Advertisement

ಫೆ.6ಕ್ಕೆ 10ನೇ ತಾಲೂಕು ಸಮ್ಮೇಳನ

01:18 PM Jan 07, 2018 | |

ದೊಡ್ಡಬಳ್ಳಾಪುರ: ತಾಲೂಕು 10ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ತಾಲೂಕಿನ ದೊಡ್ಡಬೆಳವಂಗಲದಲ್ಲಿ ಫೆಬ್ರವರಿ 6 ರಂದು ನಡೆಸಲಾಗುತ್ತಿದ್ದು, ತಾಲೂಕಿನ ಎಲ್ಲ ಸಂಘಟನೆಗಳ ಸಹಕಾರ ಅಗತ್ಯವಾಗಿದೆ ಎಂದು ಶಾಸಕ ಟಿ.ವೆಂಕಟರಮಣಯ್ಯ ಹೇಳಿದರು. ನಗರದ ಉಪವಿಭಾಗಾಧಿಕಾರಿಗಳ ಕಚೇರಿಯಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ ವತಿಯಿಂದ ನಡೆದ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

Advertisement

ಸಂಘಟನೆಗಳ ಮುಖಂಡರು ಸಹಕರಿಸಿ: ಸಮ್ಮೇಳನ ನಡೆಸಲು ಅಗತ್ಯ ಇರುವ ಸಮಿತಿಗಳನ್ನು ರಚಿಸಿ ಅದ್ಧೂರಿಯಾಗಿ ನಡೆಸಲು ಸಿದ್ಧತೆ ನಡೆಸಲಾಗುವುದು. ತಾಲೂಕಿನ ಎಲ್ಲ ಕನ್ನಡಪರ, ದಲಿತಪರ, ರೈತರಪರ ಹಾಗೂ ಕಾರ್ಮಿಕಪರ ಸಂಘಟನೆಗಳು ಸಹಕಾರ ನೀಡಿ ಸಮ್ಮೇಳನ ಅರ್ಥಪೂರ್ಣವಾಗಿ ನಡೆಸಲು ಸಹಕರಿಸ ಬೇಕು ಎಂದು ಮನವಿ ಮಾಡಿದರು. 

ಮಹಿಳಾ ಅಧ್ಯಕ್ಷರನ್ನು ಆಯ್ಕೆ ಮಾಡಿ: ಕನ್ನಡ ಪಕ್ಷದ ತಾಲೂಕು ಅಧ್ಯಕ್ಷ ಸಂಜೀವ್‌ನಾಯಕ್‌ ಮಾತನಾಡಿ, ತಾಲೂಕಿನ ಗಡಿಭಾಗದ ಹೋಬಳಿಯಾಗಿರುವ ಸಾಸಲು ಹೋಬಳಿಯಲ್ಲಿ ಇದುವರೆಗೂ ಯಾವುದೇ ಸಾಹಿತ್ಯ ಸಮ್ಮೇಳನ ನಡೆದಿಲ್ಲ. ಈ ಬಾರಿ ಸಾಸಲು ಹೋಬಳಿಯಲ್ಲಿ ಸಮ್ಮೇಳನ ನಡೆಯುವಂತಾಗಬೇಕು. ಸಾಹಿತ್ಯ ಪರಿಷತ್‌
ತಾಲೂಕು ಘಟಕಕ್ಕೆ ಮಹಿಳಾ ಅಧ್ಯಕ್ಷರು ಇರುವ ಈ ಸಂದರ್ಭದಲ್ಲಿ 10ನೇ ತಾಲೂಕು ಸಾಹಿತ್ಯ ಸಮ್ಮೇಳನಕ್ಕೂ ಮಹಿಳೆಯರನ್ನೇ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಬೇಕು. ತಾಲೂಕಿನ ವಿವಿಧ ಕನ್ನಡಪರ ಸಂಘಟನೆ, ಪ್ರಗತಿಪರ ಸಂಘಟನೆಗಳಲ್ಲಿ, ಮಹಿಳಾ ಪರವಾದ ಹೋರಾಟಗಳಲ್ಲಿ ಸಕ್ರಿಯವಾಗಿರುವ ಲೇಖಕಿ ಕೆ.ಎಸ್‌.ಪ್ರಭಾ ಅವರನ್ನು ಸಮ್ಮೇಳನ ಅಧ್ಯಕ್ಷರನ್ನಾಗಿ ಆಯ್ಕೆಮಾಡಬೇಕು ಎಂದು ಸಲಹೆ ನೀಡಿದರು. 

ಅಧ್ಯಕ್ಷರ ಆಯ್ಕೆಯಲ್ಲಿ ಎಲ್ಲರ ಸಹಮತ ಅಗತ್ಯ: ಸಭೆಗೆ ಮಾಹಿತಿ ನೀಡಿದ ಕನ್ನಡ ಸಾಹಿತ್ಯ ಪರಿಷತ್‌ ತಾಲೂಕು ಘಟಕದ ಅಧ್ಯಕ್ಷೆ ಪ್ರಮೀಳಾ, ನಾಡೋಜ ಹಾಗೂ ಸಾವಯವ ಕೃಷಿಕ ಡಾ.ಎಲ್‌.ನಾರಾಯಣರೆಡ್ಡಿ, ಕವಯಿತ್ರಿ ಡಾ.ಎಚ್‌.ಎಲ್‌.ಪುಷ್ಪ ಸಂಭಾವ್ಯ ರಾಗಿದ್ದು, ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆ ಮಾಡಬಹುದಾಗಿದೆ. ಸಮ್ಮೇಳನದ ಅಧ್ಯಕ್ಷರ ಆಯ್ಕೆಯಲ್ಲಿ ಎಲ್ಲರ ಸಹಮತ ಅಗತ್ಯ. ಸಮ್ಮೇಳನ ಅದ್ಧೂªರಿಯಾಗಿ ನಡೆಯಲು ಕ್ಷೇತ್ರದ ಶಾಸಕರು ಹಾಗೂ ಎಲ್ಲ ಸಂಘಟನೆಗಳ ಮುಖಂಡರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಅವ್ಯವಸ್ಥೆ ಮರುಕಳಿಸದಂತೆ ಎಚ್ಚರವಹಿಸಿ: ಕನ್ನಡಪರ ಹೋರಾಟಗಾರ ಪರಮೇಶ್‌ ಮಾತನಾಡಿ, ಸಾಹಿತ್ಯ ಸಮ್ಮೇಳನದಲ್ಲಿ ತಾಲೂಕಿನ ಎಲ್ಲ ಸರ್ಕಾರಿ ಇಲಾಖೆಗಳ ಮುಖ್ಯ ಅಧಿಕಾರಿಗಳು ಕಡ್ಡಾಯವಾಗಿ ಭಾಗವಹಿಸುವಂತೆ ಶಾಸಕರು ಕಟ್ಟುನಿಟ್ಟಿನ ಆದೇಶ ನೀಡಬೇಕು. ಸಮ್ಮೇಳನದ ಅಧ್ಯಕ್ಷರ ಮೆರವಣಿಗೆಯಲ್ಲಿ ಕಲಾ ತಂಡಗಳು ಸೇರಿದಂತೆ ಎಲ್ಲರೂ ಸಕ್ರಿಯವಾಗಿ ಭಾಗವಹಿಸಬೇಕು. ಕಳೆದ ಬಾರಿ ಕನಸವಾಡಿಯಲ್ಲಿ ನಡೆದ ತಾಲೂಕು ಸಮ್ಮೇಳನ ಸಂದರ್ಭದಲ್ಲಿ ಅಧ್ಯಕ್ಷರ ಮೆರವಣಿಗೆ ವೇಳೆ ನಡೆದ ಅವ್ಯವಸ್ಥೆ ಮರುಕಳಿಸದಂತೆ ಎಚ್ಚರವಹಿಸಬೇಕು ಎಂದು ತಿಳಿಸಿದರು.

Advertisement

ಲೇಖಕರ ಕಿರುಪರಿಚಯ ಮಾಡಿ: ರಾಜ್ಯ ವಿಜ್ಞಾನ ಪರಿಷತ್‌ ಉಪಾಧ್ಯಕ್ಷ ಡಾ.ಹುಲಿಕಲ್‌ ನಟರಾಜ್‌ ಮಾತನಾಡಿ, ರಾಜ್ಯ ಸರ್ಕಾರ ಬಂಗಾರದ ಎಲೆಗಳ ಪುಸ್ತಕ ಪ್ರಕಟಿಸುವ ಮೂಲಕ ಜಿಲ್ಲೆಯಲ್ಲಿ ಬರಹಗಾರರನ್ನು ಪರಿಚಯಿಸಲು ಮುಂದಾಗಿದೆ. ಇದಕ್ಕಾಗಿ ಈಗಾಗಲೇ ಸಿದ್ಧತೆಗಳು ನಡೆಯುತ್ತಿವೆ. ತಾಲೂಕಿನಲ್ಲಿ ಕನಿಷ್ಠ ಎರಡು ಕೃತಿಗಳನ್ನು
ಪ್ರಕಟಿಸಿರುವ ಲೇಖಕರ ಕಿರುಪರಿಚಯವನ್ನು ಒಳಗೊಂಡ ಮಾಹಿತಿಯನ್ನು ನೀಡುವಂತೆ ತಿಳಿಸಿದರು.

ಸಭೆಯಲ್ಲಿ ನಗರಸಭೆ ಅಧ್ಯಕ್ಷ ತ.ನ.ಪ್ರಭುದೇವ್‌, ಉಪಾಧ್ಯಕ್ಷೆ ಜಯಲಕ್ಷ್ಮೀ, ತಾಪಂ ಅಧ್ಯಕ್ಷ ಎಚ್‌. ವಿ.ಶ್ರೀವತ್ಸ, ಗ್ರೇಡ್‌-2 ತಹಶೀಲ್ದಾರ್‌ ರಾಮಲಿಂಗಯ್ಯ ಸೇರಿದಂತೆ ವಿವಿಧ ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next