ಲಕ್ನೋ: ರಾಜ್ಯದಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲ, ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂಬ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ, ಮಾಜಿ ಸಿಎಂ ಅಖಿಲೇಶ್ ಯಾದವ್ ಹಾಗೂ ಮಾಯಾವತಿ ಆರೋಪಕ್ಕೆ ತಿರುಗೇಟು ನೀಡಿರುವ ಉತ್ತರಪ್ರದೇಶ ಸರ್ಕಾರ, ಕಳೆದ ಎರಡು ವರ್ಷಗಳಲ್ಲಿ ಶಂಕಿತ 103 ಕ್ರಿಮಿನಲ್ಸ್ ಗಳನ್ನು ಎನ್ ಕೌಂಟರ್ ನಲ್ಲಿ ಹೊಡೆದುರುಳಿಸಲಾಗಿದೆ ಎಂದು ತಿಳಿಸಿದೆ.
ಉತ್ತರ ಪ್ರದೇಶದ ಪೊಲೀಸರು ಆರೋಪಿಗಳನ್ನು “ರಾಜ್ಯದ ಅತಿಥಿಗಳನ್ನಾಗಿ” ಇರಿಸಿಕೊಂಡಿದೆ ಎಂಬ ಬಹುಜನ್ ಸಮಾಜ ಪಕ್ಷದ ವರಿಷ್ಠೆ ಮಾಯಾವತಿ ಆರೋಪಕ್ಕೆ ರಾಜ್ಯ ಪೊಲೀಸ್ ಅಂಕಿ-ಅಂಶವನ್ನು ಬಿಡುಗಡೆ ಮಾಡುವ ಮೂಲಕ ಟಾಂಗ್ ನೀಡಿರುವುದಾಗಿ ವರದಿ ವಿವರಿಸಿದೆ.
ಹೈದರಾಬಾದ್ ಪೊಲೀಸರು ನಾಲ್ವರು ಅತ್ಯಾಚಾರಿ ಆರೋಪಿಗಳನ್ನು ಎನ್ ಕೌಂಟರ್ ನಲ್ಲಿ ಹತ್ಯೆಗೈದಿರುವುದನ್ನು ಮಾಯಾವತಿ ಶ್ಲಾಘಿಸಿದ್ದು, ಉತ್ತರಪ್ರದೇಶದ ಪೊಲೀಸರು ಕೂಡಾ ತೆಲಂಗಾಣದ ಪೊಲೀಸರನ್ನು ನೋಡಿ ಕಲಿತುಕೊಳ್ಳಬೇಕು ಎಂದು ಸಲಹೆ ನೀಡಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.
ಮಾಯಾವತಿ, ಅಖಿಲೇಶ್, ಪ್ರಿಯಾಂಕಾ ಆರೋಪಕ್ಕೆ ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿರುವ ಉತ್ತರಪ್ರದೇಶ ಪೊಲೀಸರು, ಕಳೆದ ಎರಡು ವರ್ಷಗಳಲ್ಲಿ 103 ಕ್ರಿಮಿನಲ್ಸ್ ಗಳನ್ನು ಎನ್ ಕೌಂಟರ್ ನಲ್ಲಿ ಹತ್ಯೆಗೈಯಲಾಗಿದೆ. 5,178 ಗುಂಡಿನ ದಾಳಿ ನಡೆಸಿದ ಘಟನೆಯಲ್ಲಿ 1,859 ಮಂದಿ ಗಾಯಗೊಂಡಿದ್ದಾರೆ. ಇದು 2017ರ ಮಾರ್ಚ್ ನಿಂದ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ನಡೆದ ಘಟನೆಗಳಾಗಿವೆ ಎಂದು ಅಂಕಿ-ಅಂಶ ಸಹಿತ ವಿವರಿಸಿದೆ.
ಸುಮಾರು 17,745 ಕ್ರಿಮಿನಲ್ಸ್ ಗಳು ಶರಣಾಗಿದ್ದಾರೆ ಅಥವಾ ಅವರ ಜಾಮೀನನ್ನು ತಿರಸ್ಕರಿಸುವ ಮೂಲಕ ಜೈಲುಶಿಕ್ಷೆ ಅನುಭವಿಸುವಂತೆ ಕ್ರಮ ಕೈಗೊಳ್ಳಲಾಗಿದೆ. ಈ ಹಿಂದಿನ ಸರ್ಕಾರದ ಅವಧಿಯಲ್ಲಿ ಉತ್ತರಪ್ರದೇಶ ಜಂಗಲ್ ರಾಜ್ ಆಗಿತ್ತು ಎಂದು ಉತ್ತರಪ್ರದೇಶ ಪೊಲೀಸರು ತಿರುಗೇಟು ನೀಡಿದ್ದಾರೆ.