ಮಹಾನಗರ: ಸ್ಮಾರ್ಟ್‌ಸಿಟಿ ಯೋಜನೆಯಡಿ ಸ್ಮಾರ್ಟ್ ಆಗಿ ಈ ವರ್ಷ ಮಕ್ಕಳನ್ನು ಸ್ವಾಗತಿಸಬೇಕಿದ್ದ 13 ಶಾಲೆಗಳ ಪೈಕಿ 11 ಶಾಲೆಗಳಿಗೆ ಕೊರೊನಾ ಲಾಕ್‌ಡೌನ್ ಅಡ್ಡಿಯಾಗಿದೆ. 2 ಶಾಲೆಗಳಷ್ಟೇ ಸ್ಮಾರ್ಟ್ ಆಗಿ ಮೇಲ್ದರ್ಜೆಗೇರಿದ್ದು, 11 ಶಾಲೆಗಳ ಕಾಮಗಾರಿ ಮುಂದಿನ ಮಾರ್ಚ್‌ವರೆಗೂ ಪೂರ್ಣಗೊಳ್ಳುವುದು ಅನುಮಾನ.
ಸ್ಮಾರ್ಟ್ ಸಿಟಿ ಯೋಜನೆಗೆ ಆಯ್ಕೆಯಾದ ಪಾಲಿಕೆಯ ಎಂಟು ವಾರ್ಡ್‌ಗಳ 13 ಶಾಲೆಗಳು ಇ-ಸ್ಮಾರ್ಟ್ ಶಾಲೆಗಳಾಗಿ ಮೇಲ್ದ ರ್ಜೆಗೇರುವ ಸಂಬಂಧ ಕಳೆದ ಡಿಸೆಂಬರ್‌ನಲ್ಲಿಯೇ ಪ್ರಕ್ರಿಯೆಗಳು ನಡೆದಿತ್ತು. 11 ಕೋಟಿ ರೂ. ವೆಚ್ಚದಲ್ಲಿ ಈ ಶಾಲೆಗಳಿಗೆ ಅಗತ್ಯ ಮೂಲಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ತಯಾರಿಗಳು ನಡೆದಿತ್ತು. ಆದರೆ ಮಾರ್ಚ್ ಅಂತ್ಯದ ವೇಳೆಗೆ ಲಾಕ್‌ಡೌನ್‌ನಿಂದಾಗಿ ಕಾಮಗಾರಿ ಸ್ಥಗಿತಗೊಂಡಿದ್ದು, ಒಂದೆರಡು ತಿಂಗಳಗಳಿಂದಷ್ಟೇ ಕಾಮಗಾರಿ ಪುನರಾರಂಭವಾಗಿದೆ.
ಸರಕಾರಿ ಶಾಲೆಗಳಿಗೆ ಮಕ್ಕಳನ್ನು ಆಕರ್ಷಿಸುವ ನಿಟ್ಟಿನಲ್ಲಿ ಶಾಲೆಗಳನ್ನು ಮೇಲ್ದರ್ಜೆಗೇರಿಸಿ, ಅವಶ್ಯ ಮೂಲ ಸೌಲಭ್ಯ ಗಳನ್ನು ಕಲ್ಪಿಸಿಕೊಡುವುದು ಈ ಯೋಜನೆಯ ಉದ್ದೇಶ. ಆದರೆ ಇದೀಗ ನೀರೇಶ್ವಾಲ್ಯ ಮತ್ತು ಪಾಂಡೇಶ್ವರ ಸರಕಾರಿ ಶಾಲೆಗಳು ಹೊಸತನದೊಂದಿಗೆ ಕಂಗೊಳಿಸುತ್ತಿವೆ. ಈ ಎರಡು ಶಾಲೆಗಳ ಅಭಿವೃದ್ಧಿ ಕಾಮಗಾರಿಗೆ 6 ಕೋಟಿ ರೂ. ವೆಚ್ಚ ಮಾಡಲಾಗಿದೆ.
ಸ.ಹಿ.ಪ್ರಾ. ಶಾಲೆ ಬಸ್ತಿಗಾರ್ಡನ್, ಸ.ಹಿ.ಪ್ರಾ. ಶಾಲೆ ಹೊಗೆಬಜಾರ್, ಸ.ಪ್ರೌ. ಶಾಲೆ ಹೊಗೆಬಜಾರ್, ಸ.ಹಿ.ಪ್ರಾ. ಶಾಲೆ ಬಂದರು (ಉರ್ದು) ಮತ್ತು ಸ.ಪ್ರೌ.ಶಾಲೆ ಬಂದರು-ಉರ್ದು, ಸ.ಹಿ.ಪ್ರಾ. ಶಾಲೆ ಬಲ್ಮಠ, ಸ.ಪ್ರೌ. ಶಾಲೆ, ಸ. ಪ.ಪೂ. ಕಾಲೇಜು ಬಲ್ಮಠ, ಸ.ಹಿ.ಪ್ರಾ. ಶಾಲೆ ಕನ್ನಡ ಬೋಳಾರ, ಸ.ಹಿ.ಪ್ರಾ. ಶಾಲೆ ಪಶ್ಚಿಮ ಉರ್ದು ಬೋಳಾರ, ಸರಕಾರಿ ಅಭ್ಯಾಸಿ ಪ್ರೌಢಶಾಲೆ ಹಂಪನಕಟ್ಟೆ, ಸರಕಾರಿ ಪ್ರೌಢಶಾಲೆ ರಥಬೀದಿ ಶಾಲೆಗಳು ಮೇಲ್ದರ್ಜೆಗೇರಲು ಬಾಕಿ ಇವೆ.
ಶಾಲೆಯ ಕಟ್ಟಡ ದುರಸ್ತಿ, ಛಾವಣಿ ಹಾಕುವುದು/ ನೆಲ ಹಾಸುವುದು, ಕಾಂಪೌಂಡ್ ನಿರ್ಮಾಣ, ಶೌಚಾಲಯ ದುರಸ್ತಿ ಹಾಗೂ ನಿರ್ಮಾಣ, ಪ್ಲಂಬಿಂಗ್ ಕೆಲಸ, ವಿದ್ಯುತ್ಛಕ್ತಿ ಹಾಗೂ ಕ್ರೀಡಾ ಸೌಲಭ್ಯ ಒದಗಿಸಲಾಗುವುದು. ಈಗಾಗಲೇ ಪೂರ್ಣಗೊಂಡಿರುವ ಎರಡು ಶಾಲೆಗಳ ವರಾಂಡದಲ್ಲಿ ಟೈಲ್ಸ್ ಅಳವಡಿಸಲಾಗಿದೆ.
ಮಾರ್ಚ್ ಒಳಗೆ ಪೂರ್ಣ
ನಗರದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ 11 ಕೋಟಿ ರೂ. ವೆಚ್ಚದಲ್ಲಿ 13 ಇ-ಸ್ಮಾರ್ಟ್ ಶಾಲೆಗಳ ನಿರ್ಮಾಣವಾಗಲಿದ್ದು, ಎರಡು ಶಾಲೆಗಳ ಕಾಮಗಾರಿ ಪೂರ್ಣಗೊಂಡಿವೆ. 11 ಶಾಲೆಗಳ ಕಾಮಗಾರಿ ಪ್ರಗತಿಯಲ್ಲಿದೆ. ಮುಂದಿನ ಮಾರ್ಚ್ ಒಳಗೆ ಎಲ್ಲ 13 ಶಾಲೆಗಳು ಸ್ಮಾರ್ಟ್ ಆಗಲಿವೆ.
-ಮಹಮ್ಮದ್ ನಝೀರ್, ಸ್ಮಾರ್ಟ್ ಸಿಟಿ ನಿರ್ದೇಶಕ