ವಿಜಯವಾಡ: ಅಚ್ಚರಿಯ ಬೆಳವಣಿಗೆಯೆಂಬಂತೆ, ಮುಖ್ಯಮಂತ್ರಿ ಜಗನ್‌ಮೋಹನ್ ರೆಡ್ಡಿ ವಿರುದ್ಧ ಸ್ವತಃ ಆಂಧ್ರಪ್ರದೇಶದ ಹೈಕೋರ್ಟ್ ಬರೋಬ್ಬರಿ 11 ಸ್ವಯಂಪ್ರೇರಿತ ಪ್ರಕರಣಗಳನ್ನು ದಾಖಲಿಸಿಕೊಂಡಿದೆ.
ಜಗನ್ ಅವರು ಪ್ರತಿಪಕ್ಷದಲ್ಲಿದ್ದಾಗ ನೀಡಿದ್ದ ಕೆಲವೊಂದು ಹೇಳಿಕೆಗಳಿಗೆ ಸಂಬಂಧಿಸಿ 11 ಪ್ರಕರಣಗಳು ದಾಖಲಾಗಿದ್ದರೂ, ಕೆಳಹಂತದ ನ್ಯಾಯಾಲಯಗಳು ಆ ಕೇಸುಗಳನ್ನು ಸಮಾಪ್ತಿಗೊಳಿಸಿದ್ದವು. ಈಗ ಹೈಕೋರ್ಟ್ ಸ್ವಯಂಪ್ರೇರಿತವಾಗಿ ಆ ಎಲ್ಲ ಪ್ರಕರಣಗಳ ಮರು ವಿಚಾರಣೆ ಆರಂಭಿಸಿದೆ.
ಹೈಕೋರ್ಟ್‌ನ ಆಡಳಿತಾತ್ಮಕ ಸಮಿತಿಯ ಶಿಫಾರಸಿನ ಮೇರೆಗೆ ಉಚ್ಚ ನ್ಯಾಯಾಲಯವು ಈ ನಿರ್ಧಾರ ಕೈಗೊಂಡಿದೆ. ಆದರೆ, ಅಡ್ವೊಕೇಟ್ ಜನರಲ್ ಸುಬ್ರಮಣ್ಯಂ ಶ್ರೀರಾಂ ಅವರ ತೀವ್ರ ಆಕ್ಷೇಪದ ಹಿನ್ನೆಲೆಯಲ್ಲಿ, ಪೊಲೀಸರು, ಸಿಎಂ ಜಗನ್ ರೆಡ್ಡಿ ಮತ್ತು ಇತರರಿಗೆ ನೋಟಿಸ್ ಜಾರಿ ಮಾಡಲು ನ್ಯಾ. ಕಣ್ಣೇಗಂಟಿ ಲಲಿತಾ ಹಿಂದೇಟು ಹಾಕಿದ್ದಾರೆ. ಹೈಕೋರ್ಟ್ ತನ್ನ ಅಧಿಕಾರವನ್ನು ಬಳಸಿಕೊಂಡು “ಆಡಳಿತಾತ್ಮಕ’ ಸ್ವಯಂಪ್ರೇರಿತ ಕ್ರಮ ಕೈಗೊಳ್ಳುವಂತಿಲ್ಲ ಎಂದು ಶ್ರೀರಾಂ ವಾದಿಸಿದ್ದಾರೆ.
2016ರಲ್ಲಿ ಜಗನ್ ಅವರು ಅಂದಿನ ಸಿಎಂ, ಟಿಡಿಪಿ ಮುಖ್ಯಸ್ಥ ಎನ್.ಚಂದ್ರಬಾಬು ನಾಯ್ಡು ವಿರುದ್ಧ ಹಾಗೂ ಅಮರಾವತಿ ಭೂ ಹಗರಣ ಸಂಬಂಧ ವಿವಾದಾತ್ಮಕ ಹೇಳಿಕೆ ನೀಡಿದ್ದರು.