ಹುಮನಾಬಾದ: ನೂತನ ಚಿಟಗುಪ್ಪ ತಾಲೂಕಿನ 14 ಗ್ರಾಪಂ, 11 ತಾಪಂ ಕ್ಷೇತ್ರಗಳು ಏ.1ರಿಂದ ಅಧಿಕೃತವಾಗಿ ಚಿಟಗುಪ್ಪ ತಾಲೂನಲ್ಲಿಯೇ ಕಾರ್ಯ ನಿರ್ವಹಿಸಲಿವೆ.
ಚಿಟಗುಪ್ಪ ಹೊಸ ತಾಲೂಕಿನ ವ್ಯಾಪ್ತಿಗೆ 37 ಗ್ರಾಮಗಳು ಸೇರ್ಪಡೆಯಾಗಿದ್ದು, ಸದ್ಯ ತಾಲೂಕು ಕೇಂದ್ರದಲ್ಲಿ ವಿವಿಧ ಇಲಾಖೆಗಳು ಕಾರ್ಯ ನಿರ್ವಹಿಸುವ ನಿಟ್ಟಿನಲ್ಲಿ ಪೂರ್ಣ ಪ್ರಮಾಣದ ಸಿದ್ಧತೆ ಮಾಡಲಾಗುತ್ತಿದೆ. ಏ.1ರಿಂದ ಚಿಟಗುಪ್ಪ ತಾಲೂಕು ವ್ಯಾಪ್ತಿಗೆ ಒಳಪಡುವ ಗ್ರಾಮಗಳ ಜನರು ಯಾವುದೇ ಸರ್ಕಾರಿ ಕೆಲಸಗಳಿಗೆ ಅಲ್ಲಿನ ಇಲಾಖೆಗಳಿಗೆ ಭೇಟಿ ನೀಡಿ ಪರಿಹಾರ ಪಡೆದುಕೊಳ್ಳುವ ನಿಟ್ಟಿನಲ್ಲಿ ತಯಾರಿ ನಡೆದಿದೆ. ಅಲ್ಲದೆ, ಈಗಾಗಲೇ ಕೆಲ ಇಲಾಖೆಗಳು ಬಾಡಿಗೆ ಕಟ್ಟಡ ಪಡೆದುಕೊಂಡು ಕೆಲಸ ಆರಂಭಿಸಿವೆ. ನಾಲ್ಕು ದಶಕಗಳ ಕಾಲ ತಾಲೂಕು ಕೇಂದ್ರಕ್ಕೆ ಹೋರಾಟ ನಡೆಸಿದವರಿಗೆ ಸಂತಸ ಮೂಡಿಸಿದಂತಾಗಿದೆ.
11 ತಾಪಂ ಕ್ಷೇತ್ರಗಳು: ಈ ಮೊದಲು ಹುಮನಾಬಾದ ತಾಪಂ ವ್ಯಾಪ್ತಿಯಲ್ಲಿ 27 ತಾಪಂ ಕ್ಷೇತ್ರಗಳಿದ್ದವು. ಈ ಪೈಕಿ 11 ತಾಪಂ ಕ್ಷೇತ್ರಗಳು ಈಗ ಚಿಟಗುಪ್ಪ ತಾಲೂಕಿಗೆ ಸೇರ್ಪಡೆಯಾಗಿವೆ. ಬೇಮಳಖೇಡಾ ತಾಪಂ ಕ್ಷೇತ್ರದ ವಿದ್ಯಾವತಿ ವೈಜಿನಾಥ, ಚಾಂಗ್ಲೆರಾ ಕ್ಷೇತ್ರದ ಶಾಂತಬಾಯಿ ಮನ್ನು, ಮೀನಕೇರಾ ಕ್ಷೇತ್ರದ ಜಗನ್ನಾಥ ನಾಗಪ್ಪ, ಮನ್ನಾಏಖೆಳಿ ಕ್ಷೇತ್ರದ ಸೈಇಲಾಯಿ ಬೇಗಂ, ನಿರ್ಣಾ ಕ್ಷೇತ್ರದ ಸಂಗೀತಾ ಸಂಜೀವರೆಡ್ಡಿ, ಮಂಗಲಗಿ ಕ್ಷೇತ್ರದ ಶ್ರೀಮಂತ ಪಾಟೀಲ, ಮುತ್ತಂಗಿ ಕ್ಷೇತ್ರದ ಕವಿತಾಬಾಯಿ ಸುಭಾಷ, ಬೆಳಕೇರಾ ಕ್ಷೇತ್ರದ ಬಲರಾಮರೆಡ್ಡಿ, ಕೊಡಂಬಲ್ ಕ್ಷೇತ್ರದ ಬೀರಪ್ಪ ಗುಂಡಪ್ಪ, ಇಟಗಾ ಕ್ಷೇತ್ರದ ಮನೋಜಕುಮಾರ ಕೋಟೆಕರ್, ಮುಸ್ತರಿ ಕ್ಷೇತ್ರದ ನಿರ್ಮಲಾಬಾಯಿ ಕಾಶಿನಾಥ ಮುಂದಿನ ತಿಂಗಳಿಂದ ಚಿಟಗುಪ್ಪ ತಾಪಂ ಕಡೆಗೆ ಮುಖ ಮಾಡಲಿದ್ದಾರೆ.
14 ಗ್ರಾಪಂ: ಚಿಟಗುಪ್ಪ ಹೊಸ ತಾಲೂಕಿನ ವ್ಯಾಪ್ತಿಗೆ ಒಟ್ಟಾರೆ 14 ಗ್ರಾಪಂಗಳು ಒಳಪಟ್ಟಿವೆ. ಉಡಮನಳ್ಳಿ, ಬೆಮಳಖೇಡಾ, ಮೀನಕೇರಾ, ಚಾಂಗಲೇರಾ, ಮುತ್ತಂಗಿ, ನಿರ್ಣಾ, ಮನ್ನಾಏಖೇಳ್ಳಿ, ಮಂಗಲಗಿ, ಬೆಳಕೇರಾ, ಕೊಡಂಬಲ್, ಮುಸ್ತರಿ, ಉಡಬಾಳ, ಇಟಗಾ, ತಾಳಮಡಗಿ ಗ್ರಾಪಂಗಳು ಇನ್ಮುಂದೆ ಚಿಟಗುಪ್ಪ ತಾಲೂಕಿನಲ್ಲಿ ಕಾರ್ಯನಿರ್ವಹಿಸಲಿವೆ. ಅಲ್ಲದೆ, ಕಂದಾಯ ಇಲಾಖೆ ಕೂಡ ಮೂರು ಹೋಬಳಿ ಕೇಂದ್ರ ಗುರುತಿಸಿದ್ದು, ಚಿಟಗುಪ್ಪ, ನಿರ್ಣಾ ಹಾಗೂ ಬೆಮಳಖೇಡಾ ಹೋಬಳಿ ಕೇಂದ್ರವಾಗಿ ಮುಂದುವರಿಯಲಿವೆ.
ತಾಲೂಕು ವ್ಯಾಪ್ತಿಯ ಪ್ರಮುಖ ಗ್ರಾಮ: ಚಿಟಗುಪ್ಪ ಪಟ್ಟಣ, ಬೆಳಕೇರಾ, ಕೂಡಂಬಲ್, ಮುಸ್ತರಿ, ತಾಳಮಡಗಿ, ಇಟಗಾ, ಮುದ್ನಾಳ, ವಳಖೆಂಡಿ, ರಾಂಪುರ, ಕಂದಗೋಳ, ಶಮತಾಬಾದ್, ವಡನಕೇರಾ, ಹಿಪ್ಪರಗಾ, ಮಾಡಗೋಳ, ಮುತ್ತಂಗಿ, ನಿರ್ಣಾ, ಮದರಗಿ, ಬಾದರಾಪುರ, ನಾಗನಕೇರಾ, ಬಸಿರಾಪುರ, ದೇವಗಿರಿ, ಅಲ್ಲಿಪುರ, ಮಂಗಲಗಿ, ಬನಳ್ಳಿ, ಬೆಮಳಖೇಡಾ, ಕಾರಪಾಕಪಳ್ಳಿ, ಪೋಲಕಪಳ್ಳಿ, ಚಾಂಗಲೇರಾ, ಮನಾಏಖೇಳ್ಳಿ, ಬೋರಾಳ, ಕರಕನಳ್ಳಿ, ಸೈದಾಪುರ ಸೇರಿದಂತೆ ಇನ್ನು ಕೆಲ ಗ್ರಾಮಗಳು ನೂತನ ಚಿಟಗುಪ್ಪ ತಾಲೂಕು ವ್ಯಾಪ್ತಿಗೆ ಸೇರ್ಪಡೆಯಾಗಿದ್ದು, ಮುಂದಿನ ದಿನಗಳಲ್ಲಿ ಎಲ್ಲ ಗ್ರಾಮಗಳಿಗೆ ಚಿಟಗುಪ್ಪ ತಾಲೂಕು ಕೇಂದ್ರವಾಗಿ ಅಧಿಕೃತವಾಗಿ ಪೂರ್ಣ ಪ್ರಮಾಣದಲ್ಲಿ ಕಾರ್ಯ ನಿರ್ವಹಿಸಲಿದೆ.
ಏ.1ರಿಂದ ನೂತನ ಚಿಟಗುಪ್ಪ ತಾಲೂಕು ಕೇಂದ್ರವಾಗಿ ಕಾರ್ಯ ನಿರ್ವಹಣೆ ಮಾಡಲ್ಲಿದೆ. ತಾಲೂಕಿನ ವ್ಯಾಪ್ತಿಯ ಗ್ರಾಮ ಪಂಚಾಯತಗಳು, ತಾಪಂ ಅಧಿಕೃತವಾಗಿ ಕಾರ್ಯ ನಿರ್ವಹಣೆಯಾಗಲಿವೆ. ಈಗಾಗಲೇ ಚಿಟಗುಪ್ಪದಲ್ಲಿ ತಾಪಂ ಕಚೇರಿ ಕಾರ್ಯ ನಿರ್ವಹಿಸುತ್ತಿದ್ದು, ಮುಂದಿನ ದಿನಗಳಲ್ಲಿ ಖಾಲಿ ಹುದ್ದೆಗಳ ಭರ್ತಿ ಮಾಡುವ ನಿಟ್ಟಿನಲ್ಲಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.
-ವೈಜಿನಾಥ ಫುಲೆ, ತಾಪಂ ಇಒ