Advertisement

108 ಆ್ಯಂಬುಲೆನ್ಸ್‌ ಸಿಬಂದಿಯ ಎಂದೆಗುಂದದ ಸೇವೆ

11:10 PM Jun 21, 2020 | Sriram |

ಮಹಾನಗರ: ಕೋವಿಡ್‌ ಸೇನಾನಿಗಳಾಗಿ ಶ್ರಮಿಸುತ್ತಿರುವ “108-ಆರೋಗ್ಯ ಕವಚ’ ಆ್ಯಂಬುಲೆನ್ಸ್‌ ಸಿಬಂದಿ ಸೋಂಕಿತರ ನೇರ ಸಂಪರ್ಕ ಇರಿಸಿಕೊಳ್ಳುತ್ತ, ಪಿಪಿಇ ಕಿಟ್‌ ಧರಿಸಿ ಕಿ.ಮೀ.ಗಟ್ಟಲೆ ಸಂಚರಿಸುತ್ತ ಜಿಲ್ಲಾಡಳಿತ, ಆರೋಗ್ಯ ವಿಭಾಗದ ಜತೆಗೆ ಹೆಗಲು ಕೊಟ್ಟಿದ್ದಾರೆ. ಪ್ರತಿ ಕ್ಷಣವೂ ಸವಾಲು ಎದುರಿಸುತ್ತಿದ್ದರೂ ಎದೆಗುಂದದೆ ಸೇವೆ ಮುಂದುವರಿಸಿದ್ದಾರೆ.

Advertisement

ಕಳೆದ ಎರಡೂವರೆ ತಿಂಗಳಿಂದ ನೂರಾರು ಮಂದಿ ಕೋವಿಡ್‌ ಸೋಂಕಿತರು, ಶಂಕಿತರು, ಗುಣಮುಖರಾದವರನ್ನು ಆಸ್ಪತ್ರೆ/ ಮನೆ/ಕ್ವಾರಂಟೈನ್‌ ಕೇಂದ್ರಗಳಿಗೆ ತಲುಪಿಸಿದ್ದಾರೆ. ಕೆಲವು ಸಿಬಂದಿ ಸ್ವತಃ ಕ್ವಾರಂಟೈನ್‌ಗೂ ಒಳಗಾಗಿದ್ದಾರೆ.

180ಕ್ಕೂ ಅಧಿಕ ವಾಹನ
ಕೋವಿಡ್‌-19ಸೋಂಕು, ಚಿಕಿತ್ಸೆ ಆರಂಭವಾದ ಬಳಿಕ 180ಕ್ಕೂ ಅಧಿಕ ಆರೋಗ್ಯ ಕವಚ ಆ್ಯಂಬುಲೆನ್ಸ್‌ ಕೋವಿಡ್‌ ಸೇವೆಯಲ್ಲಿ ನಿರತವಾಗಿವೆ. ಒಂದು ವಾಹನದಲ್ಲಿ ಚಾಲಕರು, ಸ್ಟಾಫ್ ನರ್ಸ್‌ಗಳು ಎರಡು ಪಾಳಿಗಳಲ್ಲಿ ತಲಾ 12 ತಾಸು ದುಡಿಯುತ್ತಾರೆ. ಚಾಲಕರ ಸಹಿತ ಎಲ್ಲರೂ ಪಿಪಿಇ ಕಿಟ್‌ ಧರಿಸಿಯೇ ಇರುತ್ತಾರೆ. 50 ಮಂದಿ ಮಹಿಳೆಯರು ಕೂಡ ಸೇರಿದ್ದಾರೆ. ದ.ಕ. ಜಿಲ್ಲೆಯಲ್ಲಿ ಕೋವಿಡ್‌ ಸೇವೆಗಾಗಿ 6 ವಾಹನಗಳನ್ನು ಬಳಕೆ ಮಾಡಲಾಗುತ್ತಿದೆ. ಒಟ್ಟು 24 ಮಂದಿ ಸೇವೆ ಸಲ್ಲಿಸುತ್ತಿದ್ದಾರೆ. ಉಡುಪಿಯಲ್ಲಿ ಆರಂಭದಲ್ಲಿ 3 ವಾಹನ ಗಳಿದ್ದರೆ ಈಗ 15ಕ್ಕೇರಿಸಲಾಗಿದೆ.

ನಾನಾ ಸವಾಲು-ಸಮಸ್ಯೆ
ರೋಗಿಗಳನ್ನು ಅತೀ ಶೀಘ್ರ ಆಸ್ಪತ್ರೆಗೆ ಕೊಂಡೊಯ್ಯುವ ಸವಾಲಿನ ಜತೆಗೆ ಸ್ವತಃ ಸೋಂಕಿನಿಂದ ರಕ್ಷಿಸಿಕೊಳ್ಳಬೇಕಾದ ಸವಾಲು ಇವರದು. ಊಟ ಉಪಾಹಾರ, ವಾಸ್ತವ್ಯ ವ್ಯವಸ್ಥೆಗೂ ಕೆಲವೆಡೆ ಪರದಾಡುವ ಸ್ಥಿತಿಯಿದೆ. ಇದರ ಜತೆ ಪಿಪಿಇ ಕಿಟ್‌ ಧರಿಸುವ ಅನಿವಾರ್ಯ.

ತುರ್ತು ಸೇವೆಗೆ ಅಲಭ್ಯ
108 ಆ್ಯಂಬುಲೆನ್ಸ್‌ಗಳನ್ನು ಈಗ ಹೆಚ್ಚಾಗಿ ಕೋವಿಡ್‌ ಸೇವೆಗಾಗಿ ಬಳಸುತ್ತಿರುವುದರಿಂದ ಕೆಲವೆಡೆ ಇತರ ತುರ್ತು ಸೇವೆಗೆ ಆ್ಯಂಬುಲೆನ್ಸ್‌ ಸಿಗದಂತಾಗಿದೆ. ಇದರಿಂದ ಜನರಿಗೆ ತೊಂದರೆಯಾಗುತ್ತಿದೆ. ಇಂತಹ ಸಂದರ್ಭದಲ್ಲಿ ಕೋವಿಡ್‌ ಸೇವೆಗೆ ಜಿಲ್ಲಾಸ್ಪತ್ರೆ, ತಾಲೂಕು ಆಸ್ಪತ್ರೆಗಳಲ್ಲಿರುವ ಬೇರೆ ಆ್ಯಂಬುಲೆನ್ಸ್‌ ಬಳಸಬಹುದು ಎಂಬ ಸಲಹೆ ಸಾರ್ವಜನಿಕರದು.

Advertisement

 ಎಚ್ಚರಿಕೆಯಿಂದ ಕೆಲಸ
ರಾಜ್ಯದಲ್ಲಿ ಒಟ್ಟು 716 ಆರೋಗ್ಯ ಕವಚ ವಾಹನಗಳಿವೆ. ಆರಂಭದಲ್ಲಿ 180ಕ್ಕೂ ಅಧಿಕ ವಾಹನಗಳನ್ನು ಕೋವಿಡ್‌ ಸೇವೆಗೆ ಬಳಸಿಕೊಳ್ಳಲಾಗಿತ್ತು. ಸಿಬಂದಿಯ ಸುರಕ್ಷೆಗಾಗಿ ಅವರ ಲೊಕೇಶನ್‌ಗಳಲ್ಲಿ ರೂಂ ಮಾಡಿಕೊಡಬೇಕಿತ್ತು. ಇದು ಇನ್ನೂ ಕೆಲವು ಕಡೆ ಆಗಿಲ್ಲ. ಕೆಲವರು ಒಂದು ತಿಂಗಳಿಗೂ ಹೆಚ್ಚು ಸಮಯದಿಂದ ಮನೆಗೂ ಹೋಗಿಲ್ಲ. ಅವರಿಗೆ ಕನಿಷ್ಠ ವೇತನ ನೀಡುವ ಆದೇಶವೂ ಜಾರಿಗೆ ಬಂದಿಲ್ಲ.ಕೋವಿಡ್‌ ಸೇವೆ ಸಂದರ್ಭ ನಮ್ಮವರು ಜಾಗರೂಕತೆಯಿಂದ ಕೆಲಸ ಮಾಡುತ್ತಿದ್ದಾರೆ.
 - ಶ್ರೀಶೈಲ ಹಳ್ಳೂರ್‌
ಅಧ್ಯಕ್ಷರು, ಕರ್ನಾಟಕ ರಾಜ್ಯ 108
ಆರೋಗ್ಯ ಕವಚ ನೌಕರರ ಸಂಘ

Advertisement

Udayavani is now on Telegram. Click here to join our channel and stay updated with the latest news.

Next