ಮಣಿಪಾಲ: ಕೆಲವು ಪವಾಡಗಳಿಗೆ ನಾವು ಅನಿವಾರ್ಯವಾಗಿ ಸಾಕ್ಷಿಯಾಗಬೇಕಾಗುತ್ತದೆ. “ಸಮಯ ಬಂದಾಗ, ನಮ್ಮ ಹಣೆಯ ಮೇಲೆ ಬರೆದಿದ್ದರೆ ಯಾರಾದರೂ ಅಷ್ಟೇ ಗಂಟು ಮೂಟೆಕಟ್ಟಿ ಹೊರಡಬೇಕು’ ಎಂಬ ಮಾತು ನಮ್ಮ ನಿಮ್ಮ ನಡುವೆ ಸಂದರ್ಭ ಬಂದಾಗ ಅನುರಣಿಸುತ್ತಿರುತ್ತದೆ. ಇದೀಗ ಇಂತಹದ್ದೇ ಘಟನೆಯೊಂದಕ್ಕೆ ಅಮೆರಿಕ ಸಾಕ್ಷಿಯಾಗಿದೆ.
ಇಳಿ ವಯಸ್ಸು, 100 ಮಳೆಗಾಲದ ಜತೆ 2ನೇ ಜಾಗತಿಕ ಯುದ್ಧವನ್ನು ಕಂಡಿದ್ದ ಆ ದೇಹಕ್ಕೆ ಮಾರಣಾಂತಿಕ
ಕೋವಿಡ್-19 ಸೋಂಕು ಅಪ್ಪಳಿಸಿತ್ತು. ತೀವ್ರ ನಿಗಾಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಇನ್ನೇನು ಬದುಕಿ ಬರುವುದು ಕಷ್ಟವೇ ಎಂಬ ಮಾತಿತ್ತು. ಆದರೆ 2ನೇ ವಿಶ್ವಯುದ್ಧ ಹೋರಾಡಿದ್ದ ಆ ತಾತ ಮೂರನೇ ಯುದ್ಧವನ್ನೂ ಗೆದ್ದು ಬಂದ.
104 ವರ್ಷದ ವಿಲಿಯಂ ಬಿಲ್ ಲ್ಯಾಪ್ಚಿಸ್ ಎಂಬವರು ಮಾರ್ಚ್ 5ರಂದು
ಕೋವಿಡ್-19 ಸೋಂಕಿಗೆ ತುತ್ತಾಗಿ ಆಸ್ಪತ್ರೆ ಸೇರಿದ್ದರು. 1918ರ ಸ್ಪಾನಿಷ್ ಫ್ಲೂ, 1929ರ ಮಹಾ ಆರ್ಥಿಕ ಕುಸಿತ, 2ನೇ ಮಹಾಯುದ್ದ ಮತ್ತು ಈಗಿನ ಕೊವಿಡ್ 19ರ ಎದುರಿ ಜಯಿಸಿ ಬಂದು ತಮ್ಮ 104 ನೇ ಹುಟ್ಟು ಹಬ್ಬವನ್ನು ಅಮೆರಿಕದ ಒರೆಗಾನ್ ನಲ್ಲಿ ಎಪ್ರಿಲ್ 1 ರಂದು ಆಚರಿಸಿದ್ದಾರೆ.
ಲ್ಯಾಪ್ಚಿಸ್ ಅವರು ವಾಸವಿರುವ ಭಾಗದಲ್ಲಿ 15 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಅವರಲ್ಲಿ ಇಬ್ಬರು ಸಾವನ್ನಪ್ಪಿದ್ದರು. ಅವರ 102ನೇ ಹುಟ್ಟುಹಬ್ಬಕ್ಕೆ 200 ಮಂದಿ ಸೇರಿದ್ದು, ನಾವು 104ನೇ ಹುಟ್ಟು ಹಬ್ಬವನ್ನು ಅದ್ಧೂರಿಯಾಗಿ ಆಚರಿಸಬೇಕು ಎಂದುಕೊಂಡಿದ್ದೆವು. ಆದರೆ ಅವರು ಆಸ್ಪತ್ರೆ ಸೇರಿದ ಬಳಿಕ ಮತ್ತು ಅದರಲ್ಲೂ ಅಮೆರಿಕದಲ್ಲಿ
ಕೋವಿಡ್-19 ಸೋಂಕಿತರ ಸಾವನ್ನಪ್ಪುವ ಸಂಖ್ಯೆ ಹೆಚ್ಚಾಗುತ್ತಿರುವಾಗ ನಾವು ಭಯ ಭೀತರಾಗಿದ್ದೆವು ಎಂದು ಹೇಳುತ್ತಾರೆ ಮಗಳು ಕ್ಯಾರೋಲಿ ಬ್ರೌನ್.
ತಮ್ಮ ತಂದೆಯನ್ನು ಉಳಿಸಿದ ವೈದ್ಯ ಜಗತ್ತಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಇದು ಕುಟುಂಬಕ್ಕೆ ಮಾತ್ರವಲ್ಲದೇ ಇಡೀ ಜಗತ್ತಿಗೆ ಸ್ಪೂರ್ತಿಯನ್ನು ತುಂಬಿದ ಘಟನೆಯಾಗಿದೆ ಎಂದಿದ್ದಾರೆ ಕ್ಯಾರೋಲಿ ಬ್ರೌನ್.