ಚೆನ್ನೈ:ಸುಮಾರು 45 ಕೋಟಿ ರೂಪಾಯಿ ಮೌಲ್ಯದ 400ಕೆಜಿ ಚಿನ್ನವನ್ನು ಸಿಬಿಐ ದಾಳಿ ವೇಳೆ ವಶಪಡಿಸಿಕೊಂಡಿದ್ದು, ಅದನ್ನು ಸುರಕ್ಷಿತ ಜಾಗದಲ್ಲಿ ಇರಿಸಲಾಗಿತ್ತು. ಆದರೆ ಇದೀಗ ಅದರಲ್ಲಿ 103 ಕೆಜಿ ಚಿನ್ನ ನಾಪತ್ತೆಯಾಗಿದ್ದು, ಈ ಕುರಿತು ತನಿಖೆ ನಡೆಸುವಂತೆ ತಮಿಳುನಾಡಿನ ಸಿಬಿ-ಸಿಐಡಿಗೆ ಮದ್ರಾಸ್ ಹೈಕೋರ್ಟ್ ಆದೇಶ ನೀಡಿದೆ.
2012ರಲ್ಲಿ ಸಿಬಿಐ ಚೆನ್ನೈನ ಸುರಾನಾ ಕಾರ್ಪೋರೇಶನ್ ಲಿಮಿಟೆಡ್ ಕಚೇರಿ ಮೇಲೆ ದಾಳಿ ನಡೆಸಿ 400.5ಕೆಜಿಯಷ್ಟು ಚಿನ್ನದ ಗಟ್ಟಿ ಹಾಗೂ ಆಭರಣಗಳನ್ನು ವಶಪಡಿಸಿಕೊಂಡಿತ್ತು. ಈ ಚಿನ್ನವನ್ನು ಸಿಬಿಐ ಸುರಕ್ಷಿತ ಜಾಗದಲ್ಲಿ ಇಟ್ಟು ಲಾಕ್ ಹಾಕಿ ಸೀಲ್ ಹಾಕಿತ್ತು.
ಸಿಬಿಐನ ಪ್ರಕರಣಗಳ ಹಿನ್ನೆಲೆಯಲ್ಲಿ ಸೇಫ್ಸ್ ಮತ್ತು ಭದ್ರತಾ ಕೋಣೆಯ 72 ಕೀಗಳನ್ನು ಚೆನ್ನೈನ ಪ್ರಿನ್ಸಿಪಲ್ ಸ್ಪೆಷಲ್ ಕೋರ್ಟ್ ಗೆ ಹಸ್ತಾಂತರಿಸಲಾಗಿತ್ತು ಎಂದು ಸೆಂಟ್ರಲ್ (ಸಿಬಿಐ) ಏಜೆನ್ಸಿ ತಿಳಿಸಿದೆ. ಅಲ್ಲದೇ ಚಿನ್ನ ವಶಪಡಿಸಿಕೊಳ್ಳುವ ಸಂದರ್ಭದಲ್ಲಿ ಚಿನ್ನದ ಗಟ್ಟಿಯನ್ನು ಎಲ್ಲಾ ಒಟ್ಟು ಸೇರಿಸಿ ತೂಕ ಮಾಡಲಾಗಿತ್ತು. ಆದರೆ ಸುರಾನಾ ಮತ್ತು ಎಸ್ ಬಿಐ ನಡುವಿನ ಸಾಲದ ಇತ್ಯರ್ಥಕ್ಕಾಗಿ ನೇಮಕಗೊಂಡಿದ್ದ ಲಿಕ್ವಿಡೇಟರ್ ಗೆ ಹಸ್ತಾಂತರಿಸಿದ್ದೇವು. ಅವರು ಅದನ್ನು ಪ್ರತ್ಯೇಕವಾಗಿ ತೂಕ ಮಾಡಿದ್ದರಿಂದ ವ್ಯತ್ಯಾಸ ಬರಲು ಕಾರಣವಾಗಿದೆ ಎಂದು ಸಿಬಿಐ ವಾದ ಮಂಡಿಸಿತ್ತು.
ಇದನ್ನೂ ಓದಿ:ಕೊಡಪಾನದ ಒಳಗೆ ಮೂಗು ತೂರಿಸಲು ಹೋಗಿ ತಲೆ ಸಿಲುಕಿಕೊಂಡು ಒದ್ದಾಡಿದ ಬೀದಿ ನಾಯಿ
ಆದರೆ ಸಿಬಿಐ ವಾದವನ್ನು ಜಸ್ಟೀಸ್ ಪ್ರಕಾಶ್ ನೇತೃತ್ವದ ಪೀಠ ತಿರಸ್ಕರಿಸಿದ್ದು, ಇಲ್ಲಿ ಬರೋಬ್ಬರಿ 103 ಕೆಜಿ ಚಿನ್ನ ಕಣ್ಮರೆಯಾಗಿದೆ. ಇದು ಸಣ್ಣ ಮೊತ್ತವಲ್ಲ. ಹೀಗಾಗಿ ಈ ಪ್ರಕರಣದ ಬಗ್ಗೆ ಸಿಬಿ-ಸಿಐಡಿ( ಎಸ್ ಪಿ ಶ್ರೇಣಿಯ ಅಧಿಕಾರಿ) ಆರು ತಿಂಗಳೊಳಗೆ ವಿಚಾರಣೆ ಪೂರ್ಣಗೊಳಿಸುವಂತೆ ನಿರ್ದೇಶನ ನೀಡಿದೆ.