Advertisement
ಇತ್ತ, ಪೊಲೀಸರ ವಶದಲ್ಲಿದ್ದ ಉಗ್ರರ ಎಲ್ಲ 11 ಮಂದಿ ಸಂಬಂಧಿಕರನ್ನು ಬಿಡುಗಡೆ ಮಾಡಿರುವ ಹಿನ್ನೆಲೆಯಲ್ಲಿ ತಮ್ಮ ವಶದಲ್ಲಿದ್ದ ಪೊಲೀಸರ ಏಳು ಮಂದಿ ಸಂಬಂಧಿಗಳನ್ನು ಶುಕ್ರವಾರ ರಾತ್ರಿ ಬಿಡುಗಡೆ ಮಾಡಿದ್ದಾರೆಂದು ಜಮ್ಮು ಕಾಶ್ಮೀರದ ಪೊಲೀಸ್ ಮಹಾ ನಿರ್ದೇಶಕ ಎಸ್.ಪಿ. ವೇದ್ ತಿಳಿಸಿದ್ದಾರೆ. ಪೊಲೀಸರಿಂದ ಬಿಡುಗಡೆಗೊಂಡವರಲ್ಲಿ ಕುಖ್ಯಾತ ಉಗ್ರ ಹಾಗೂ ಹಿಜ್ಬುಲ್ ಮುಜಾಹಿದೀನ್ ಕಮಾಂಡರ್ ರಿಯಾಜ್ ನೈಕೂನ ತಂದೆ ಅಸಾದುಲ್ಲಾ ನೈಕೂ ಸಹ ಇದ್ದಾರೆ. ಉಗ್ರರ ಸಂಬಂಧಿಕರನ್ನು ಕೇವಲ ವಿಚಾರಣೆಗಾಗಿ ಮಾತ್ರವೇ ಕರೆದೊಯ್ಯಲಾಗಿತ್ತು ಎಂದು ಅವರು ಸ್ಪಷ್ಟ ಪಡಿಸಿದ್ದಾರೆ.
ರಾಷ್ಟ್ರೀಯ ತನಿಖಾ ಆಯೋಗ (ಎನ್‌ಐಎ) ಗುರುವಾರ ಬಂಧಿಸಿದ್ದ, ಹಿಜ್ಬುಲ್ ಮುಜಾಹಿದೀನ್‌ನ ನಾಯಕ ಸಯ್ಯದ್ ಸಲಾಹುದ್ದೀನ್ ಪುತ್ರ ಸಯ್ಯದ್ ಅಹ್ಮದ್ ಶಕೀಲ್‌ಗೆ ದಿಲ್ಲಿ ಹೈಕೋರ್ಟ್ ಸೆ.10ರ ವ ರೆಗೆ ಕಸ್ಟಡಿ ವಿಧಿಸಿದೆ. 2011ರಲ್ಲಿ ನಡೆದಿದ್ದ ಉಗ್ರರ ದಾಳಿಗೆ ಪೂರಕವಾಗಿ ಉಗ್ರರಿಗೆ ಆರ್ಥಿಕ ಸಹಾಯ ಮಾಡಿದ ಆರೋಪ ಶಕೀಲ್ ಮೇಲಿದೆ. ಕುಖ್ಯಾತ ಉಗ್ರರ ಪಟ್ಟಿ ಬಿಡುಗಡೆ
ಇದೆಲ್ಲದರ ನಡುವೆಯೇ ಜಮ್ಮು ಕಾಶ್ಮೀರ ಪೊಲೀಸರು ಕುಖ್ಯಾತ ಉಗ್ರರ ಹೊಸ ಪಟ್ಟಿಯೊಂದನ್ನು ಶುಕ್ರವಾರ ಬಿಡುಗಡೆ ಮಾಡಿದ್ದಾರೆ. ಅತ್ಯಂತ ಕಟ್ಟಾ ಉಗ್ರಗಾಮಿಗಳಾದ ಝಾಕೀರ್ ಮೂಸಾ, ಹಿಜ್ಬುಲ್‌ನ ಅಗ್ರ ಕಮಾಂಡರ್ ರಿಯಾಜ್ ನೈಕೂ ಸಹಿತ ಲಷ್ಕರ್-ಎ-ತಯ್ಯಬಾ, ಅಲ್ ಬದ್ರ್, ಜೈಶ್-ಎ-ಮೊಹಮ್ಮದ್, ಹಿಜ್ಬುಲ್ ಮುಜಾಹಿದೀನ್ ಹಾಗೂ ಅನ್ವರ್ ಗಜ್ವತ್-ಉಲ್-ಹಿಂದೂ ಸಂಘಟನೆಗಳಿಗೆ ಸೇರಿದ ಒಟ್ಟು 117 ಉಗ್ರರನ್ನು ಹೆಸರಿಸಲಾಗಿದೆ.
Related Articles
ಬುಧವಾರ ಉಗ್ರರು ನಾಲ್ವರು ಪೊಲೀಸರನ್ನು ಕೊಂದ ಹಿನ್ನೆಲೆಯಲ್ಲಿ, ಉಗ್ರರ ಮನೆಗಳನ್ನು ಜಾಲಾಡಿದ್ದ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಅವರ ಸಂಬಂಧಿಕರನ್ನು ವಶಕ್ಕೆ ಪಡೆದಿತ್ತು. ಸಂಬಂಧಿಕರ ಬಿಡುಗಡೆಗಾಗಿ ಪೊಲೀಸರ ಮೇಲೆ ಒತ್ತಡ ಹೇರಲು, ಉಗ್ರರು ಗುರುವಾರ ರಾತ್ರಿ ಜಮ್ಮು ಕಾಶ್ಮೀರದ ಶೋಪಿಯಾನ್, ಕುಲ್ಗಾಮ್, ಅನಂತ ನಾಗ್, ಅವಂತಿ ಪೊರ ಪ್ರಾಂತ್ಯಗಳಲ್ಲಿನ ಪೊಲೀಸರ ಹಾಗೂ ಅವರ ಸಂಬಂಧಿಕರ ಮನೆಗಳ ಮೇಲೆ ರಾತ್ರಿ ವೇಳೆ ದಾಳಿ ನಡೆಸಿ 7 ಮಂದಿ ಕುಟುಂಬ ಸದಸ್ಯರನ್ನು ಅಪಹರಿಸಿದ್ದರು.
Advertisement