Advertisement

Sullia ಆಸ್ಪತ್ರೆ ಶೆಡ್‌ನ‌ಲ್ಲಿ ನಿಲ್ಲುತ್ತಿದ್ದ 108 ಆ್ಯಂಬುಲೆನ್ಸ್‌ ಈಗ ರಸ್ತೆ ಬದಿಗೆ!

10:23 AM Oct 25, 2024 | Team Udayavani |

ಸುಳ್ಯ: ಸುಳ್ಯ ಸಾರ್ವಜನಿಕ ಆಸ್ಪತ್ರೆಯ ಮುಂಭಾಗದ ಶೆಡ್‌ನ‌ಲ್ಲಿ ಕಳೆದ ಹಲವು ವರ್ಷಗಳಿಂದ ನಿಲುಗಡೆ ಮಾಡುತ್ತ ಬಂದಿದ್ದ 108 ತುರ್ತು ಆ್ಯಂಬುಲೆನ್ಸ್‌ ವಾಹನ ಇದೀಗ ಶೆಡ್‌ನ‌ಲ್ಲಿ ನಿಲುಗಡೆಗೆ ಅವಕಾಶ ಸಿಗದೆ ಹೆದ್ದಾರಿ ಬದಿಯಲ್ಲಿ ನಿಲುಗಡೆ ಮಾಡಬೇಕಾದ ಸ್ಥಿತಿಗೆ ಬಂದು ನಿಂತಿದೆ.

Advertisement

ಸುಮಾರು 8 ವರ್ಷಗಳಿಂದ ತಾಲೂಕು ಸಾರ್ವಜನಿಕ ಆಸ್ಪತ್ರೆಯ ಬಳಿ ಅದಕ್ಕಾಗಿ ನಿರ್ಮಿಸಲಾದ ಶೆಡ್‌ನ‌ಲ್ಲಿ ನಿಲುಗಡೆ ಮಾಡುತ್ತಾ ಬರಲಾಗಿತ್ತು. ಇಲ್ಲಿನ 108 ವಾಹನದಲ್ಲಿ ಮೂರು ಶಿಫ್ಟ್‌ನಲ್ಲಿ ಮೂವರು ಚಾಲಕರು ಹಾಗೂ ಮೂವರು ಸ್ಟಾಫ್‌ ನರ್ಸ್‌ಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ ಹಲವು ವರ್ಷಗಳಿಂದ ನಿಲುಗಡೆ ಮಾಡುತ್ತಾ ಬರಲಾಗಿದ್ದ ಶೆಡ್‌ನ‌ಲ್ಲಿ ಇದೀಗ 108 ತುರ್ತು ವಾಹನ ನಿಲ್ಲಿಸದಂತೆ ಆಸ್ಪತ್ರೆಯ ವತಿಯಿಂದ ಸೂಚಿಸಲಾಗಿದೆ. ಅದರಂತೆ ಇದೀಗ 108 ವಾಹನ ನಿಲುಗಡೆಗೆ ಎಲ್ಲಿಯೂ ಜಾಗ ಇಲ್ಲದೆ ಇರುವುದರಿಂದ ಆಸ್ಪತ್ರೆಯ ಬಳಿಯ ಸುಳ್ಯ ನಗರದ ಮಾಣಿ-ಮೈಸೂರು ಹೆದ್ದಾರಿ ಬದಿ ನಿಲ್ಲಿಸಲಾಗುತ್ತಿದೆ.

ಕಾರಣ ಏನು?
ಕಳೆದ 8 ವರ್ಷಗಳಿಂದ 108 ತುರ್ತು ವಾಹನಕ್ಕೆ ಆಸ್ಪತ್ರೆ ಬಳಿಕ ಶೆಡ್‌ನ‌ಲ್ಲಿ ನಿಲ್ಲಿಸಲು ಅವಕಾಶ ನೀಡಲಾಗಿತ್ತು. ಆದರೆ ಇದೀಗ ಸರಕಾರದ ಕಡೆಯಿಂದ ಹೊಸ ವಾಹನವೊಂದು ಆಸ್ಪತ್ರೆಗೆ ಬಂದಿದೆ. ಅದಕ್ಕೆ ನಿಲುಗಡೆಗೆ ಬೇರೆ ಜಾಗ ಇಲ್ಲದೆ ಇರುವುದರಿಂದ 108 ತುರ್ತು ವಾಹನ ನಿಲ್ಲುತ್ತಿದ್ದ ಶೆಡ್‌ನ‌ಲ್ಲಿ ನಿಲ್ಲಿಸಲು ವ್ಯವಸ್ಥೆ ಮಾಡಲಾಗಿದೆ. ಇದರಿಂದ 108 ತುರ್ತು ವಾಹನ ನಿಲುಗಡೆಗೆ ಸದ್ಯಕ್ಕೆ ಜಾಗ ಇಲ್ಲದಂತಾಗಿದೆ.

ಎಲ್ಲ ಆಸ್ಪತ್ರೆಗಳಲ್ಲೂ ಆಸ್ಪತ್ರೆ ಬಳಿಯಲ್ಲೇ 108 ವಾಹನ ನಿಲ್ಲಿಸಲಾಗುತ್ತಿದ್ದರೂ, ಸುಳ್ಯದಲ್ಲಿ ಇದೀಗ ವಾಹನ ನಿಲುಗಡೆಗೆ ಅವಕಾಶ ನೀಡಲಾಗಿಲ್ಲ. ಜತೆಗೆ 108 ಸಿಬಂದಿಗೆ ವಿಶ್ರಾಂತಿಗೆ ಕೊಠಡಿ, ಶೌಚಾಲಯ, ವಾಶ್‌ ರೂಂ ವ್ಯವಸ್ಥೆಯನ್ನೂ ನೀಡಲಾಗುತ್ತಿಲ್ಲ ಎಂಬ ದೂರು ಬಂದಿದೆ. ಇಲ್ಲಿ 108 ವಾಹನ ನಿಲುಗಡೆಗೆ ಜಾಗ ಇಲ್ಲದಿರುವ ಬಗ್ಗೆ 108 ವಾಹನದ ಸಿಬಂದಿ ಜಿಲ್ಲಾಧಿಕಾರಿ, ಪುತ್ತೂರು ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಿದ್ದಾರೆ. ಜತೆಗೆ ವಿಚಾರದ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೂ ತಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next