Advertisement

ಬೀದರನಲ್ಲಿ 11ಕ್ಕೂ ಹೆಚ್ಚು ಗೋ ಶಾಲೆ; ಸೌಲಭ್ಯ ಕೊರತೆ

03:37 PM Jan 11, 2021 | Team Udayavani |

ಬೀದರ: ಗೋವುಗಳ ರಕ್ಷಣೆಗೆ ಗಡಿ ಜಿಲ್ಲೆ ಬೀದರನಲ್ಲಿ ಆರಂಭಿಸಿರುವ ಗೋ ಶಾಲೆಗಳು ಜಾನುವಾರುಗಳ ಸಂರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸುತ್ತಿವೆ. ಆದರೆ,
ಕೆಲವು ಗೋ ಶಾಲೆಗಳು ಅಗತ್ಯ ಮೂಲ ಸೌಕರ್ಯಗಳ ಕೊರತೆ ಎದುರಿಸುತ್ತಿದ್ದು, ಜಾನುವಾರುಗಳು ಪರದಾಡುವಂತಾಗಿದೆ.

Advertisement

ಬೀದರ ಜಿಲ್ಲೆಯಲ್ಲಿ 11ಕ್ಕೂ ಹೆಚ್ಚು ಗೋ ಶಾಲೆಗಳು ಕಾರ್ಯ ನಿರ್ವಹಿಸುತ್ತಿದ್ದು, ಸಾವಿರಾರು ಜಾನುವಾರುಗಳಿಗೆ ಆಶ್ರಯ ತಾಣಗಳಾಗಿವೆ. ಬಹುತೇಕ ಗೋ ಶಾಲೆಗಳು ಮಠ-ಮಂದಿರದ ಅಧೀನದಲ್ಲಿದ್ದರೆ ಉಳಿದವುಗಳು ಖಾಸಗಿ ಸಂಸ್ಥೆಗಳ ಅಡಿಯಲ್ಲಿವೆ. ದೈವ ಸ್ವರೂಪವಾಗಿ ಕಾಣುವ ಗೋವುಗಳ ರಕ್ಷಣೆ ಮಾಡಲಾಗುತ್ತಿದೆ. ಅದರಲ್ಲೂ ವಯಸ್ಸಾದ, ಅಶಕ್ತ ಗೋವು ಹಾಗೂ ದನ-ಕರುಗಳಿಗೆ ಹೊಸ ಬದುಕು ನೀಡಲಾಗುತ್ತಿದೆ. ಯಾವುದಕ್ಕೂ ಉಪಯುಕ್ತವಲ್ಲದ ಗೋವುಗಳಿಗೂ ಸಹ ಶಾಲೆಗಳಲ್ಲಿ ಮೇವು, ನೀರು ಹಾಕಿ ಸಾಕಲಾಗುತ್ತಿದೆ.

ಜಿಲ್ಲೆಯಲ್ಲಿ ಬೀದರನ ರಾಂಪುರೆ ಕಾಲೋನಿಯ ಲಕ್ಷ್ಮೀ ಸತ್ಯನಾರಾಯಣ ಚಾರಿಟೆಬಲ್‌ ಟ್ರಸ್ಟ್‌ನ ಗೋ ಶಾಲೆ (170 ಜಾನುವಾರು), ಔರಾದನ ಅಮರೇಶ್ವರ ಗೋ ಶಾಲೆ (105), ಸೋನಾಳವಾಡಿಯ ಮಹಾದೇವ ಗೋಶಾಲೆ (120), ಭಾಲ್ಕಿ ತೆಗಣಿ ತಾಂಡಾದ ಸುರಗಾಯಿ ರಾಮಣ್ಣ ಗೋ ಶಾಲೆ (101), ಮಾಣಿಕನಗರ ಗೋ ಶಾಲೆ (160), ಚಾಂಗಲೇರಾದ ವೀರಭದ್ರೇಶ್ವರ ಚಾರಿಟೇಬಲ್‌ ಟ್ರಸ್ಟ್‌ ನ ಗೋ ಶಾಲೆ (165), ಹೊನ್ನಿಕೇರಿಯ ಗೋ ಶಾಲೆ (82), ಪಾತರಪಳ್ಳಿಯ
ಪ್ರಗತಿ ಅಭಿವೃದ್ಧಿ ಸಂಸ್ಥೆ (60) ಹಾಗೂ ಹುಮನಾಬಾದನ ಜಗದ್ಗುರು ಸಿದ್ಧಬಸವೇಶ್ವರ ವಿದ್ಯಾಪೀಠ ಟ್ರಸ್ಟ್‌ ಗೋ ಶಾಲೆ (144)ಗಳು ಜಾನುವಾರು ಪಾಲನೆಯಲ್ಲಿ ತೊಡಗಿಸಿಕೊಂಡಿವೆ.

ಬೇಕಿದೆ ಸರ್ಕಾರದ ಧನಸಹಾಯ:
ಮಠ- ಮಂದಿರದ ಲಭ್ಯ ಜಮೀನು ಇಲ್ಲವೇ ಗುತ್ತಿಗೆ ಜಮೀನು ಪಡೆದು ಜಾನುವಾರುಗಳನ್ನು ಸಾಕಲು ಶೆಡ್‌, ಹುಲ್ಲು ಮೇಯಿಲು ಮತ್ತು ಮೇವು ಉತ್ಪಾದನೆ ಮಾಡಲಾಗುತ್ತಿದೆ. ಮೂಲ ಸೌಲಭ್ಯಕ್ಕಾಗಿ ಗೋ ಶಾಲೆಗಳಿಗೆ 10 ಲಕ್ಷ ರೂ.ಗಳವರೆಗೆ ವಿವಿಧ ಕಂತುಗಳಲ್ಲಿ ಸಹಾಯ ಧನ ಕಲ್ಪಿಸಲಾಗಿದೆ. ಕೆಲವು ಗೋ ಶಾಲೆಗಳಿಗೆ ದಾನಿಗಳಿಂದ ಧನ ಸಹಾಯ, ಮೇವು ಪೂರೈಕೆ ಆಗುತ್ತಿವೆ. ಆದರೆ, ನಿರ್ವಹಣೆ ವೆಚ್ಚ ಹೆಚ್ಚುತ್ತಿರುವುದರಿಂದ ಸರ್ಕಾರದ ನೆರವಿನ ಹಸ್ತಕ್ಕಾಗಿ ಎದುರು ನೋಡುವಂತಾಗಿದೆ.

ಆರ್ಥಿಕವಾಗಿ ಸದೃಢವಾಗಿರುವ ಟ್ರಸ್ಟ್‌ಗಳು ಸುಸಜ್ಜಿತ ಗೋ ಶಾಲೆಗಳನ್ನಾಗಿ ರೂಪಿಸಿದ್ದು, ಸಕಾಲಕ್ಕೆ ಮೇವು, ನೀರು ಪೂರೈಸುವುದರ ಜತೆಗೆ ಬೇಸಿಗೆಯಲ್ಲಿ ತಂಪು ಹವೆಗಾಗಿ ಫ್ಯಾನ್‌ಗಳನ್ನು ಅಳವಡಿಸಿ ಗಮನ ಸೆಳೆದಿವೆ. ಬಹುತೇಕ ಗೋ ಶಾಲೆಗಳು ಬೇಸಿಗೆ ಸಂದರ್ಭದಲ್ಲಿ ಮೇವು ಮತ್ತು ನೀರಿನ ಕೊರತೆ ಎದುರಿಸುತ್ತಿವೆ. ಸುತ್ತು ತಂತಿ ಬೇಲಿ ಇಲ್ಲದಿರುವುದು ದೊಡ್ಡ ಸಮಸ್ಯೆಯಾಗಿದೆ. ಮುಖ್ಯವಾಗಿ ಪಶುಗಳ ಆರೋಗ್ಯ ರಕ್ಷಣೆಗಾಗಿ ವಾರಕ್ಕೊಮ್ಮೆ ಆಯಾ ಗೋ ಶಾಲೆಗಳಿಗೆ ಭೇಟಿ ನೀಡಿ ತಪಾಸಣೆ ನಡೆಸಬೇಕಾದ ಪಶು ವೈದ್ಯರು ನಿರ್ಲಕ್ಷ್ಯ ತೋರುತ್ತಿರುವ ಆರೋಪಗಳೂ ಕೇಳಿ ಬಂದಿವೆ. ಮೂಲ ಸೌಲತ್ತುಗಳ ಕೊರತೆ ಎದುರಿಸುತ್ತಿರುವ ಗೋ ಶಾಲೆಗಳತ್ತ ಆಡಳಿತ ಚಿತ್ತಹರಿಸಿ ಮೂಕ ಪ್ರಾಣಿಗಳ ರೋದನೆಯನ್ನು ತೀರಿಸಬೇಕಾಗಿದೆ.

Advertisement

*ಶಶಿಕಾಂತ ಬಂಬುಳಗೆ

Advertisement

Udayavani is now on Telegram. Click here to join our channel and stay updated with the latest news.

Next