ತಿರುವನಂತರಪುರಂ: 103 ವರ್ಷದ ವೃದ್ಧರೊಬ್ಬರು ಕೋವಿಡ್-19 ನಿಂದ ಸೋಂಕಿನಿಂದ ಚೇತರಿಸಿಕೊಂಡಿದ್ದು, ಮಂಗಳವಾರ ಕೇರಳದ ಆಸ್ಪತ್ರೆಯೊಂದರಿಂದ ಬಿಡುಗಡೆಗೊಂಡಿದ್ದಾರೆ.
ಅಲುವಾ ಮೂಲದ ವ್ಯಕ್ತಿ ಎರ್ನಾಕುಲಂನ ಕಲಾಮಸ್ಸೆರಿ ವೈದ್ಯಕೀಯ ಕಾಲೇಜಿಗೆ ಚಿಕಿತ್ಸೆಗಾಗಿ ದಾಖಲಾಗಿದ್ದರು. ಈಗ ಸೋಂಕಿನಿಂದ ಗುಣಮುಖರಾಗಿದ್ದು ಆಸ್ಪತ್ರೆಯ ಸಿಬ್ಬಂದಿ ಹೂ ಗುಚ್ಚ ನೀಡುವ ಮೂಲಕ ಬಿಳ್ಕೊಟ್ಟಿದ್ದಾರೆ.
ಜುಲೈ 28ರಂದು ತೀವ್ರ ಜ್ವರ ಮತ್ತು ದೇಹದಲ್ಲಿ ನೋವು ಕಾಣಿಸಿಕೊಂಡ ಬಳಿಕ ಅವರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿತ್ತು. ನಂತರದಲ್ಲಿ ಸೊಂಕು ದೃಢಪಟ್ಟಿದ್ದರಿಂದ ಅವರನ್ನು ಕಲಾಮಸ್ಸೆರಿ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಯಿತು. ಇವರ ವೃದ್ದಾಪ್ಯವನ್ನು ಪರಿಗಣಿಸಿ ವೈದ್ಯಕೀಯ ತಂಡ ವಿಶೇಷ ಚಿಕಿತ್ಸೆ ನೀಡಿದೆ. ಮಾತ್ರವಲ್ಲದೆ ಆಸ್ಪತ್ರೆಗೆ ದಾಖಲಾದ 20 ದಿನಗಳಲ್ಲಿ ಗುಣಮುಖರಾಗಿದ್ದಾರೆ.
ವೃದ್ದನ ಪತ್ನಿ ಮತ್ತು ಪುತ್ರರ ವರದಿ ನೆಗೆಟಿವ್ ಬಂದಿದ್ದು ಆ ಬಳಿಕವೇ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.
ವೃದ್ಧ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದೇವೆ ಮತ್ತು ಗುಣಪಡಿಸುತ್ತಿದ್ದೇವೆ ಎಂಬುದು ಹೆಮ್ಮೆಯ ವಿಚಾರ ಎಂದು ಕೇರಳ ರಾಜ್ಯ ಆರೋಗ್ಯ ಸಚಿವೆ ಕೆ.ಕೆ ಶೈಲಜಾ ತಿಳಿಸಿದ್ದಾರೆ.