Advertisement
ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವರಾಗಿರುವ ಸುರೇಶ್ ಕುಮಾರ್ ಉಸ್ತುವಾರಿ ಹೊಣೆ ಹೊತ್ತಿರುವ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಪಚ್ಚೆದೊಡ್ಡಿ ಗ್ರಾಮದಲ್ಲಿ ಕಂಡು ಬರುವ ದಾರುಣ ದೃಶ್ಯಗಳು ಇವು. ಆಧುಕಿನ ಯುಗದಲ್ಲಿ ಇಂತಹ ಪರಿಸ್ಥಿತಿ ಇರುವುದು ಶೋಚನೀಯ.
Related Articles
Advertisement
ಇನ್ನು ಸಂಜೆ ಮನೆಗೆ ಹಿಂದಿರುಗುವಾಗಲು 5 ಕಿ.ಮೀ ನಡೆದುಕೊಂಡೇ ಹೋಗಬೇಕಾದ ಪರಿಸ್ಥಿತಿಯಿದೆ. ಹೀಗಿರುವಾಗ ವಿದ್ಯಾರ್ಥಿಗಳು ಹೆಚ್ಚಿನ ಪ್ರಮಾಣದಲ್ಲಿ ಆಯಾಸಪಡುವಂತಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಇನ್ನುಳಿದ ಸಮಯವನ್ನು ಓದಲು ಮೀಸಲಿಡಬೇಕಾಗಿದೆ. ಈ ಯಾತನ ತಾಳಲಾದರೇ ಕೆಲವರು ಶಿಕ್ಷಣವನ್ನೇ ಮೊಟುಕುಗೊಳಿಸಿದ್ದಾರೆ.
ಸಂಜೆ ಕಾಡುಪ್ರಾಣಿಗಳ ಕಾಟ: ಪಚ್ಚೆದೊಡ್ಡಿ ಅರಣ್ಯದಂಚಿನ ಗ್ರಾಮವಾಗಿದ್ದು, ಈ ಮಾರ್ಗದಲ್ಲಿ ಕಾಡಾನೆ, ಕಾಡುಹಂದಿಯಂತಹ ಪ್ರಾಣಿಗಳು ಹೆಚ್ಚಾಗಿ ಓಡಾಡುತ್ತಲೇ ಇರುತ್ತವೆ. ಅಲ್ಲದೇ ಸಂಜೆ ವೇಳೆ ಕಾಡಾನೆಗಳು ರಸ್ತೆಯ ಬದಿಯಲ್ಲಿಯೇ ಓಡಾಡುತ್ತಿದ್ದು, ಒಮ್ಮೆ ರೈತನೋರ್ವನನ್ನು ಸಂಜೆ 6 ಗಂಟೆ ವೇಳೆಗೆ ದಾಳಿ ನಡೆಸಿ ಕೊಂದಿರುವ ನಿದರ್ಶನಗಳು ಕೂಡ ಇವೆ.
ಇಂತಹ ರಸ್ತೆಯಲ್ಲಿ ವಿದ್ಯಾರ್ಥಿಗಳು ಸಂಜೆ ಮನೆಗಳಿಗೆ ಹಿಂದಿರುಗುವಾಗ ಪ್ರಾಣಭಯದಿಂದಲೇ ಸಂಚರಿಸಬೇಕಾದಂತಹ ಪರಿಸ್ಥಿತಿಯಿದೆ. ಅಲ್ಲದೇ ಕಾಡುಹಂದಿಗಳು ಈ ರಸ್ತೆಯಲ್ಲಿ ಹಿಂಡು ಹಿಂಡಾಗಿ ಸಂಚರಿಸುವುದು ಸಾಮಾನ್ಯವಾಗಿದ್ದು, ವಿದ್ಯಾರ್ಥಿಗಳು ಭಯಭೀತರಾಗಿದ್ದಾರೆ. ಕೈಯಲ್ಲಿ ಪ್ರಾಣವನ್ನಿಟ್ಟುಕೊಂಡು ಕಡಿದಾದ ರಸ್ತೆಯಲ್ಲೇ ಶಾಲೆ ಹಾಗೂ ಮನೆಯನ್ನು ತಲುಪಬೇಕಾಗಿದೆ.
ಕಲ್ಲು-ಮುಳ್ಳುಗಳ ಹಾದಿ: ಇನ್ನು ಪಚ್ಚೆದೊಡ್ಡಿ ಅಜ್ಜೀಪುರ ಮಾರ್ಗದ ರಸ್ತೆಯು ತೀರಾ ಹದಗೆಟ್ಟಿದ್ದು, ಕಲ್ಲು-ಮುಳ್ಳುಗಳಿಂದ ಕೂಡಿರುವ ಕಡಿದಾದ ಹಾದಿಯಾಗಿದೆ. ಈ ಗ್ರಾಮವು ಅರಣ್ಯ ವ್ಯಾಪಿಗೆ ಒಳಪಟ್ಟಿರುವುದರಿಂದ ಸುಸಜ್ಜಿತ ಡಾಂಬರು ರಸ್ತೆಯನ್ನೂ ಸಹ ನಿರ್ಮಾಣ ಮಾಡಲು ಸಾಧ್ಯವಾಗಿಲ್ಲ. ಇನ್ನು ಈ ಮಾರ್ಗದಲ್ಲಿ ನಿರ್ಮಿಸಿರುವ ಮಣ್ಣಿನ ರಸ್ತೆಯಲ್ಲಿ ಅಲ್ಲಲ್ಲಿ ಗುಂಡಿ ಬಿದ್ದಿದ್ದು, ಕಲ್ಲಿನ ರಾಶಿ ಬಿದ್ದಿವೆ. ಇದರಿಂದ ವಿದ್ಯಾರ್ಥಿಗಳು ಕಲ್ಲು ಮುಳ್ಳುನ ಹಾದಿಯಲ್ಲಿಯೇ ನಡೆದು ಸಾಗಬೇಕಾದ ಪರಿಸ್ಥಿತಿಯಿದೆ.
ನಿತ್ಯ 10 ಕಿ.ಮೀ. ಸಂಚಾರಕ್ಕೆ 3 ಗಂಟೆ ಬೇಕು: ಪಚ್ಚೆದೊಡ್ಡಿಯಿಂದ ವಿದ್ಯಾರ್ಥಿಗಳು ಅಜ್ಜೀಪುರ ಗ್ರಾಮದ ಶಾಲೆ ತಲುಪಲು 5 ಕಿ.ಮಿ. ಬೇಕಾಗುತ್ತದೆ. ಹೋಗಿ ಬರಲು ಸೇರಿ 10 ಕಿ.ಮೀ. ಸಂಚರಿಸಬೇಕಾಗಿದೆ. ಅದು ಕೂಡ ಕಡಿದಾದ ಹಾದಿಯಲ್ಲಿ ಸಂಚರಿಸಬೇಕಾಗಿದೆ. ಇಂತಹ ರಸ್ತೆಯಲ್ಲಿ 1 ಕಿ.ಮೀ. ಸಂಚರಿಸಲು ಕನಿಷ್ಠ 15 ನಿಮಿಷ ಬೇಕಾಗಲಿದೆ.
ಅಂದರೆ 10 ಕಿ.ಮೀ. ನಡೆಯಲು ಏನಿಲ್ಲವೆಂದರೂ 2.30 ರಿಂದ 3 ಗಂಟೆ ಸಮಯ ಹಿಡಿಯಲಿದೆ. ಕಲ್ಲು ಮುಳ್ಳುಗಳ ಹಾದಿಯಲ್ಲಿ ಓಡಾಡುವುದರಿಂದ ಭಾರೀ ಆಯಾಸ ಪಡೆಯಬೇಕಾಗುತ್ತದೆ. ಅದ ಕೂಡ ಕಾಡುಪ್ರಾಣಿಗಳ ಹಾವಳಿ ಇರುವುದರಿಂದ ಭಯಭೀತಿ ಕೂಡ ಇರುತ್ತದೆ ಎಂದು ವಿದ್ಯಾರ್ಥಿಗಳು ಅಲವತ್ತುಕೊಂಡಿದ್ದಾರೆ.
ಇದಕ್ಕೆ ಪರಿಹಾರ ಏನು?: ಪಚ್ಚೆದೊಡ್ಡಿ-ಅಜ್ಜೀಪುರ ಮಾರ್ಗವು ಕಲ್ಲು-ಮುಳ್ಳುಗಳಿಂದ ಕೂಡಿರುವ ಕಡಿದಾದ ಹಾದಿಯಾಗಿದೆ. ಈ ಗ್ರಾಮವು ಅರಣ್ಯ ವ್ಯಾಪಿಗೆ ಒಳಪಟ್ಟಿರುವುದರಿಂದ ಡಾಂಬರು ರಸ್ತೆಯನ್ನೂ ನಿರ್ಮಿಸಲು ಸಾಧ್ಯವಿಲ್ಲ ಎನ್ನಲಾಗುತ್ತದೆ. ಇದರ ಸಾಧಕ ಬಾಧಕಗಳನ್ನು ಅರಣ್ಯ ಇಲಾಖೆ ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳು ಪರಿಶೀಲಿಸಿ ಕ್ರಮ ಕೈಗೊಳ್ಳಬೇಕಾಗಿದೆ.
ಈ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲು ಸಾಕಷ್ಟು ಸಮಯಾವಕಾಶ ಬೇಕಾಗುತ್ತದೆ. ಹೀಗಾಗಿ ತುರ್ತಾಗಿ ಗ್ರಾಮ ಹಾಗೂ ಶಾಲೆಯನ್ನು ತಲುಪಲು ಒಂದು ವಾಹನ ಸೌಲಭ್ಯವನ್ನು ಕಲ್ಪಿಸಬೇಕಾಗಿದೆ. ಇದೀಗ ಪರೀಕ್ಷಾ ಸಮಯ ಆಗಿರುವುದರಿಂದ ವಿದ್ಯಾರ್ಥಿಗಳಿಗೆ ಓದಲು ಸಮಯಬೇಕಾಗಿರುವುದರಿಂದ ವಾಹನ ವ್ಯವಸ್ಥೆ ಒದಗಿಸಲು ಕ್ಷೇತ್ರದ ಶಾಸಕರು ಸೇರಿದಂತೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ತುರ್ತಾಗಿ ಗಮನ ಹರಿಸಬೇಕಾಗಿದೆ.
* ವಿನೋದ್ ಎನ್.ಗೌಡ