಓಡಿಸಲು ಪಣತೊಟ್ಟಿದ್ದರು. ಅಲ್ಲದೆ, ತಮಗೆ ಗಂಡು ಮಗುವಾದರೆ, ಆತನನ್ನು ಬೈಕ್‌ ರೇಸರ್‌ ಮಾಡುವ ಕನಸು ಹೊತ್ತಿದ್ದರು.

Advertisement

ಆದರೆ, ಹೆಣ್ಣು ಮಗು ಹುಟ್ಟಿದ್ದರಿಂದ ಬೇಸರಗೊಳ್ಳದ ತಾಜ್‌ವುದ್ದೀನ್‌, ತಸ್ಕೀನ್‌ಗೆ ವಾಹನ ಓಡಿಸುವ ತರಬೇತಿ ನೀಡಿ 3ನೇ ವರ್ಷಕ್ಕೆ ವಾಹನ ಚಲಾಯಿಸುವ ಸಾಹಸಕ್ಕೆ ಪ್ರೇರೇಪಿಸಿದರು. ಇದಾದ 4 ವರ್ಷಗಳ ನಂತರ ಬೈಕ್‌, ಕಾರ್‌ಗಳನ್ನು ಸರಾಗವಾಗಿ ಓಡಿಸುವ ಮೂಲಕ ತನ್ನ ತಂದೆಯ ಕನಸನ್ನು ನನಸು ಮಾಡಿದ್ದಾಳೆ.

ಅಪ್ಪ ಮಡಿಲಲ್ಲಿ ಕೂರಿಸಿಕೊಂಡು ತರಬೇತಿ: ಅಪ್ಪ ತನ್ನನ್ನು ಮಡಿಲಿನಲ್ಲಿ ಕೂರಿಸಿಕೊಂಡು ಡ್ರೈವಿಂಗ್‌ ಮಾಡಿದ್ದು, ತನ್ನ ಉಸಿರಾಗಿದೆ. ಡ್ರೈವಿಂಗ್‌ ಇಲ್ಲದೆ ಬದುಕಿಲ್ಲ ಎಂಬಂತಾಗಿದೆ. ಮುಂದೆ ನಾನು ಏರ್‌ಫೋರ್ಸ್‌ ಸೇರಿ, ದೇಶ ಸೇವೆ ಮಾಡಬೇಕೆಂಬುದೇ ನನ್ನ ಗುರಿ ಎಂದು ಬಾಲಕಿ
ರೀಪಾ ತಸ್ಕೀನ್‌ ತಿಳಿಸಿದ್ದಾಳೆ. 

ಮಗಳು ದೇಶದ ಕೀರ್ತಿ ಹೆಚ್ಚಿಸಲಿ: ಭಾರತದ ಕೀರ್ತಿ ಹೆಚ್ಚಿಸಬೇಕೆಂಬುದು ನನ್ನ ಆಸೆ. ಇದಕ್ಕಾಗಿ ಜಾಗತಿಕ ಮಟ್ಟದಲ್ಲಿ ದೇಶದ ಹೆಸರು ಮತ್ತಷ್ಟು ಪ್ರಜ್ವಲಿಸಬೇಕು. ಹೀಗಾಗಿ ನನ್ನ ಮಗಳನ್ನು ತಯಾರಿ ಮಾಡುತ್ತಿದ್ದೇನೆ. ಭಾರತದಲ್ಲಿ ಪ್ರಥಮ ಬಾರಿಗೆ ಕಿರಿಯ ವಯಸ್ಸಿನಲ್ಲೇ ಫಾರ್ಮೂಲ-1 ಕಾರನ್ನು ಓಡಿಸಬೇಕು ಎಂಬುದು ನನ್ನ ಕನಸಾಗಿದೆ ಎಂದು ರೀಪಾ ತಸ್ಕೀನ್‌ ತಂದೆ ತಾಜ್‌ವುದ್ದೀನ್‌ ತಿಳಿಸಿದ್ದಾರೆ.
 
2 ವಾರದೊಳಗೆ ಪ್ರಮಾಣ ಪತ್ರ: ಅತ್ಯಂತ ಚಿಕ್ಕ ವಯಸ್ಸಿನಲ್ಲಿ ದೊಡ್ಡ ವಾಹನ ಚಲಾಯಿಸುವ ಮೂಲಕ ತಸ್ಕೀನ್‌ ದಾಖಲೆಯ ಪುಸ್ತಕ ಸೇರಿದ್ದಾರೆ. ಈ ಬಗ್ಗೆ ತಾತ್ಕಾಲಿಕ ಪ್ರಮಾಣ ಪತ್ರ ನೀಡಲಾಗಿದೆ. 2 ವಾರದೊಳಗೆ ಪ್ರಮಾಣಪತ್ರ, ಟೀ ಶಾರ್ಟ್‌ ಹಾಗೂ ಗೋಲ್ಡನ್‌ ಬುಕ್‌ ಆಫ್ ರೇಕಾರ್ಡ್‌ನ ಪುಸ್ತಕ ನೀಡಲಾಗುವುದು ಎಂದು ಗೋಲ್ಡನ್‌ ಬುಕ್‌ ಆಫ್ ರೆಕಾರ್ಡ್ಸ್‌ ತೀರ್ಪುಗಾರ ಸಂತೋಷ್‌ ಅಗರವಾಲ್‌ ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next