Advertisement

108 ಆರೋಗ್ಯ ಕವಚಕ್ಕೆ ವ್ಯಾಧಿ!

03:18 PM Jun 22, 2018 | |

„ಉದಯಕುಮಾರ ಮುಳೆ
ಬಸವಕಲ್ಯಾಣ
: ತುರ್ತು ಸಂದರ್ಭದಲ್ಲಿ ರೋಗಿಗಳ ಚಿಕಿತ್ಸೆಗೆ ನೆರವಾಗಬೇಕಿದ್ದ ಸರ್ಕಾರಿ ಆಸ್ಪತ್ರೆಗಳ ಎರಡು
108 ಆ್ಯಂಬೂಲೆನ್ಸ್‌ ವಾಹನಗಳೇ ರೋಗಗ್ರಸ್ತವಾಗಿ ಮೂಲೆ ಹಿಡಿದಿವೆ! ಗ್ರಾಮೀಣ ಭಾಗದ ಜನತೆಗೆ ತಕ್ಷಣ
ನೆರವಾಗಲಿ ಎನ್ನುವ ಉದ್ದೇಶದಿಂದ ಆರೋಗ್ಯ ಕವಚ ಯೋಜನೆಯಡಿ ರಾಜ್ಯ ಸರ್ಕಾರ ಆರಂಭಿಸಿರುವ ಆ್ಯಂಬೂಲೆನ್ಸ್‌ ಗಳು ಕೆಟ್ಟು ನಿಂತಿದ್ದು ನೋಡಿದರೆ ಈ ಮಾತುಗಳು ಅಕ್ಷರಶಃ ಸತ್ಯವೆನಿಸುತ್ತವೆ.

Advertisement

ಆದರೆ ಆ್ಯಂಬೂಲೆನ್ಸ್‌ಗಳ ಸೇವೆಯಿಂದ ರೋಗಿಗಳು ವಂಚಿತರಾಗುತ್ತಿದ್ದರೂ ಸಂಬಂಧಿಸಿದ ಅಧಿಕಾರಿಗಳು ದುರಸ್ತಿ ಕಾರ್ಯಕ್ಕೆ ಮುಂದಾಗಿಲ್ಲ. ಜನತೆಗೆ ಸೇವೆ ಕಲ್ಪಿಸುವ ಉದ್ದೇಶದಿಂದ ಆರೋಗ್ಯ ಇಲಾಖೆಯಿಂದ ತಾಲೂಕಿಗೆ ಮೂರು ಆ್ಯಂಬೂಲೆನ್ಸ್‌ಗಳನ್ನು ನೀಡಲಾಗಿದೆ. ಪ್ರತಿ 30 ಕಿ.ಮೀ. ವ್ಯಾಪ್ತಿಗೆ ಒಂದರಂತೆ ಹುಲಸೂರ, ಮುಡಬಿ ಹಾಗೂ ಬಸವಕಲ್ಯಾಣಕ್ಕೆ ತಲಾ ಒಂದೊಂದು ಆ್ಯಂಬೂಲೆನ್ಸ್‌ಗಳ ಸೇವೆ ಇದೆ. 

ಇದರಲ್ಲಿ ಬಸವಕಲ್ಯಾಣ ಆ್ಯಂಬೂಲೆನ್ಸ್‌ ಬಿಟ್ಟರೆ ಉಳಿದ ಎರಡು ವಾಹಗಳು ಕೆಟ್ಟು ನಿಂತಿವೆ. ಹುಲಸೂರ ಹಾಗೂ ಮುಡಬಿ ಆ್ಯಂಬೂಲೆನ್ಸ್‌ಗಳು ಸೇವೆ ಸ್ಥಗಿತಗೊಳಿಸಿದ ಕಾರಣ ತಾಲೂಕಿನ ಯಾವ ಭಾಗದಲ್ಲಾದರೂ ಅಪಘಾತ ಸಂಭವಿಸಿದಲ್ಲಿ ಬಸವಕಲ್ಯಾಣ ಆಂಬ್ಯೂಲೆನ್ಸ್‌ ಮಾತ್ರ ಹಾಜರಾಗಬೇಕು.  ಈ ಆ್ಯಂಬೂಲೆನ್ಸ್‌ ಒಂದು ಭಾಗಕ್ಕೆ ತೆರಳಿದ ಸಮಯದಲ್ಲಿ ಮತ್ತೂಂದು ಭಾಗದಲ್ಲಿ ಅಪಘಾತವಾದರೆ ಅಲ್ಲಿಯ ಗಾಯಾಳು ಸ್ಥಿತಿ ದೇವರೆ ಬಲ್ಲ ಎನ್ನುವಂತಾಗಿದೆ.

ರಾಜೇಶ್ವರದಿಂದ ಮಹಾರಾಷ್ಟ್ರದ ಗಡಿಯವರೆಗೆ ರಾಷ್ಟ್ರಿಯ ಹೆದ್ದಾರಿ-65 ಹಾದು ಹೋಗಿರುವ ಕಾರಣ ಹೆಚ್ಚು
ಅಪಘಾತಗಳು ಸಂಭವಿಸಿ ಜನ ಗಾಯಗೊಳ್ಳುವುದು ಸಾಮಾನ್ಯವಾಗಿದೆ. ಗಾಯಾಳುಗಳನ್ನು ಸಾಗಿಸುವುದು ಹಾಗೂ ಹೆರಿಗೆಗಾಗಿ ಗ್ರಾಮೀಣ ಭಾಗದಿಂದ ನಗರಕ್ಕೆ ಆಗಮಿಸುವ ಮಹಿಳೆಯರನ್ನು ಆಸ್ಪತ್ರೆಗೆ ಸಾಗಿಸುವುದು ಸವಾಲಿನ ಕೆಲಸವಾಗಿದೆ. ಆದರೆ ಇಲ್ಲಿಯ ಆ್ಯಂಬೂಲೆನ್ಸ್‌ ಗಳ ಸ್ಥಿತಿ-ಗತಿ ಬಗ್ಗೆ ಗೊತ್ತಿದ್ದರೂ ಸಹ ಸಂಬಂಧಪಟ್ಟ ಮೇಲಾಧಿಕಾರಿಗಳು ದುರಸ್ತಿಗೆ ಏಕೆ ಮುಂದಾಗುತ್ತಿಲ್ಲ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.

ಮುಡಬಿ ಭಾಗದ ಆ್ಯಂಬೂಲೆನ್ಸ್‌ಕೆಟ್ಟು ನಿಂತು ಸುಮಾರು ಎರಡು ತಿಂಗಳಾಗಿವೆ. ಹೀಗಾಗಿ ಮುಡಬಿ ವ್ಯಾಪ್ತಿಯಲ್ಲಿ
ನಡೆಯುವ ಘಟನೆಗಳಿಗೆ ನಗರದಲ್ಲಿ ಆ್ಯಂಬೂಲೆನ್ಸ್‌ ಕಳುಹಿಸಲಾಗುತ್ತಿತ್ತು. ಆದರೆ ಈಗ ಹುಲಸೂರ ಹಾಗೂ ಮುಡಬಿ ಆಂಬ್ಯೂಲೆನ್ಸ್‌ಗಳು ಏಕ ಕಾಲಕ್ಕೆ ಸೇವೆಗೆ ಲಭ್ಯವಿಲ್ಲದ ಕಾರಣ ನಗರದ ಆಂಬ್ಯೂಲೆನ್ಸ್‌ ವಾಹನ ಒಂದು ಭಾಗಕ್ಕೆ ತೆರಳಿದಲ್ಲಿ ಮತ್ತೂಂದು ಭಾಗದಲ್ಲಿ ನಡೆಯುವ ಅಪಘಾತಗಳಿಗೆ ಆಂಬ್ಯೂಲೆನ್ಸ್‌ ಸೇವೆ ಇಲ್ಲದಂತಾಗಿದೆ.

Advertisement

ಹುಲಸೂರ ಹಾಗೂ ಮುಡಬಿ ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 5 ಆ್ಯಂಬೂಲೆನ್ಸ್‌ ಕೆಟ್ಟು ನಿಂತಿವೆ. ಈ ಹಿಂದೆ ಆಂಬ್ಯೂಲೆನ್ಸ್‌ಗಳ ದುರಸ್ತಿಗಾಗಿ ಮಾಡಲಾದ 4 ಲಕ್ಷ ರೂ. ಬಿಲ್‌ ಸಹ ಬಂದಿಲ್ಲ. ಕಳೆದ ಎರಡು ತಿಂಗಳಿಂದ ನಮ್ಮ ಸಂಸ್ಥೆ ಸಿಬ್ಬಂದಿಗಳಿಗೆ ಸಂಬಳ ಸಹ ಸಿಕ್ಕಿಲ್ಲ. ಈ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ. ಹುಲಸೂರ ಹಾಗೂ ಮುಡಬಿ ಆಂಬ್ಯೂಲೆನ್ಸ್‌ಗಳಿಗೆ ಟೈರ್‌ ಸೇರಿದಂತೆ ಇತರೆ ಸಮಸ್ಯೆಗಳಿದ್ದು, ಟೈರ್‌ಗಳು ಬಂದ ಕೂಡಲೇ ಈ ಎರಡು ವಾಹನಗಳು ಸೇವೆಗೆ ಲಭ್ಯವಾಗಲಿವೆ. 
ಮೋಶಿನ್‌ ಅಸ್ಲಮ್‌, ಜಿವಿಕೆ ಇಎಂಆರ್‌ಐ 108 ಜಿಲ್ಲಾ ವ್ಯವಸ್ಥಾಪಕರು

ಆ್ಯಂಬೂಲೆನ್ಸ್‌ ಸೇವೆ ಸಿಗದ ಹಿನ್ನೆಲೆಯಲ್ಲಿ ಜನ ಖಾಸಗಿ ವಾಹನಗಳನ್ನು ಆಶ್ರಯಿಸಬೇಕಾಗುತ್ತಿದೆ. ಕೆಟ್ಟು
ನಿಂತಿರುವ ಎರಡು ವಾಹನಗಳನ್ನು ತಕ್ಷಣ ದುರಸ್ತಿ ಮಾಡುವ ಜತೆಗೆ ತಾಲೂಕಿನ ದೊಡ್ಡ ಹೋಬಳಿ ಕೇಂದ್ರವಾಗಿರುವ ಮಂಠಾಳಕ್ಕೂ ಒಂದು ಹೆಚ್ಚುವರಿ ಆಂಬ್ಯೂಲೆನ್ಸ್‌ ನೀಡಿ ಜನರಿಗೆ ಅನುಕೂಲ ಕಲ್ಪಿಸಬೇಕು.
ಬಂಡೆಪ್ಪ ಮಾಳಿ, ಮಂಠಾಳ ನಿವಾಸಿ

Advertisement

Udayavani is now on Telegram. Click here to join our channel and stay updated with the latest news.

Next