ಮುಂಬೈ:ಮಹಾರಾಷ್ಟ್ರದಲ್ಲಿ ಈವರೆಗೆ 1043 ಕೈದಿಗಳಿಗೆ ಹಾಗೂ 302 ಜೈಲು ಸಿಬ್ಬಂದಿಗಳಿಗೆ ಕೋವಿಡ್ 19 ಸೋಂಕು ದೃಢಪಟ್ಟಿರುವುದಾಗಿ ಜೈಲು ಅಧಿಕಾರಿಗಳು ತಿಳಿಸಿದ್ದಾರೆ. ಕೋವಿಡ್ 19 ಸೋಂಕಿಗೆ ಆರು ಕೈದಿಗಳು ಸಾವನ್ನಪ್ಪಿದ್ದಾರೆ. ಒಟ್ಟು 818 ಕೈದಿಗಳು, 271 ಜೈಲು ಸಿಬ್ಬಂದಿಗಳು ಕೋವಿಡ್ ಸೋಂಕಿನಿಂದ ಗುಣಮುಖರಾಗಿದ್ದಾರೆ.
ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಮಹಾರಾಷ್ಟ್ರದ ವಿವಿಧ ಜೈಲುಗಳಲ್ಲಿ ತುಂಬಿಕೊಂಡಿದ್ದ ಕೈದಿಗಳ ಸಂಖ್ಯೆಯನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ಒಟ್ಟು 10,480 ಕೈದಿಗಳನ್ನು ಜೈಲಿನಿಂದ ಬಿಡುಗಡೆ ಮಾಡಲು ನಿರ್ಧರಿಸಿದ್ದು, ಈವರೆಗೆ ಉನ್ನತ ಮಟ್ಟದ ಸಮಿತಿಯ ಶಿಫಾರಸ್ಸಿನ ಮೇರೆಗೆ 2,444 ಕೈದಿಗಳನ್ನು ಪೆರೋಲ್ ಮೇಲೆ ಉಳಿದ ಕೈದಿಗಳನ್ನು ಬೇಲ್ ಮೇಲೆ ಬಿಡುಗಡೆ ಮಾಡಲಾಗುವುದು ಎಂದು ವರದಿ ತಿಳಿಸಿದೆ.
ಸೋಮವಾರ ಮಹಾರಾಷ್ಟ್ರದಲ್ಲಿ 8,493 ಕೋವಿಡ್ 19 ಸೋಂಕು ಪ್ರಕರಣ ಪತ್ತೆಯಾಗಿದ್ದು, 228 ಮಂದಿ ಸಾವನ್ನಪ್ಪಿದ್ದರು. ರಾಜ್ಯದಲ್ಲಿ ಒಟ್ಟು 6,04,358 ಕೋವಿಡ್ ಪ್ರಕರಣ ವರದಿಯಾಗಿದೆ. ಆರೋಗ್ಯ ಇಲಾಖೆ ವರದಿ ಪ್ರಕಾರ ಸೋಮವಾರ 11,391 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ ಚಾರ್ಜ್ ಆಗಿರುವುದಾಗಿ ತಿಳಿಸಿದೆ.
ಒಟ್ಟು ಪಾಸಿಟಿವ್ ಪ್ರಕರಣಗಳಲ್ಲಿ 4,28,514 ಮಂದಿ ಗುಣಮುಖರಾಗಿದ್ದಾರೆ. 20,265 ಜನರು ಸಾವನ್ನಪ್ಪಿದ್ದರು. 1,55,268 ಕೋವಿಡ್ 19 ಸಕ್ರಿಯ ಪ್ರಕರಣಗಳಿರುವುದಾಗಿ ಹೇಳಿದೆ.
ಪುಣೆಯಲ್ಲಿ 1,829 ಕೋವಿಡ್ ಪ್ರಕರಣ ಪತ್ತೆಯಾಗಿದೆ. ಕಳೆದ 24 ಗಂಟೆಯಲ್ಲಿ 82 ಮಂದಿ ಸಾವನ್ನಪ್ಪಿದ್ದರು. ಪುಣೆಯಲ್ಲಿ ಒಟ್ಟು ಕೋವಿಡ್ 19 ಪರಕರಣ 1,27,026ಕ್ಕೆ ಏರಿಕೆಯಾಗಿದೆ.