ಕಾರವಾರ : ದೇವಭಾಗ್ ಕಡಲ ತೀರದಲ್ಲಿ ಸಂರಕ್ಷಿಸಲ್ಪಟ್ಟ ಆಲೀವ್ ರಿಡ್ಲೆ ಜಾತಿಯ ಕಡಲಾಮೆಯ ಮೊಟ್ಟೆ ಗಳಿಂದ ಹೊರಬಂದ 106ಆಮೆ ಮರಿಗಳನ್ನು ಕಾರವಾರ ವಿಭಾಗದ ಡಿಸಿಎಫ್ ಪ್ರಶಾಂತ ಕುಮಾರ್ ,ಎಸಿಎಫ್ ಜಯೇಶ್ ಕೆ.ಸಿ. ಅವರು ಜಂಟಿಯಾಗಿ ಅರಬ್ಬೀ ಸಮುದ್ರಕ್ಕೆ ಬಿಟ್ಟರು. ಶುಕ್ರವಾರ ಬೆಳಿಗ್ಗೆ ದೇವಭಾಗ ಬೀಚ್ ನಲ್ಲಿ ಆಮೆಮರಿಗಳು ಕಡಲು ಸೇರಿದವು.
ನವೆಂಬರ್ ನಿಂದ ಮಾರ್ಚ್ ಕಡಲಾಮೆ ಮೊಟ್ಟೆ ಇಡುವ ಸಮಯವಾಗಿದ್ದು ಇಲ್ಲಿಯವರೆಗೆ ಕಾರವಾರ ವಿಭಾಗ ವ್ಯಾಪ್ತಿಯ ಲ್ಲಿ ದೇವಭಾಗ್, ಮುದ್ಗ, ಮಜಾಳಿ ಭಾವಿಕೇರಿ, ಹಾರವಾಡ, ಮಂಜಗುಣಿ ಸೇರಿ 30 ಕಡೆ ಆಲೀವ್ ರಿಡ್ಲೆ ಆಮೆ ಮೊಟ್ಟೆ ಇಟ್ಟ ಗೂಡು ಗಳನ್ನು ಸಂರಕ್ಷಿಸಲಾಗಿದೆ.
ಕರ್ನಾಟಕ ಕರಾವಳಿಯಲ್ಲಿ ಒಲಿವ್ ರಿಡ್ಲೆ ಕಡಲಾಮೆ ಗಳ ಮೊಟ್ಟೆಗಳು ಮಾತ್ರ ಪಟ್ಟೆಯಾಗಿದ್ದು ಒಲಿವ್ ರಿಡ್ಲೆ ಇದು ವನ್ಯ ಜೀವಿ ಸಂರಕ್ಷಣಾ ಕಾಯ್ದೆ 1972ರ ಅನುಭಂದ 1 ರಲ್ಲಿ ಸಂರಕ್ಷಿಸಪಟ್ಟಿದೆ.
ಮೊಟ್ಟೆ ಗಳಿಗೆ ಮಾತೃ ಆರೈಕೆ ಇರದ ಕಾರಣ ಆಮೆ ಮೊಟ್ಟೆಗಳನ್ನು ಸಂರಕ್ಷಿಸಿ ,ಮರಿ ಹೊರಬಂದ ನಂತರ ಸಮುದ್ರಕ್ಕೆ ಬಿಡಲಾಗುತ್ತಿದೆ. ಕಳೆದ ಸಾಲಿನಲ್ಲಿ ಕಾರವಾರ ವಿಭಾಗ ಕಡಲತೀರದ ವ್ಯಾಪ್ತಿಯಲ್ಲಿ 14 ಗೂಡುಗಳು ಪತ್ತೆಯಾಗಿದ್ದವು.ಅರಣ್ಯ ಇಲಾಖೆಯಲ್ಲಿ ಕೋಸ್ಟಲ್ ಮತ್ತುಮರೈನ್ ಇಕೋಸಿಸ್ಟಮ್ ಘಟಕ ಸೃಷ್ಟಿಯಾಗಿದ್ದು ಅದು ಕಡಲ ಜೀವಿ ವೈವಿಧ್ಯತೆ ಸಂರಕ್ಷಣೆಯಲ್ಲಿ ತೊಡಗಿದೆ.
ಆಮೆ ಮರಿಗಳನ್ನು ಸಮುದ್ರಕ್ಕೆ ಬಿಡುವ ಕಾರ್ಯಕ್ರಮದಲ್ಲಿ ಚಿತ್ತಾಕುಲ ಗ್ರಾಮ ಪಂಚಾಯತ್ ಅಧ್ಯಕ್ಷೆ ಸ್ವಾತಿ ದೇಸಾಯಿ, ಸದಸ್ಯರಾದ ಉಲ್ಲಾಸ್ ಜೋಶಿ, ಚಂದ್ರಹಾಸ್ ಗಿರಪ್,ಸೂರಜ್ ದೇಸಾಯಿ, ಸ್ಥಳೀಯರು ಹಾಗೂ ಕಡಲಾಮೆ ಪ್ರಿಯರು ಹಾಜರಿದ್ದರು.