Advertisement

ಉಡುಪಿ ಜಿಲ್ಲೆಯಲ್ಲಿ 11 ಕಾಲರಾ ಪ್ರಕರಣ ಪತ್ತೆ… ಎಚ್ಚರಿಕೆ ವಹಿಸುವಂತೆ ಡಿಸಿ ಸೂಚನೆ

08:12 PM Sep 18, 2024 | Team Udayavani |

ಉಡುಪಿ: ಜಿಲ್ಲೆಯ ಕೆಲವು ಭಾಗಗಳಲ್ಲಿ ಕಾಲರಾ ಪ್ರಕರಣ ಕಂಡುಬಂದಿದ್ದು, ಒಟ್ಟು 11 ಕಾಲರ ಪ್ರಕರಣ ವರದಿಯಾಗಿದೆ. ಸಾರ್ವಜನಿಕರು ಈ ಬಗ್ಗೆ ಎಚ್ಚರದಿಂದ ಇದ್ದು, ಸ್ವತ್ಛತೆಗೆ ಆದ್ಯತೆ ನೀಡುವ ಮೂಲಕ ಕಾಲರಾ ರೋಗದಿಂದ ದೂರವಿರಲು ಸಾಧ್ಯ ಎಂದು ಜಿಲ್ಲಾಧಿಕಾರಿ ಡಾ| ಕೆ.ವಿದ್ಯಾಕುಮಾರಿ ಹೇಳಿದರು.

Advertisement

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಕಣ್ಗಾವಲು ಸಮಿತಿ ಸಭೆ ಹಾಗೂ ಡೆಂಗ್ಯೂ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಕಾರ್ಕಳದ ಈದು ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ 5 ಪ್ರಕರಣಗಳು ಕಂಡುಬಂದಿದ್ದು, ಮಲ್ಪೆ, ಶಿರ್ವ, ಕಾಪು, ಕೆಮ್ಮಣ್ಣು ವಾಂತಿ ಬೇಧಿ ಪ್ರಕರಣಗಳು ಕಂಡುಬಂದು ಕಾಲರಾ ರೋಗ ಎಂದು ವರದಿ ಬಂದಿದೆ. ಸಾರ್ವಜನಿಕರು ಕಾಲರಾ ರೋಗದ ಬಗ್ಗೆ ಮುಂಜಾಗೃತೆ ವಹಿಸಬೇಕು ಎಂದರು.

ಹೋಟೆಲ್‌, ರೇಸ್ಟೂರೆಂಟ್‌ನಲ್ಲಿ ಜನರಿಗೆ ಕುಡಿಯಲು ಬಿಸಿ ನೀರನ್ನು ನೀಡಬೇಕು. ಹೋಟೆಲ್‌ಗ‌ಳಲ್ಲಿ ಬಳಸುವ ಲೋಟ, ತಟ್ಟೆ ಹಾಗೂ ಪಾತ್ರೆಗಳನ್ನು ಸಹ ಬಿಸಿ ನೀರಿನಲ್ಲಿ ತೊಳೆಯಬೇಕು. ಯಾವುದೇ ಸಮುದ್ರದ ಉತ್ಪನ್ನಗಳನ್ನು ಮುಟ್ಟಿದಾಗ ಸರಿಯಾಗಿ ಕೈತೊಳೆದು ಆಹಾರ ಪದಾರ್ಥ ಮುಟ್ಟುವುದು ಸೂಕ್ತ ಎಂದರು.
ಸಾರ್ವಜನಿಕರು ರಸ್ತೆ ಬದಿಯಲ್ಲಿ ಮಾರಾಟ ಮಾಡುವ ತಿನಿಸು, ತಳ್ಳು ಗಾಡಿಯಲ್ಲಿ ಮಾರಾಟ ಮಾಡುವ ಆಹಾರ ಹಾಗೂ ಹಣ್ಣುಗಳನ್ನು ಸೇವಿಸಬಾರದು.

ಶಾಲಾ-ಕಾಲೇಜು ಹಾಗೂ ಅಂಗನವಾಡಿಗಳಲ್ಲಿ ಮಕ್ಕಳು ಕೈಗಳನ್ನು ಸ್ವತ್ಛವಾಗಿ ತೊಳೆದು ಆಹಾರ ಉತ್ಪನ್ನ ಬಳಸುವ ಬಗ್ಗೆ ಅರಿವು ಮೂಡಿಸಬೇಕು ಎಂದರು.
ಕಳೆದ ಸೆ.14 ರಿಂದ ಅ.2 ರವರೆಗೆ ಸ್ವಚ್ಚತಾ ಸೇವಾ ಅಭಿಯಾನವನ್ನು ಅಂದೋಲನದ ರೀತಿಯಲ್ಲಿ ನಡೆಸಲಾಗುತ್ತಿದೆ. ಸಾರ್ವಜನಿಕರು ತಮ್ಮ ಮನೆಯ ಸುತ್ತ ಮುತ್ತಲಿನ ಪರಿಸರವನ್ನು ಸ್ವತ್ಛವಾಗಿ ಇಟ್ಟುಕೊಳ್ಳಬೇಕು. ಸ್ಥಳೀಯ ಸಂಸ್ಥೆಗಳು ಸಾರ್ವಜನಿಕ ಸ್ಥಳಗಳು ಬಸ್‌ ನಿಲ್ದಾಣ ರೈಲ್ವೆ ನಿಲ್ದಾಣ, ಸಾರ್ವಜನಿಕ ಶೌಚಾಲಯಗಳಲ್ಲಿ ನೈರ್ಮಲ್ಯವನ್ನು ಕಾಪಾಡಲು ಹೆಚ್ಚಿನ ಆದ್ಯತೆ ವಹಿಸಬೇಕು ಎಂದು ಸೂಚನೆ ನೀಡಿದರು. ಎಂಐಟಿ ವತಿಯಿಂದ ಗರ್ಭಿಣಿ ಮಹಿಳೆಯರ ಆರೋಗ್ಯ ಸುಧಾರಣೆ ಕುರಿತು ಮಾಹಿತಿಗಳನ್ನು ಕ್ರೋಢಿಕರಿಸುವ ಜನನಿ ಆ್ಯಪ್‌ನ್ನು ಸೃಜನಿಸಿದ್ದು ಇದರ ಪ್ರಾತ್ಯಕ್ಷಿಕೆ ಸಭೆಯಲ್ಲಿ ಪ್ರದರ್ಶಿಸಿ ಸಾಧಕ ಭಾದಕ ಚರ್ಚಿಸಲಾಯಿತು.

ಜಿ. ಪಂ. ಸಿಇಒ ಪ್ರತೀಕ್‌ ಬಾಯಲ್‌, ಎಂಐಟಿ ನಿರ್ದೇಶಕ ಡಾ| ಅನಿಲ್‌ ರಾಣಾ, ಎಂಐಟಿ ಉಪನಿರ್ದೇಶಕ ಸೋಮಶೇಖರ ಭಟ್‌, ಡಿಎಚ್‌ಒ ಡಾ| ಐ.ಪಿ ಗಡಾದ್‌, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ| ನಾಗರತ್ನ, ಮಲೇರಿಯಾ ನಿಯಂತ್ರಣಾಧಿಕಾರಿ ಡಾ| ಪ್ರಶಾಂತ್‌ ಭಟ್‌, ಪೌರಾಯುಕ್ತ ರಾಯಪ್ಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಶ್ಯಾಮಲಾ ಸಿ.ಕೆ. ತಾಲೂಕು ಆರೋಗ್ಯಾಧಿಕಾರಿಗಳು ಉಪಸ್ಥಿತರಿದ್ದರು.

Advertisement

 ರೋಗ ಲಕ್ಷಣ ಕಂಡುಬಂದಲ್ಲಿ ವೈದ್ಯರನ್ನು ಸಂಪರ್ಕಿಸಿ
ಕಾಲರಾ ಸೋಂಕುಕಾರಕ ತೀವ್ರತರವಾದ ನೀರಿನಿಂದ ಕೂಡಿದ ಅತೀಸಾರ ನಿರ್ಜಲೀಕರಣಕ್ಕೆ ಕಾರಣವಾಗಬಹುದು. ವಿಬ್ರಿಯೊ ಕಾಲರಾ ಎಂಬ ಬ್ಯಾಕ್ಟಿರೀಯದಿಂದ ಕಲುಷಿತ ಆಹಾರ ತಿನ್ನುವುದರಿಂದ ಹರಡುತ್ತದೆ. ಸ್ವತ್ಛತೆಗೆ ಆದ್ಯತೆ ಕಡಿಮೆ ಇರುವ ಸ್ಥಳಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವುತ್ತದೆ. ಸೋಂಕು ಇರುವ ಆಹಾರ ಅಥವಾ ನೀರಿನ ಸೇವನೆಯಿಂದ ಬ್ಯಾಕ್ಟಿರೀಯಾ ದೇಹ ಪ್ರವೇಶಿಸುತ್ತದೆ. ಮನೆಗೆ ತರುವ ಎಲ್ಲ ರೀತಿಯ ತರಕಾರಿ ಹಣ್ಣು ಹಾಗೂ ಸಮುದ್ರ ಉತ್ಪನ್ನಗಳನ್ನು ಚೆನ್ನಾಗಿ ನೀರಿನಿಂದ ತೊಳೆದು ಸ್ವತ್ಛಗೊಳಿಸಿ ಬಳಸಬೇಕು. ತೀವ್ರ ಅತಿಸಾರ ವಾಂತಿ ಹಾಗೂ ನಿರ್ಜಲೀಕರಣ ರೋಗ ಲಕ್ಷಣಗಳು ಕಂಡುಬಂದರೆ ಕೂಡಲೇ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯಬೇಕು ಎಂದು ಡಿಸಿ ತಿಳಿಸಿದ್ದಾರೆ.

ಇದನ್ನೂ ಓದಿ: Udupi: ಮದ್ಯದ ನಶೆಯಲ್ಲಿ ವ್ಯಕ್ತಿ; ಅಸಹಾಯಕ ಮಗುವಿನ ರಕ್ಷಣೆ

Advertisement

Udayavani is now on Telegram. Click here to join our channel and stay updated with the latest news.

Next