Advertisement

ಸಂವಿಧಾನ ಕರಡು ಸಮಿತಿ ಸದಸ್ಯ; ಕೋವಿಡ್ ಲಸಿಕೆ ಪಡೆದ 107 ವರ್ಷದ ಕೇವಳ್ ಕೃಷ್ಣನ್

06:48 PM Mar 17, 2021 | Team Udayavani |

ನವದೆಹಲಿ: ಭಾರತೀಯ ಸಂವಿಧಾನದ ಕರಡು ಸಮಿತಿಯಲ್ಲಿ ಕಾರ್ಯನಿರ್ವಹಿಸಿದ್ದ   107 ವರ್ಷದ ಕೇವಳ್ ಕೃಷ್ಣನ್ ಅವರು ಮೊದಲನೇ ಹಂತದ ಕೋವಿಡ್ ಲಸಿಕೆಯನ್ನು ಸ್ವೀಕರಿಸಿದ್ದಾರೆ.

Advertisement

ಈ ಕುರಿತು ಮಾಧ್ಯಮಗಳೊಂದಿಗೆ ಮಾಹಿತಿ ಹಂಚಿಕೊಂಡಿರುವ ಪುತ್ರ ಅನಿಲ್ ಕೃಷ್ಣ , ಕೇವಳ್ ಕೃಷ್ಣನ್ ಅವರು ದೆಹಲಿಯ  ಫೋರ್ಟೀಸ್ ಎಸ್ಕೋರ್ಟ್ಸ್ ಹಾರ್ಟ್ ಇನ್ಸ್ಟಿಟ್ಯೂಟ್ ನಲ್ಲಿ ಕೋವಿಡ್ ಲಸಿಕೆಯನ್ನು ತೆಗೆದುಕೊಂಡಿದ್ದು, ಲಸಿಕೆ ತೆಗೆದುಕೊಂಡ ಬಳಿಕ ಇವರ ಆರೋಗ್ಯದಲ್ಲಿ ಯಾವುದೇ ವಿಧವಾದ ಏರು ಪೇರು ಕಂಡುಬಂದಿಲ್ಲ ಮತ್ತು ಮನೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿಯೂ ಅವರು ಸಕ್ರಿಯವಾಗಿ ಭಾಗಿಯಾಗಿದ್ದಾರೆ ಎಂದಿದ್ದಾರೆ.

ಕಳೆದ ಮಾರ್ಚ್ 2020 ರಲ್ಲಿ ಕೋವಿಡ್ ಲಾಕ್ ಡೌನ್ ಆರಂಭಗೊಂಡ ಬಳಿಕ ಮೊದಲ ಬಾರಿ ತಮ್ಮ ನಿವಾಸದಿಂದ ಹೊರಬಂದಿರುವ ಇವರು ಮುಂಜಾಗೃತಾ ಕ್ರಮವಾಗಿ ಕೋವಿಡ್ ಸೋಂಕಿಗೆ ಲಸಿಕೆ ಪಡೆದುಕೊಂಡಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ:ಟೈಮ್ ಮುಖಪುಟದಲ್ಲಿ ತೃತೀಯ ಲಿಂಗಿ ಎಲಿಯಟ್ ಫೋಟೊ : ಹಾಲಿವುಡ್ ತಾರೆಯರ ಸಂಭ್ರಮ  

ಈ ಹಿಂದೆ ಕಳೆದ 1918 ರಲ್ಲಿ ಕಂಡುಬಂದಿದ್ದ ಮಹಾಮಾರಿ ಸ್ಪ್ಯಾನಿಶ್ ಫ್ಲೂ ಸೋಂಕಿಗೆ ಒಳಗಾಗಿದ್ದ ಇವರು, ಈ ಸೋಂಕನ್ನು ಮೆಟ್ಟಿನಿಂತು ಬದುಕುಳಿದಿದ್ದರು. ಈ ಕುರಿತಾಗಿ ಮಾಹಿತಿ ನೀಡಿರುವ  ಪುತ್ರ ಕೃಷ್ಣ ನಮಗೆ ಕಳೆದ ವರ್ಷ ಕೋವಿಡ್ ಸೋಂಕಿನ ಪರಿಚಯವಾದಾಗ ನಮ್ಮ ತಂದೆ ಎದುರಿಸಿದ್ದ ಸ್ಪ್ಯಾನಿಶ್ ಫ್ಲೂ ನೆನಪಿಗೆ ಬಂದಿತ್ತು. ಆ ಸಮಯದಲ್ಲಿ ನಾವು ಅವರೊಂದಿದೆ 1918 ರ ಪರಿಸ್ಥಿತಿಗಳ ಕುರಿತಾಗಿ ಮಾತುಕತೆ ನಡೆಸಿದ್ದೆವು. ಆದರೆ ಅವರ ವಯಸ್ಸಿನ ಕಾರಣದಿಂದ ಒಂದಷ್ಟು ಮಾಹಿತಿಗಳು ಅವರ ನೆನಪಿಗೆ ಬಂದಿಲ್ಲ ಎಂದಿದ್ದಾರೆ.

Advertisement

ಕೇವಳ್ ಕೃಷ್ಣನ್ ಅವರು 1913 ರ ಆಗಸ್ಟ್ 4 ರಂದು ಜಲಂಧರ್ ಜಿಲ್ಲೆಯ  ಕರ್ತಾರ್ಪುರ್ ಪ್ರದೇಶದಲ್ಲಿ ಜನಿಸಿದ್ದು, 1930 ರಲ್ಲಿ ದೆಹಲಿಗೆ ಪ್ರಯಾಣ ಬೆಳೆಸಿದರು. ಆನಂತರ ದೆಹಲಿಯಲ್ಲಿ ಗೃಹ ಮತ್ತು ರಕ್ಷಣಾ ಸಚಿವಾಲಯದಲ್ಲಿ ಕಾರ್ಯ ನಿರ್ವಹಿಸಿರುವ ಇವರು, ತದನಂತರ ಸಂವಿಧಾನ ಕರಡು ರಚನಾ ಸಮೀತಿ ಭಾಗವಾಗಿ ಕಾರ್ಯನಿರ್ವಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next