ಮುಂಬಯಿ, ಸೆ. 21: ರಾಜ್ಯದಲ್ಲಿ ಕೋವಿಡ್ ಮೊದಲ ಪ್ರಕರಣ ಬೆಳಕಿಗೆ ಬಂದಾಗಿನಿಂದ, ರಾಜ್ಯದ ಪರಿಸ್ಥಿತಿ ನಿರಂತರವಾಗಿ ಹದಗೆಡುತ್ತಿದ್ದು, ಕೋವಿಡ್ ಅಧಿಕ ಸೋಂಕಿತರ ಪಟ್ಟಿಯಲ್ಲಿ ಸತತವಾಗಿ ಅಗ್ರಸ್ಥಾನದಲ್ಲಿರುವ ಮಹಾರಾಷ್ಟ್ರವು ದೇಶದ ರಾಜ್ಯಗಳನ್ನು ಮಾತ್ರವಲ್ಲದೆ ವಿಶ್ವದ ಹಲವು ದೇಶಗಳನ್ನೂ ಮೀರಿ ಮುನ್ನಡೆಯುತ್ತಿದೆ.
31 ಸಾವಿರಕ್ಕೂ ಅಧಿಕ ಮಂದಿ ಸಾವು : ಪ್ರಸ್ತುತ ರಾಜ್ಯದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ 11 ಲಕ್ಷ ದಾಟಿದೆ. ಅಧಿಕ ಸೋಂಕಿತರ ಸ್ಥಾನದಲ್ಲಿ ಆಂಧ್ರಪ್ರದೇಶ 2ನೇ ಸ್ಥಾನದಲ್ಲಿದೆ. ಆದರೆ ಇಲ್ಲಿಯೂ ಸಹ ರೋಗಿಗಳ ಸಂಖ್ಯೆ ಮಹಾರಾಷ್ಟ್ರದಲ್ಲಿ ಸೋಂಕಿತರ ಸಂಖ್ಯೆಯ ಅರ್ಧದಷ್ಟಿದೆ ಎನ್ನಲಾಗಿದೆ. ರಾಜ್ಯದಲ್ಲಿ ಕೋವಿಡ್ ಸೋಂಕಿನಿಂದ 31 ಸಾವಿರಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಒಂದೆಡೆ ರಾಜ್ಯದಲ್ಲಿ ಹೆಚ್ಚುತ್ತಿರುವ ಸೋಂಕಿತರ ಸಂಖ್ಯೆ ನಿಯಂತ್ರಣಕ್ಕೆ ಬರುತ್ತಿಲ್ಲ. ಇನ್ನೊಂದೆಡೆ ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಸೋಟಕ್ಕೆ ಎಲ್ಲ ತಜ್ಞರು ವಿಭಿನ್ನ ಕಾರಣಗಳನ್ನು ನೀಡುತ್ತಿದ್ದಾರೆ.
ವಲಸಿಗರಿಂದ ಕೋವಿಡ್ ಸೋಂಕು ಉಲ್ಬಣ : ಮಹಾರಾಷ್ಟ್ರವು ಉದ್ಯೋಗದ ಶಕ್ತಿಶಾಲಿ ಕೇಂದ್ರವಾಗಿದೆ ಎಂದು ಕೆಲವು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಇಲ್ಲಿಗೆ ಅಧಿಕ ಸಂಖ್ಯೆಯಲ್ಲಿ ವಲಸೆ ಬಂದವರು ಕೋವಿಡ್ ಸೋಂಕು ಹೆಚ್ಚಾಗಲು ಕಾರಣರಾಗಿದ್ದಾರೆ. ಏತನ್ಮಧ್ಯೆ ಮುಂಬಯಿಯ ಹಣಕಾಸು ಕ್ಷೇತ್ರವನ್ನು ಎಂದಿಗೂ ಮುಚ್ಚಿಲ್ಲ ಎಂದು ಆರೋಗ್ಯ ಅರ್ಥಶಾಸ್ತ್ರಜ್ಞ ರವಿ ದುಗ್ಗಲ್ ಹೇಳಿದ್ದಾರೆ. ದೇಶಾದ್ಯಂತ ಲಾಕ್‌ಡೌನ್ ಜಾರಿಗೊಳಿಸಿದಾಗಲೂ, ಬ್ಯಾಂಕುಗಳಲ್ಲಿ ಅಥವಾ ಹಣಕಾಸು ಸಂಸ್ಥೆಗಳಲ್ಲಿ ಜನರ ಸಂಚಾರವನ್ನು ನಿಲ್ಲಿಸಲಾಗಲಿಲ್ಲ. ಇದು ಸೋಂಕನ್ನು ಹರಡಲು ಸಹ ಸಹಾಯ ಮಾಡಿದೆ ಎಂದು ಆಪಾದಿಸಿದ್ದಾರೆ. ಯುನೈಟೆಡ್ ಸ್ಟೇಟ್ಸ್ ನ್ಯೂಯಾರ್ಕ್ ನಗರದಲ್ಲಿ ಹೆಚ್ಚಿನ ಕೋವಿಡ್ ಪ್ರಕರಣಗಳು ವರದಿಯಾಗಿವೆ ಎಂದು ಆರೋಗ್ಯ ತಜ್ಞ ಡಾ| ಅನಂತ್ ಭನ್ ಹೇಳಿದ್ದಾರೆ. ಅದೇ ರೀತಿ ಮುಂಬಯಿಯಲ್ಲೂ ಸಂಭವಿಸಿದೆ. ವಲಸಿಗರು ತಮ್ಮ ಕೆಲಸದ ಸ್ಥಳಗಳಿಗೆ ಮರಳುವುದು ಆತಂಕಕ್ಕೆ ಹೊಸ ಕಾರಣವಾಗಿದೆ ಎಂದು ಅವರು ಹೇಳಿದ್ದು, ಥಾಣೆ ನಿಲ್ದಾಣಕ್ಕೆ ಬರುವ ಪ್ರತಿ 10 ಮಂದಿಯಲ್ಲಿ ಒಬ್ಬರಿಗೆ ಸೋಂಕು ದೃಢಪಡುತ್ತಿರುವುದು ಇದಕ್ಕೆ ನಿದರ್ಶನವಾಗಿದೆ ಎಂದಿದ್ದಾರೆ.
ಶಿಥಿಲಗೊಂಡ ಆರೋಗ್ಯ ಸೌಲಭ್ಯ: ಉತ್ತರ ಪ್ರದೇಶದ ಬಳಿಕ ಮಹಾರಾಷ್ಟ್ರದಲ್ಲಿ ಅಧಿಕ ಸಂಖ್ಯೆಯಲ್ಲಿ ಕೋವಿಡ್ ಪರೀಕ್ಷೆ ಮಾಡಲಾಗಿದೆ. ಸದ್ಯ ನಡೆದ ಪರೀಕ್ಷೆ ಜನಸಂಖ್ಯಾ ಸಾಂದ್ರತೆಯ ದೃಷ್ಟಿಯಿಂದ ತುಂಬಾ ಕಡಿಮೆಯಾಗಿದೆ. ರಾಜ್ಯದ ಆರೋಗ್ಯ ಇಲಾಖೆಯ ಸ್ಥಿತಿ ಈಗಾಗಲೇ ಕೆಟ್ಟಿದೆ. ಆರೋಗ್ಯ ಮೂಲಸೌಕರ್ಯಕ್ಕಾಗಿ ಕನಿಷ್ಠ ಖರ್ಚು ಮಾಡುವ ರಾಜ್ಯ ಮಹಾರಾಷ್ಟ್ರ. ಇದಲ್ಲದೆ ವೈದ್ಯಕೀಯ ಕ್ಷೇತ್ರದಲ್ಲಿ ಭಾರೀ ಸಂಖ್ಯೆಯಲ್ಲಿ ಹುದ್ದೆಗಳು ಖಾಲಿಯಿವೆ. ಈ ಎಲ್ಲ ಕಾರಣಗಳಿಂದಾಗಿ ಕೋವಿಡ್ ಪ್ರಕರಣಗಳು ಮಹಾರಾಷ್ಟ್ರದಲ್ಲಿ ಅನಿಯಂತ್ರಿತವಾಗಿವೆ. ರಾಜ್ಯ ರಾಜಧಾನಿ ಮುಂಬಯಿಯಲ್ಲಿ ಸೋಂಕಿತರ ಸಂಖ್ಯೆ ತೀವ್ರವಾಗಿ ಹೆಚ್ಚಾಗಿದೆ ಎನ್ನಲಾಗುತ್ತಿದೆ. ಕಳೆದ ಒಂದು ತಿಂಗಳಲ್ಲಿ ರಾಜಧಾನಿಯಲ್ಲಿ ಸಕ್ರಿಯ ರೋಗಿಗಳ ಸಂಖ್ಯೆ ಸುಮಾರು ಶೇ. 92ರಷ್ಟು ಹೆಚ್ಚಾಗಿದೆ. ಬಿಎಂಸಿಮಾಹಿತಿ ಪ್ರಕಾರ ಆಗಸ್ಟ್ 18ರಂದು ಮುಂಬಯಿಯಲ್ಲಿ ಕೋವಿಡ್ 17,697 ಸಕ್ರಿಯ ರೋಗಿಗಳಿದ್ದರು. ಸೆ. 18ರಂದು ಈ ಸಂಖ್ಯೆ 34,136ಕ್ಕೆ ಏರಿದೆ. ಸೆ. 1ರಂದು ಆಸ್ಪತ್ರೆಯಲ್ಲಿ ಒಟ್ಟು 20,062 ಸಕ್ರಿಯ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದರು. ಕಳೆದ 18 ದಿನಗಳಲ್ಲಿ 14,074 ಸಕ್ರಿಯ ರೋಗಿಗಳು ಹೆಚ್ಚಿದ್ದಾರೆ. ಸೆ. 1 ಮತ್ತು 18ರ ನಡುವೆ 33,235 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿವೆ