Advertisement
ಸರಕಾರದ 108-ಆರೋಗ್ಯ ಕವಚ ಯೋಜನೆ ನಿರ್ವಹಿಸುತ್ತಿರುವ ಹೈದರಾಬಾದ್ ಮೂಲದ ಜಿವಿಕೆ-ಇಎಂಆರ್‌ಐ ಸಂಸ್ಥೆಯು ಕರ್ನಾಟಕದಲ್ಲಿ ಒಟ್ಟು 711 ಆ್ಯಂಬುಲೆನ್ಸ್‌ಗಳನ್ನು 108 ಸೇವೆಗೆ ಮೀಸಲಿಟ್ಟಿದೆ. ಈ ಪೈಕಿ ಕನಿಷ್ಠ 650 ಆ್ಯಂಬುಲೆನ್ಸ್‌ಗಳು (ಶೇ.90) ಸಾರ್ವಜನಿಕರ ಲಭ್ಯತೆಗೆ ಇರಬೇಕೆಂಬ ನಿಯಮವಿದೆ. ಆದರೆ 400 ಆ್ಯಂಬುಲೆನ್ಸ್‌ಗಳು ಮಾತ್ರ ಸೇವೆಯಲ್ಲಿದ್ದು, ತುರ್ತು ಅನಾರೋಗ್ಯಕ್ಕೀಡಾದ ಸಾವಿರಾರು ರೋಗಿಗಳು ಆ್ಯಂಬುಲೆನ್ಸ್ ಸಿಗದೆ ಜೀವನ್ಮರಣದ ನಡುವೆ ಹೋರಾಡುವಂತಾಗಿದೆ. ಈ ನಡುವೆ ಗುತ್ತಿಗೆ ಆಧಾರದಲ್ಲಿ 108 ಆ್ಯಂಬುಲೆನ್ಸ್‌ನಲ್ಲಿ ಕಾರ್ಯ ನಿರ್ವಹಿಸುತ್ತಿರುವ 3,500 ನೌಕರರಿಗೆ ಕಳೆದ ಮಾರ್ಚ್‌ನಿಂದ ಜೂನ್‌ವರೆಗೆ 4 ತಿಂಗಳ ವೇತನ ಸಿಗದೆ ಸಂಕಷ್ಟದಲ್ಲಿದ್ದಾರೆ.
2008ರಲ್ಲಿ 108 ಆ್ಯಂಬುಲೆನ್ಸ್ ಸೇವೆಯ ಟೆಂಡರನ್ನು 5 ವರ್ಷಗಳ ಅವಧಿಗೆ ಜಿವಿಕೆ-ಇಎಂಆರ್‌ಐ ಕಂಪೆನಿಗೆ ನೀಡಿ ಆರೋಗ್ಯ ಇಲಾಖೆಯು ಒಪ್ಪಂದ (ಎಂಒಯು) ಮಾಡಿಕೊಂಡಿತ್ತು. 2013ರಲ್ಲಿ ಟೆಂಡರ್ ಕರೆಯದೆ ಇದೇ ಕಂಪೆನಿಗೆ ಆ್ಯಂಬುಲೆನ್ಸ್ ಸೇವೆಯ ಜವಾಬ್ದಾರಿ ವಹಿಸಿ 5 ವರ್ಷಗಳ ಅವಧಿಗೆ ಟೆಂಡರ್ ವಿಸ್ತರಿಸಲಾಗಿತ್ತು. 2017ರಲ್ಲಿ ಜಿವಿಕೆ ಕಂಪೆನಿ 108 ಆ್ಯಂಬುಲೆನ್ಸ್ ಸೇವೆ ಹೆಸರಿನಲ್ಲಿ ಕೋಟ್ಯಂತರ ರೂ. ಗೋಲ್‌ಮಾಲ್ ಎಸಗಿರುವುದು ದೃಢಪಟ್ಟ ಬೆನ್ನಲ್ಲೇ ಈ ಕಂಪೆನಿ ಟೆಂಡರ್ ಪಡೆಯಲು ಅನರ್ಹ ಎಂದು ಪರಿಗಣಿಸಲಾಗಿತ್ತು. ಆದರೆ, ತಾತ್ಕಾಲಿಕವಾಗಿ ಬೇರೆ ಕಂಪೆನಿ ಟೆಂಡರ್ ಪಡೆಯುವವರೆಗೂ ಜಿವಿಕೆಯೇ ಈ ಸೇವೆ ಮುಂದುವರಿಸಿಕೊಂಡು ಹೋಗುವಂತೆ ಸರಕಾರ ಸೂಚಿಸಿತ್ತು. ಟೆಂಡರ್‌ಗೆ ಸಮಸ್ಯೆಯಾದ ಬಿಗಿ ಷರತ್ತು
2022ರ ಮಾರ್ಚ್‌ನಲ್ಲಿ 108 ಆ್ಯಂಬುಲೆನ್ಸ್ ಸೇವೆ ನಿರ್ವಹಣೆಗೆ 1,800 ಕೋಟಿ ರೂ.ಟೆಂಡರ್ ಕರೆದರೂ ಸರಕಾರ ವಿಧಿಸಿದ್ದ ಬಿಗಿ ಷರತ್ತುಗಳಿಂದಾಗಿ ಕಂಪೆನಿಗಳು ಬಿಡ್‌ಗೆ ಹಿಂದೇಟು ಹಾಕಿವೆ. ಟೆಂಡರ್‌ನಲ್ಲಿ ಭಾಗವಹಿಸುವ ಕಂಪೆನಿಗಳು ಕನಿಷ್ಠ 6 ವರ್ಷ ಆ್ಯಂಬುಲೆನ್ಸ್ ಸೇವೆ ಸಲ್ಲಿಸಿರಬೇಕು. 500 ಆ್ಯಂಬುಲೆನ್ಸ್ ನಿರ್ವಹಿಸಿದ ಅನುಭವ, ವಾರ್ಷಿಕವಾಗಿ 250 ಕೋಟಿ ರೂ. ವಹಿವಾಟು, 100 ಕೋಟಿ ರೂ. ಮುಂಗಡವಾಗಿ ನೀಡುವುದು ಎಂಬಿತ್ಯಾದಿ ಷರತ್ತುಗಳನ್ನು ಸರಕಾರ ವಿಧಿಸಿತ್ತು. ಹೀಗಾಗಿ ಬಿಡ್‌ನಲ್ಲಿ ಪಾಲ್ಗೊಂಡಿದ್ದ 4 ಕಂಪೆನಿಗಳು ಟೆಂಡರ್ ಪಡೆಯುವಲ್ಲಿ ವಿಫಲವಾಗಿತ್ತು.
Related Articles
ದುರಸ್ತಿಗಿರುವ ಆ್ಯಂಬುಲೆನ್ಸ್‌ಗಳನ್ನು ಗ್ಯಾರೇಜ್‌ಗೆ ಹಾಕಿ 10 ಸಾವಿರ ರೂ. ಬಿಲ್ ಆದರೆ ಅಧಿಕಾರಿಗಳು ನಕಲಿ ದಾಖಲೆ ಸೃಷ್ಟಿಸಿ 20 ಸಾವಿರ ರೂ. ಬಿಲ್ ತೋರಿಸಿ ಕೋಟ್ಯಂತರ ರೂ. ಅವ್ಯವಹಾರ ನಡೆಸಿರುವ ಆರೋಪವಿದೆ. ಬೆಂಗಳೂರಿನಲ್ಲಿ ಗ್ಯಾರೇಜ್‌ಗಳಿಗೆ ಆ್ಯಂಬುಲೆನ್ಸ್ ದುರಸ್ತೆಯ ಅಂದಾಜು 3 ಕೋಟಿ ರೂ. ಬಿಲ್ ಬಾಕಿ ಇದೆ. ಆದ್ದರಿಂದ ಈ ಗ್ಯಾರೇಜ್ ಮಾಲಕರು ಆ್ಯಂಬುಲೆನ್ಸ್ ದುರಸ್ತಿ ಮಾಡುವುದನ್ನು ನಿಲ್ಲಿಸಿದ ಹಿನ್ನೆಲೆಯಲ್ಲಿ ಶಿರಾ, ತುಮಕೂರು ಸಹಿತ ಬೇರೆ ಜಿಲ್ಲೆಗಳಲ್ಲಿ ಆ್ಯಂಬುಲೆನ್ಸ್‌ಗಳು ಕೆಲವು ತಿಂಗಳಿನಿಂದ ದುರಸ್ತಿಗಾಗಿ ನಿಂತಿವೆ.
Advertisement
ನೌಕರರ ಗೋಳು ಕೇಳುವವರೇ ಇಲ್ಲ108 ಆ್ಯಂಬುಲೆನ್ಸ್ ನೌಕರರಿಗೆ 4 ತಿಂಗಳ ವೇತನಕ್ಕೆ ಅಂದಾಜು 28 ಕೋಟಿ ರೂ. ಬೇಕಾಗುತ್ತದೆ. ಸರಕಾರದಿಂದ ಜಿವಿಕೆ ಕಂಪೆನಿಗೆ ಹಣ ಮಂಜೂರಾದರೂ ವೇತನ ನೀಡದೇ ನೌಕರರನ್ನು ಸತಾಯಿಸುತ್ತಿದೆ. ಈ ಸಮಸ್ಯೆ ಹಲವು ಬಾರಿ ಸರಕಾರದ ಗಮನಕ್ಕೆ ತಂದರೂ ನೌಕರರ ಗೋಳು ಕೇಳುವವರಿಲ್ಲ. ಜಿವಿಕೆ-ಇಎಂಆರ್‌ಐಗೆ 108 ಸೇವೆಯ ಜವಾಬ್ದಾರಿ ನೀಡಬಾರದು. ಈ ಕಂಪೆನಿಯು ಆರಂಭದಿಂದಲೂ ನೌಕರರಿಗೆ ವೇತನ ಬಾಕಿ ಉಳಿಸಿಕೊಂಡೇ ಬಂದಿದೆ. ಸರಕಾರ ಸಮಸ್ಯೆ ಬಗೆಹರಿಸದಿದ್ದರೆ ಮುಂದೆ ನೌಕರರು ಕರ್ತವ್ಯಕ್ಕೆ ಗೈರಾಗಿ ಹೋರಾಟ ನಡೆಸಬೇಕಾಗುತ್ತದೆ.
| ಆರ್. ಶ್ರೀಧರ್, ರಾಜ್ಯಾಧ್ಯಕ್ಷ, 108 ಆ್ಯಂಬುಲೆನ್ಸ್ ನೌಕರರ ಸಂಘ.