ಕೊರಟಗೆರೆ : ತಾಲೂಕಿನ ಸಾರ್ವಜನಿಕ ಆಸ್ಪತ್ರೆಯ ಆಂಬ್ಯುಲೆನ್ಸ್ ಸಿಬಂದಿಯ ನಿರ್ಲಕ್ಷದ ಬಗ್ಗೆ ಸತ್ಯಾಂಶವನ್ನು ತಿಳಿಯಲು ಹಾಗೂ ಸಿಬಂದಿಗೆ ಪಾಠ ಕಲಿಸಲು ಕೊರಟಗೆರೆ ತಹಶೀಲ್ದಾರ್ ನಾಹಿದಾ ಜಮ್ ಜಮ್ ಸಿನಿಮಾದ ರೀತಿಯಲ್ಲಿ ಗ್ರಾಮೀಣ ಮಹಿಳೆ ರಾಮಕ್ಕನ ಹೆಸರಿನಲ್ಲಿ ಸ್ಪಿಂಗ್ ಆಪರೇಷನ್ ನಡೆಸಿ ಅಂಬ್ಯುಲೆನ್ಸ್ ಸಿಬಂದಿಯ ಕೃತಕ ಸಮಸ್ಯೆ ಬಯಲಿಗೆಳೆದಿದ್ದಾರೆ.
ಕಳೆದ ಶನಿವಾರ ಡಿ.10 ರಂದು ಬೆಳಗ್ಗೆ ತಾಲೂಕಿನ ಇರಕಸಂದ್ರ ಕಾಲೋನಿಯಲ್ಲಿ ಚಿರತೆ ದಾಳಿಯಿಂದ ಗಾಯಗೊಂಡವರನ್ನು ಆಸ್ಪತ್ರೆಗೆ ಸಾಗಿಸಲು ಆಂಬ್ಯುಲೆನ್ಸ್ ಸೇವೆ ಸಕಾಲದಲ್ಲಿ ಸಿಗದ ಬಗ್ಗೆ ಚಿರತೆ ದಾಳಿಗೆ ಒಳಗಾದ ಬಾಲಕರ ಪೋಷಕರು ಆಸ್ಪತ್ರೆಗೆ ಭೇಟಿ ನೀಡಿದ ಸಮಯದಲ್ಲಿ ಶಾಸಕ ಡಾ.ಜಿ.ಪರಮೇಶ್ವರ್ ರವರಿಗೆ ದೂರು ನೀಡಿದಾಗ ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ಆಕ್ರೂಶ ವ್ಯಕ್ತವಾಗಿತ್ತು.
ತಾಲೂಕಿನಲ್ಲಿ 108 ಆಂಬ್ಯುಲೆನ್ಸ್ ಸೇವೆಯಲ್ಲಿದ್ದರೂ ಏಕೆ ಲಭ್ಯವಾಗುತ್ತಿಲ್ಲ ಎಂದು ಕೊರಟಗೆರೆ ಜನಸ್ನೇಹಿ ತಹಶೀಲ್ದಾರ್ ನಾಹಿದಾ ಜಮ್ ಜಮ್ ಸ್ಪಿಂಗ್ ಆಪರೇಷನ್‌ಗೆ ಮುಂದಾದರು, ಸಂಜೆ 5 ಗಂಟೆಗೆ ತಾಲೂಕು ಆಸ್ಪತ್ರೆಗೆ ಬೇಟಿ ನೀಡಿದ ತಹಶೀಲ್ದಾರ್ ಆಂಬ್ಯುಲೆನ್ಸ್ ಸೇವೆಯ ಅವ್ಯವಸ್ಥೆಯ ಬಗ್ಗೆ ರೋಗಿಗಳ ದೂರು ಕೇಳಿ, 5 ಗಂಟೆಗೆ 2 ನಿಮಿಷಕ್ಕೆ ಕೊರಟಗೆರೆ ಸಾರ್ವಜನಿಕ ಆಸ್ಪತ್ರೆಯ ಆಡಳಿತಾಧಿಕಾರಿ ಎದುರಲ್ಲೆ ರಾಮಕ್ಕ ಹೆಸರಲ್ಲಿ 108 ಕ್ಕೆ ಕರೆ ಮಾಡಿ, ವಡ್ಡಗೆರೆ ಕ್ರಾಸ್ ಬಳಿ ಅಪಘಾತವಾಗಿದೆ ಎಂದು 108 ಗ್ರಾಹಕ ಸೇವಾ ಕೇಂದ್ರದ ಸಿಬಂದಿಗೆ ಮಾಹಿತಿ ನೀಡಿದರು. ನಂತರ ಕರೆ ಆಂಬ್ಯುಲೆನ್ಸ್ ಸಿಬಂದಿಗೆ ವರ್ಗಾವಣೆ ಆಯಿತು, ಸಿಬಂದಿ ಉಮಾದೇವಿ ಅವರು ರಾಮಕ್ಕ (ತಹಶೀಲ್ದಾರ್ ನಾಹಿದಾ ಜಮ್ ಜಮ್ ಬದಲಿ ಹೆಸರು) ಜತೆ 8 ನಿಮಿಷ ಮಾತನಾಡಿದ ಬಳಿಕ ಅಂಬ್ಯುಲೆನ್ಸ್ ತೋವಿನಕೆರೆ ಬಳಿ ಇದೆ, ಅಲ್ಲಿಂದ ಬರುವುದು 1 ಗಂಟೆ ತಡೆವಾಗುತ್ತದೆ, ಅಲ್ಲಿಯವರೆಗೆ ಕಾಯಿರಿ ಅಥವಾ ಖಾಸಗಿ ವಾಹನದ ಮೂಲಕ ಆಸ್ಪತ್ರೆಗೆ ರವಾನಿಸಿ ಎಂದು ಉಡಾಫೆ ಉತ್ತರ ನೀಡಿದರು.
ತೋವಿನಕೆರೆಯಿಂದ ಕೊರಟಗೆರೆ ಪಟ್ಟಣಕ್ಕೆ ಬರಲು 15 ರಿಂದ 20 ನಿಮಿಷ ಸಾಕು, ಆದರೆ ತಹಶೀಲ್ದಾರ್ ಕರೆ ಮಾಡಿದ ಬಳಿಕ ಆಂಬ್ಯುಲೆನ್ಸ್ ಬಂದಿದ್ದು 1 ಗಂಟೆಯ ಬಳಿಕ. ಅಷ್ಟೋತ್ತಿಗೆ ತಹಶೀಲ್ದಾರ್ ಸ್ಥಳದಿಂದ ಹಿಂತಿರುಗಿದ್ದು, 108 ಕಾರ್ಯವೈಖರಿ ಬಗ್ಗೆ ಅಸಮಧಾನ ವ್ಯಕ್ತಪಡಿಸಿ ತಹಶೀಲ್ದಾರ್ ಈ ಬಗ್ಗೆ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಆರೋಗ್ಯಾಧಿಕಾರಿಯವರಿಗೆ ವರದಿ ಸಲ್ಲಿಸಿದ್ದಾರೆ.
108 ಸೇವೆ ನಿರ್ವಹಣೆ ವೈಫಲ್ಯ
ತಹಶೀಲ್ದಾರ್ ನಾಹಿದಾ ಜಮ್ ಜಮ್ ಮಾತನಾಡಿ 108 ಆಂಬ್ಯುಲೆನ್ಸ್ ಸೇವೆಯ ನಿರ್ವಹಣೆ ವೈಫಲ್ಯ ಬಯಲಾಗಿದೆ, ಖುದ್ದು ಸ್ಪಿಂಗ್ ಆಪರೇಷನ್ ಮಾಡಿ ಪರಿಸ್ಥಿತಿ ಆರಿತಾಗ ನಿಜಕ್ಕೂ ಆಘಾತವಾಗಿದೆ, ಅಧಿಕಾರಿಗಳು, ಸಿಬಂದಿ ಮಾನವೀಯತೆಯಿಂದ ಕೆಲಸ ಮಾಡಬೇಕು, ಆಂಬ್ಯುಲೆನ್ಸ್ ಇದ್ದರೂ ಸೇವೆ ನೀಡಲು ವಿಳಂಬ ಮಾಡುತ್ತಿರುವುದು ಖಂಡನೀಯ ಎಂದು ಆಂಬ್ಯುಲೆನ್ಸ್ ಸಿಬಂದಿಗಳ ಕಾರ್ಯವೈಖರಿ ಬಗ್ಗೆ ಬೇಸರ ವ್ಯಕ್ತಪಡಿಸಿದರು.