ಬೆಂಗಳೂರು: ಆಸ್ತಿಗಳನ್ನು ಅಡವಿಟ್ಟು ಆರ್ಥಿಕ ಅಶಿಸ್ತು ಪ್ರದರ್ಶಿಸಿದ್ದ ಬಿಬಿಎಂಪಿ, ಈಗ ಅಡಮಾನವಿರಿಸಿದ್ದ ಆಸ್ತಿಗಳನ್ನು ಋಣಮುಕ್ತಗೊಳಿಸುತ್ತಿದೆ. ತಾನು ಅಡವಿಟ್ಟಿದ್ದ 11 ಆಸ್ತಿಗಳ ಪೈಕಿ ಈಗಾಗಾಲೇ 10 ಆಸ್ತಿಗಳನ್ನು ಬಿಡಿಸಿಕೊಂಡಿರುವ ಪಾಲಿಕೆ, ಕಳೆದ ಒಂದು ವರ್ಷದಲ್ಲಿ ಆರು ಆಸ್ತಿಗಳನ್ನು ಋಣಮುಕ್ತಗೊಳಿಸಿದೆ.
ಗಂಗಾಂಬಿಕೆ ಮಲ್ಲಿಕಾರ್ಜುನ್ ಪಾಲಿಕೆಯ ಮೇಯರ್ ಆಗಿ ಒಂದು ವರ್ಷ ಪೂರೈಸುವ ಮುನ್ನವೇ ಪಾಲಿಕೆಯ ಆರು ಆಸ್ತಿಗಳನ್ನು ಸಾಲದ ಸುಳಿಯಿಂದ ಬಿಡಿಸಿದಂತಾಗಿದೆ. ಒಂದೇ ವರ್ಷದಲ್ಲಿ ಸುಮಾರು 1086 ಕೋಟಿ ಸಾಲ ಹಿಂತಿರುಗಿಸಿರುವ ಪಾಲಿಕೆ, ಮತ್ತೆ ತನ್ನ ಆಸ್ತಿಗಳನ್ನು ತಮ್ಮದಾಗಿಸಿಕೊಂಡಿದೆ. ಈ ರೀತಿ ವರ್ಷವೊಂದರಲ್ಲಿ ಅತೀ ಹೆಚ್ಚು ಸಾಲ ಮರುಪಾವತಿ ಮಾಡಿರುವುದು ಪಾಲಿಕೆ ಇತಿಹಾಸದಲ್ಲೇ ಇದೇ ಮೊದಲ ಬಾರಿ.
2015-16ನೇ ಸಾಲಿನ ಆರ್ಥಿಕ ವರ್ಷದ ಅಂತ್ಯಕ್ಕೆ 11 ಆಸ್ತಿಗಳನ್ನು ಅಡವಿಟ್ಟಿದ್ದ ಬಿಬಿಎಂಪಿ 1796.41 ಕೋಟಿ ಸಾಲವನ್ನು ಹೊಂದಿತ್ತು. ನಂತರದ ಎರಡು ವರ್ಷಗಳಲ್ಲಿ 713 ಕೋಟಿ ಮರುಪಾವತಿಸಿದ ಬಿಬಿಎಂಪಿ, ಕೆಂಪೇಗೌಡ ಮ್ಯೂಸಿಯಂ, ಮೆಯೋ ಹಾಲ್, ಜಾನ್ಸನ್ ಮಾರ್ಕೆಟ್ ಮತ್ತು ಮಲ್ಲೇಶ್ವರ ಮಾರುಕಟ್ಟೆಗಳನ್ನು ಋಣಮುಕ್ತಗೊಳಿಸಿತ್ತು.
2018ರ ಆಗಸ್ಟ್‌ನಲ್ಲಿ ಮೇಯರ್ ಆಗಿ ಆಯ್ಕೆಯಾದ ಗಂಗಾಂಬಿಕೆ, ತಮ್ಮ ಅಧಿಕಾರಾವಧಿಯಲ್ಲಿ 1086 ಕೋಟಿ ರೂ. ಸಾಲ ಮರು ಪಾವತಿ ಮಾಡಿದ್ದಾರೆ. ಆರಮಭದಲ್ಲೇ 871 ಕೋಟಿ ರೂ. ಸಾಲ ಮರುಪಾವತಿಸಿ ದಾಸಪ್ಪ ಆಸ್ಪತ್ರೆ ಕಟ್ಟಡ, ಪಬ್ಲಿಕ್ ಯುಟಿಲಿಟಿ ಕಟ್ಟಡ, ಬಿಬಿಎಂಪಿ ಕಚೇರಿ- ಪೂರ್ವ ಮತ್ತು ಕಲಾಸಿಪಾಳ್ಯ ಮಾರುಕಟ್ಟೆಯನ್ನು ಋಣಮುಕ್ತಗೊಳಿಸಿದ್ದರು.
ಇನ್ನು ಅಧಿಕಾರಾವಧಿ ಒಂದು ತಿಂಗಳು ಬಾಕಿ ಇರವಾಗ ಮತ್ತೆ 211.68 ಕೋಟಿ ಸಾಲ ಮರುಪಾವತಿಸಿ ಸ್ಲಾಟರ್ ಹೌಸ್ ಮತ್ತು ರಾಜಾಜಿನಗರ ಆಸ್ತಿಯನ್ನು ಹಿಂಪಡೆದಿದ್ದಾರೆ. ಈ ಮೂಲಕ 1796 ಕೋಟಿ ಸಾಲ ಮೊತ್ತ 463 ಕೋಟಿಗೆ ಇಳಿದಿದೆ.
ಈಗಾಗಲೇ ಪಾಲಿಕೆ ಮಾಡಿದ್ದ ಸಾಲವನ್ನು ತೀರಿಸುವ ಉದ್ದೇಶದಿಂದ, ಸರ್ಕಾರ ನೀಡುತಿದ್ದ ಅನುದಾನ ಮತ್ತು ಪಾಲಿಕೆಯ ತೆರಿಗೆ ಹಣವನ್ನು ಸರಿಯಾಗಿ ಬಳಕೆ ಮಾಡಲು ತೀರ್ಮಾನಿಯಲಾಗಿತ್ತು.
-ಎನ್.ಮಂಜುನಾಥ್ ಪ್ರಸಾದ್, ಪಾಲಿಕೆ ಆಯುಕ್ತ
ಪಾಲಿಕೆಯ ಆಸ್ತಿ ಕಾಪಾಡುವುದು ನಮ್ಮ ಕರ್ತವ್ಯವಾಗಿದ್ದು, ಆರ್ಥಿಕ ಶಿಸ್ತು ಕಾಪಾಡಲು ಯೋಜನೆ ರೂಪಿಸಲಾಗಿತ್ತು. ಅದರಂತೆ ಒಂದು ವರ್ಷದ ಅಧಿಕಾರಾವಧಿಯಲ್ಲಿ ಆರು ಆಸ್ತಿಗಳನ್ನು ಋಣಮುಕ್ತಗೊಳಿಸಲಾಗಿದೆ.
-ಗಂಗಾಂಬಿಕೆ ಮಲ್ಲಿಕಾರ್ಜುನ್, ಮೇಯರ್